ಬೆಂಗಳೂರು(ಜೂ.03): ಎಲ್ಲ ರೀತಿಯ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ನೀಡಲಾಗಿದ್ದ ಷರತ್ತು ಬದ್ಧ ಅನುಮತಿಯನ್ನು ಜೂನ್‌ 30ರವರೆಗೆ ವಿಸ್ತರಿಸಿರುವ ಅಬಕಾರಿ ಇಲಾಖೆ, ರಾತ್ರಿ 9 ಗಂಟೆ ವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೇ 2ರಿಂದ ಹಂತ ಹಂತವಾಗಿ ಎಲ್ಲ ರೀತಿಯ ಮದ್ಯದಂಗಡಿಗಳಲ್ಲೂ ಬೆಳಗ್ಗೆ 9ರಿಂದ ಸಂಜೆ 7 ಗಂಟೆ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಾ ಬಂದಿತ್ತು. ಜೂ.1ರಂದ ಜಾರಿಯಾದ ಲಾಕ್‌ಡೌನ್‌ 5.0 ಮಾರ್ಗಸೂಚಿ ಬಳಿಕ ಸರ್ಕಾರ ರಾಜ್ಯದಲ್ಲಿ ಕಫä್ರ್ಯ ಅವಧಿಯನ್ನು ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗೆ ಸೀಮಿತಗೊಳಿಸಿದ್ದರಿಂದ ಅಬಕಾರಿ ಇಲಾಖೆಯು ಈವರೆಗೆ ಮದ್ಯ ಮಾರಾಟಕ್ಕೆ ಇದ್ದ ಬೆಳಗ್ಗೆ 9ರಿಂದ ರಾತ್ರಿ 7 ಗಂಟೆವರೆಗಿನ ಅವಧಿಯನ್ನು ರಾತ್ರಿ 9 ಗಂಟೆವರೆಗೆ ವಿಸ್ತರಿಸಿದೆ. ಉಳಿದಂತೆ ಮದ್ಯದಂಗಡಿಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೋನಾ ನಿಯಂತ್ರಣದ ನಿಯಮಾವಳಿಗಳನ್ನು ಅನುಸರಿಸುವುದು ಸೇರಿದಂತೆ ಹಿಂದಿನ ಆದೇಶದ ಎಲ್ಲ ಷರತ್ತುಗಳು ಮುಂದುವರೆಯಲಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬಿಯರ್‌ ಉತ್ಪಾದನೆಗೂ ಅವಕಾಶ:

ಸಣ್ಣ ಪ್ರಮಾಣದ ಬಿಯರ್‌ ಉತ್ಪಾದಕರು ಇನ್ನು ಮುಂದೆ ಹೊಸದಾಗಿ ಬಿಯರ್‌ ಉತ್ಪಾದನೆ ಮಾಡಬಹುದು ಎಂದು ಕೂಡ ಅಬಕಾರಿ ಇಲಾಖೆ ಆಯುಕ್ತರು ಆದೇಶ ಮಾಡಿದ್ದಾರೆ.

ಮೇ 31ರವರೆಗೂ ಈಗಾಗಲೇ ಉತ್ಪಾದನೆ ಮಾಡಿಟ್ಟುಕೊಂಡಿದ್ದ ಬಿಯರ್‌ ಮಾತ್ರ ಮಾರಾಟ ಮಾಡಲು ಸಣ್ಣ ಪ್ರಮಾಣದ ಬಿಯರ್‌ ಉತ್ಪಾದಕರಿಗೆ ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ಹೊಸದಾಗಿ ಬಿಯರ್‌ ಉತ್ಪಾದಿಸಲೂ ಅವಕಾಶ ನೀಡಲಾಗಿದೆ. ಜೊತೆಗೆ, ಈ ಉತ್ಪಾದಕರು ಗ್ಲಾಸ್‌, ಕಂಟೈನರ್‌, ಸೆರಾಮಿಕ್ಸ್‌ಗಳಲ್ಲಿ 2 ಲೀಟರ್‌ ಮೀರದಂತೆ ಬಿಯರ್‌ ಮಾರಾಟ ಮಾಡಲು ಅನುಮತಿ ನೀಡುವಂತೆ ಇಲಾಖೆಯ ಎಲ್ಲಾ ಉಪ ಆಯುಕ್ತರಿಗೆ ಸೂಚನೆ ನೀಡಲಾಗಿದೆ.