ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು[ಜ.16]: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ನೂರಾರು ಕೋಟಿ ರುಪಾಯಿ ಆಸ್ತಿ ತೆರಿಗೆ ಹಾಗೂ ಸೇವಾ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದರೂ ವಸೂಲಿ ಮಾಡಲಾಗದ ಸ್ಥಿತಿ ಎದುರಿಸುತ್ತಿದೆ.

ತೆರಿಗೆ, ಸೇವಾ ಶುಲ್ಕ ಬಾಕಿ ಉಳಿಸಿಕೊಂಡಿರುವ ಖಾಸಗಿ ಆಸ್ತಿಗಳ ಮಾಲಿಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸರ್ಕಾರಿ ಇಲಾಖೆ, ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲು ಆಗುತ್ತಿಲ್ಲ. ಇಂದಲ್ಲಾ ನಾಳೆ ತೆರಿಗೆ ಬಂದೇ ಬರುತ್ತದೆ ಎಂಬ ಕಾರಣದ ಜೊತೆಗೆ ಸರ್ಕಾರಗಳು ಇಲಾಖೆಗೆ ನಿಗದಿಪಡಿಸಿದ ಅನುದಾನ ಬಿಡುಗಡೆ ಮಾಡದ ಕಾರಣ ನೂರು ಕೋಟಿಗಿಂತ ಹೆಚ್ಚು ತೆರಿಗೆ ಬಾಕಿ ಉಳಿದಿದೆ.

ಬಿಬಿಎಂಪಿಗೆ ಹಲವಾರು ವರ್ಷದಿಂದ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡ ಖಾಸಗಿ ಮಾಲಿಕತ್ವದ ಆಸ್ತಿ, ಕಂಪನಿ, ಕೈಗಾರಿಕೆ, ಸಂಘ- ಸಂಸ್ಥೆಗಳ ಆಸ್ತಿ ಜಪ್ತಿ ಮಾಡುವುದಕ್ಕೆ ಬಿಬಿಎಂಪಿ ಕಂದಾಯ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ನಗರದ ವಿವಿಧ ಭಾಗದಲ್ಲಿ ಆಸ್ತಿ ಮಾಲಿಕರಿಗೆ ವಾರೆಂಟ್‌ ನೀಡಿ ಜಪ್ತಿ ಕಾರ್ಯ ನಡೆಸುತ್ತಿದ್ದಾರೆ. ಆದರೆ, ನಗರದಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಕಟ್ಟಡ, ನಿವೇಶನದ ನೂರಾರು ಆಸ್ತಿಗಳಿಂದ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ರೂಪದಲ್ಲಿ ಕೋಟ್ಯಂತರ ರು. ಬಿಬಿಎಂಪಿಗೆ ಆದಾಯ ಬರಬೇಕಿದೆ.

ಬಿಬಿಎಂಪಿಯಲ್ಲೂ ವರ್ಗಾವಣೆ ನೀತಿ ಜಾರಿ..?

121 ಕೋಟಿ ಬಾಕಿ:

ಬಿಬಿಎಂಪಿಯ ಎಂಟು ವಲಯದಲ್ಲಿ ಒಟ್ಟು 407 ಸರ್ಕಾರಿ ಆಸ್ತಿಗಳಿವೆ. ಈ ಆಸ್ತಿಗಳಿಂದ ಬಿಬಿಎಂಪಿಗೆ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ರೂಪದಲ್ಲಿ ಬರೋಬ್ಬರಿ .121.41 ಕೋಟಿ ಆದಾಯ ಬರಬೇಕಿದೆ. ಸರ್ಕಾರಿ ಇಲಾಖೆಯ ಆಸ್ತಿ ಆಗಿರುವುದರಿಂದ ಶೇ.25ರಷ್ಟುಮಾತ್ರ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ನಿಗದಿ ಪಡಿಸಿದೆ. ಆದರೂ ಸರ್ಕಾರಿ ಇಲಾಖೆಗಳು ಹತ್ತಾರು ವರ್ಷದಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಹಾಗೂ ಸೇವಾ ಶುಲ್ಕ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿವೆ.

ಅನುದಾನ ಕೊರತೆ ಸಬೂಬು:

ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ಪಾವತಿ ಮಾಡದೇ ಸರ್ಕಾರಿ ಇಲಾಖೆಯ ಮುಖ್ಯಸ್ಥರಿಗೆ ಬಿಬಿಎಂಪಿ ಅಧಿಕಾರಿಗಳು ಪತ್ರದ ಬರೆಯಲಾಗಿದೆ. ಆದರೆ, ತೆರಿಗೆ ಬಾಕಿ ಉಳಿಸಿಕೊಂಡ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಅನುದಾನದ ಕೊರತೆ ಇದೆ. ಅನುದಾನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂಬ ಸಬೂಬು ಹೇಳುತ್ತಾರೆ. ಹೀಗಾಗಿ ಖಾಸಗಿ ಆಸ್ತಿಗಳ ರೀತಿ ಜಪ್ತಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶೀಘ್ರ ಕಟ್ಟಡ ನೆಲಸಮ ಪ್ರಕ್ರಿಯೆ ಆರಂಭ

ಪೂರ್ವ ವಲಯದಲ್ಲಿಯೇ ಅತಿ ಹೆಚ್ಚು ಬಾಕಿ:

ಪಾಲಿಕೆಯ ಎಂಟು ವಲಯಗಳ ಪೈಕಿ ಪೂರ್ವ ವಲಯದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಆಸ್ತಿ ತೆರಿಗೆ ಹಾಗೂ ಸೇವಾ ಶುಲ್ಕವನ್ನು ಸರ್ಕಾರಿ ಇಲಾಖೆಗಳು ಬಾಕಿ ಉಳಿಸಿಕೊಂಡಿವೆ. ಈ ವಲಯದಲ್ಲಿ ಒಟ್ಟು 161 ಸರ್ಕಾರಿ ಆಸ್ತಿಗಳಿದ್ದು, .53 ಕೋಟಿ ತೆರಿಗೆ ಬಾಕಿ ಉಳಿದಿದೆ.