ಹರಿಹರ(ಮಾ.05): ಕುರುಬ ಸಮುದಾಯದ ಬಹುದೊಡ್ಡ ಬೇಡಿಕೆಯಾದ ಪರಿಶಿಷ್ಟಪಂಗಡ (ಎಸ್‌ಟಿ) ಮೀಸಲಾತಿಯನ್ನು ಆದಷ್ಟುಬೇಗ ಸಾಕಾರಗೊಳಿಸಲು ಶ್ರಮಿಸಲಾಗುವುದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ, ಹುತಾತ್ಮರಾದ ಸ್ಥಳದ ಅಭಿವೃದ್ಧಿಗೆ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಶೀಘ್ರ .30 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದ ಶ್ರೀ ಕನಕ ಗುರುಪೀಠದ ಶಾಖಾ ಮಠದಲ್ಲಿ ಭಾನುವಾರ ಹಾಸ್ಟೆಲ್‌, ಸಮುದಾಯ ಭವನ, ಮುಖ್ಯ ಮಹಾದ್ವಾರ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ ಈ ಭರವಸೆ ನೀಡಿದರು. ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಲಾಗಿದೆ. ಅನೇಕ ರಾಜ್ಯಗಳೂ ಇದೇ ರೀತಿ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿವೆ. ಸಂವಿಧಾನಬದ್ಧವಾಗಿ, ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿಸಿದರೆ ಅವಕಾಶ ವಂಚಿತ ಸಮುದಾಯ, ಸಮಾಜಗಳಿಗೂ ನ್ಯಾಯ ಕೊಟ್ಟಂತಾಗುತ್ತದೆಂಬುದರ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಆದಷ್ಟು ಬೇಗ ಕುರುಬರು ಎಸ್‌ಟಿಗೆ:

ಪರಿಶಿಷ್ಟಪಂಗಡಕ್ಕೆ ಕುರುಬರನ್ನು ಸೇರಿಸಬೇಕೆಂದು ಕಾಗಿನೆಲೆ ಶ್ರೀಗಳು, ಹೊಸದುರ್ಗ ಶ್ರೀಗಳು, ಸಮಾಜದ ಸಚಿವರು, ಶಾಸಕರು, ನಾಯಕರು ಈಗಾಗಲೇ ಹೋರಾಟ ನಡೆಸಿ, ಪಾದಯಾತ್ರೆ ಸಹ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಕುಲಶಾಸ್ತ್ರ ಅಧ್ಯಯನ ಕಾರ್ಯವೂ ಆಗಿದೆ. ಆದಷ್ಟುಬೇಗ ಈ ಬೇಡಿಕೆ ಈಡೇರಿಸಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಇದೇ ವೇಳೆ ಶ್ರೀಗಳ ಆಶಯದಂತೆ ಹೊಸದುರ್ಗದಲ್ಲಿ ಕನಕದಾಸರ ವಿಶಾಲ ಪುತ್ಥಳಿ ನಿರ್ಮಾಣಕ್ಕೆ .5 ಕೋಟಿ ಅನುದಾನ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದೂ ಭರವಸೆ ನೀಡಿದರು.

ಖುಷಿಯಾಗುವ ಸಂದೇಶ ನೀಡಿ-ಶ್ರೀ:

ಸಾನ್ನಿಧ್ಯ ವಹಿಸಿದ್ದ ಶ್ರೀ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಕುರುಬರಿಗೆ ಎಸ್ಟಿಮೀಸಲು ನೀಡುವಂತೆ ನಾವು ಸಿಎಂ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿಲ್ಲ. ಸರ್ಕಾರ ಮೀಸಲಾತಿ ಕಲ್ಪಿಸುವ ಭರವಸೆ ಇದೆ. ಮುಖ್ಯಮಂತ್ರಿ ಮಾತಿಗಾಗಿ ಅಖಂಡ ಕುರುಬ ಸಮಾಜವೇ ಕಾಯುತ್ತಿದೆ ಎಂದರು.

ಈಗ್ಯಾಕೆ ಅದೆಲ್ಲ ಚರ್ಚೆ, ಬಿಟ್ಟುಬಿಡಿ:

ಇದಕ್ಕೂ ಮುನ್ನ ಕಾಗಿನೆಲೆ ಪೀಠದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಡಿಯೂರಪ್ಪ ಅವರಿಗೆ ರಾಜ್ಯಪಾಲರಿಗೆ ಈಶ್ವರಪ್ಪ ಬರೆದ ಪತ್ರ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ‘ಅದ್ಯಾಕೆ ಚರ್ಚೆ ಮಾಡುತ್ತೀರಿ, ಬಿಟ್ಟುಬಿಡಿ’ ಎಂದು ಸಿಡಿಮಿಡಿಗೊಂಡು ಮುಂದೆ ಸಾಗಿದರು.

ಬಿಎಸ್‌ವೈಗೆ ಈಶ್ವರಪ್ಪ ಹೊಗಳಿಕೆ!

ರಾಜ್ಯದಲ್ಲಿ ಕನಕದಾಸರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆರಂಭಿಸಿದ್ದೇ ಬಿಜೆಪಿ ಸರ್ಕಾರ. ರೈತರ ಕಣ್ಮಣಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಕನಕದಾಸರ ಜಯಂತಿಗೆ ಅವಕಾಶ ಮಾಡಿಕೊಟ್ಟಿದ್ದನ್ನು ನಾವ್ಯಾರೂ ಮರೆಯುವಂತಿಲ್ಲ.

- ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ಅಕ್ಕಪಕ್ಕದಲ್ಲೇ ಇದ್ದರೂ ಸಿಎಂ, ಈಶ್ವರಪ್ಪ ಮಾತಿಲ್ಲ

ದಾವಣಗೆರೆ: ರಾಜ್ಯಪಾಲರಿಗೆ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಪತ್ರ ಬರೆದ ನಂತರ ಭಾನುವಾರ ಮೊದಲ ಬಾರಿ ಇಬ್ಬರೂ ಹರಿಹರದ ಮಠದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆದರೆ, ಅಕ್ಕಪಕ್ಕ ಇದ್ದರೂ ಒಮ್ಮೆಯೂ ಮಾತನಾಡಲಿಲ್ಲ. ಯಡಿಯೂರಪ್ಪ ವೇದಿಕೆಗೆ ಆಗಮಿಸಿದಾಗ ಈಶ್ವರಪ್ಪ ತಮ್ಮಷ್ಟಕ್ಕೆ ಕುಳಿತಿದ್ದರು. ಕುರುಬ ಸಮುದಾಯದ ಮುಖಂಡನಾಗಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲೂ ಇಲ್ಲ. ಸಿಎಂ ತಮ್ಮ ಹತ್ತಿರವೇ ಬಂದಾಗ ಈಶ್ವರಪ್ಪ ನಮಸ್ಕಾರ ಮಾಡಿ ಇನ್ನೊಂದು ಕಡೆ ಸರಿದರು.