ಬೆಂಗಳೂರು[ಫೆ.05]: ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಾರದ ಕಾರಣಕ್ಕಾಗಿ ಮತ್ತು ರಾಜ್ಯದ ಆದಾಯವೂ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಡಿಮೆ ಅನುದಾನದ ಬೇಡಿಕೆ ಸಲ್ಲಿಸುವಂತೆ ಹಣಕಾಸು ಇಲಾಖೆಯು ಸೂಚಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಇದರ ಅನುಷ್ಠಾನ ಸಾಧ್ಯವಿಲ್ಲ. ಈ ಬಗ್ಗೆ ಬಜೆಟ್‌ ಪೂರ್ವ ಸಮಾಲೋಚನೆ ಸಭೆಯಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅನುದಾನ ಕಡಿತಗೊಳಿಸದಂತೆ ಮನವೊಲಿಕೆ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರನ್ನೊಳಗೊಂಡ ಉನ್ನತಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಬೇರೆ ಇಲಾಖೆಯಂತೆ ನಮಗೂ ಅನುದಾನ ಕಡಿಮೆ ಮಾಡಿದರೆ ಕಾರ್ಯಚಟುವಟಿಕೆ ಕುಂಠಿತವಾಗುತ್ತದೆ. ಈಗಿರುವ ಅನುದಾನವೇ ಕಡಿಮೆ ಇದೆ. ನಮ್ಮ ಇಲಾಖೆಯ ವಾರ್ಷಿಕ ಅನುದಾನ ಲೋಕೋಪಯೋಗಿ ಇಲಾಖೆಯ ಒಂದು ದಿನದ ಬಿಲ್‌ಗಿಂತಲೂ ಕಡಿಮೆ ಇದೆ. ನಮಗೆ ಕಡಿಮೆ ಅನುದಾನದ ಬೇಡಿಕೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಶೇ.30ರಷ್ಟುಅನುದಾನ ಕಡಿತಗೊಳಿಸುವಂತೆ ಹಣಕಾಸು ಇಲಾಖೆ ಸೂಚನೆ ನೀಡಿದೆ. ಅದು ಸಾಧ್ಯವಿಲ್ಲ ಎಂದು ಹೇಳಿದರು.

2018-19ನೇ ಸಾಲಿನಲ್ಲಿ ವಿವಿಧ ಟ್ರಸ್ಟ್‌ಗಳಿಗೆ ಅನುದಾನ ಮತ್ತು ಪ್ರಾಯೋಜಕತ್ವ ಸ್ಥಗಿತಗೊಳಿಸಲಾಗಿತ್ತು. ಈಗ ವಿವಿಧ ಸಂಘ-ಸಂಸ್ಥೆಗಳು ಸರ್ಕಾರದಿಂದ ಬರುತ್ತಿರುವ ಅನುದಾನ ಸಾಕಾಗುತ್ತಿಲ್ಲ ಎಂದು ಹೇಳಿವೆ. ಹೀಗಾಗಿ ಅನುದಾನ ಪರಿಷ್ಕರಣೆಗಾಗಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು. ಕೇಂದ್ರದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ. ರಾಜ್ಯದ ಆದಾಯವೂ ಕಡಿಮೆಯಾಗಿದೆ. ಈ ಕಾರಣಕ್ಕಾಗಿ ವಿವಿಧ ಇಲಾಖೆಗಳ ಅನುದಾನ ಕಡಿತಗೊಳಿಸಲು ಸರ್ಕಾರ ಉದ್ದೇಶಿಸಿದೆ. ಫೆ.12ರಂದು ಮುಖ್ಯಮಂತ್ರಿ ಬಜೆಟ್‌ ಪೂರ್ವ ಸಮಾಲೋಚನಾ ಸಭೆ ಕರೆದಿದ್ದು, ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಕಡಿತಗೊಳಿಸದಂತೆ ಮುಖ್ಯಮಂತ್ರಿಗಳ ಮನವೊಲಿಕೆ ಮಾಡಲಾಗುವುದು. ಅಗತ್ಯಬಿದ್ದರೆ ಸಾಹಿತಿಗಳ, ಕಲಾವಿದರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯಲಾಗುವುದು ಎಂದು ನುಡಿದರು.

ನಿರ್ಲಕ್ಷಿತ ಸ್ಮಾರಕ ಮತ್ತು ಹಳೆಯ ಕಲ್ಯಾಣಿಗಳ ಸಂರಕ್ಷಣೆಗಾಗಿ ಸಂರಕ್ಷಣಾ ಯೋಜನೆ ಸ್ಥಾಪನೆ ಮಾಡಲಾಗಿದೆ. ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ ಸಹಯೋಗದೊಂದಿಗೆ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಸಂರಕ್ಷಣೆ ನಂತರ ಖಾಸಗಿ ನಿರ್ವಹಣೆಗೆ ವಹಿಸುವ ಚಿಂತನೆ ನಡೆದಿದೆ ಎಂದರು.

ಹಿಂದೆ ಇಲಾಖೆಯ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಆಡಳಿತಾವಧಿಯಲ್ಲಿ ಕೆಲವು ಟ್ರಸ್ಟ್‌ಗಳನ್ನು ಲೆಟರ್‌ ಹೆಡ್‌ ಟ್ರಸ್ಟ್‌ಗಳೆಂದು ಹೇಳಿ ಅನುದಾನ ಕಡಿತಗೊಳಿಸಿದ್ದರು. ಅದನ್ನು ಲೆಕ್ಕಪರಿಶೋಧನೆ ಮಾಡಿಸಲು ನಿರ್ಧರಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನೋಂದಾಯಿಸಿಕೊಂಡ ಮೇಲೆ ಅನುದಾನ ನೀಡದಿರುವುದು ಸರಿಯಲ್ಲ ಎಂದು ಇದೇ ವೇಳೆ ಸಚಿವರು ಅಭಿಪ್ರಾಯಪಟ್ಟರು.

ಜಾಗ ಗುರುತು:

ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರಕ್ಕಾಗಿ ಮೈಸೂರಿನ ವಿಜಯಶ್ರೀ ಬಡಾವಣೆಯಲ್ಲಿ ಮೂರು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಕೇಂದ್ರಕ್ಕೆ ಅಗತ್ಯ ಇರುವ ದಾಖಲೆಗಳನ್ನು ಶೀಘ್ರದಲ್ಲಿಯೇ ಸಲ್ಲಿಸಲಾಗುವುದು ಎಂದು ಸಚಿವ ರವಿ ಮಾಹಿತಿ ನೀಡಿದರು.

ಮೈಸೂರು ವಿಶ್ವವಿದ್ಯಾಲಯವು ಮೂರು ಎಕರೆ ಜಮೀನು ನೀಡಿದೆ. ಮುಂದಿನ 10 ದಿನದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಲಾಗುವುದು ಎಂದರು.

ಸಮ್ಮೇಳನಕ್ಕೆ ಹಣದ ಕೊರತೆ ಇಲ್ಲ

ಕಲಬುರಗಿಯಲ್ಲಿ ಬುಧವಾರದಿಂದ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಣದ ಕೊರತೆ ಇಲ್ಲ ಎಂದು ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದರು.

ಜಿಲ್ಲಾಡಳಿತಕ್ಕೆ 10 ಕೋಟಿ ರು. ವಿಶೇಷ ಅನುದಾನ ನೀಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಒಂದು ಕೋಟಿ ರು. ನೀಡಿದೆ. ಕಲಬುರಗಿ ಜಿಲ್ಲೆಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡಿದ್ದಾರೆ. ಅದು ಸುಮಾರು 3 ಕೋಟಿ ರು. ಆಗಿದೆ. ಅಲ್ಲದೇ, ಸಂಘ-ಸಂಸ್ಥೆಗಳು ಸಹ ಆರ್ಥಿಕ ನೆರವು ನೀಡಿವೆ. ಹೀಗಾಗಿ ಸಮ್ಮೇಳನಕ್ಕೆ ಹಣ ಕೊರತೆ ಇಲ್ಲ. ಅಲ್ಲದೇ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕಾರವಾದ ನಿರ್ಣಯಗಳಲ್ಲಿ ಕಾರ್ಯ ಸಾಧ್ಯವಾಗುವ ಎಲ್ಲಾ ನಿರ್ಣಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.