Asianet Suvarna News Asianet Suvarna News

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಗೋವಿಂದರಾಜು, ನಜೀರ್‌ ನೇಮಕ

ಮೂವರಿಗೂ ಸಂಪುಟ ದರ್ಜೆ ಸಚಿವರ ಸ್ಥಾನಮಾನಗಳೊಂದಿಗೆ ಎಲ್ಲ ಸೌಲಭ್ಯಗಳನ್ನೂ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಕೆ.ಗೋವಿಂದರಾಜು ಅವರು ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದರು.

Govindaraju Nazir Appointed as Political Secretary to CM Siddaramaiah grg
Author
First Published Jun 2, 2023, 8:28 AM IST

ಬೆಂಗಳೂರು(ಜೂ.02):  ವಿಧಾನಪರಿಷತ್‌ ಸದಸ್ಯರಾದ ಕೆ.ಗೋವಿಂದರಾಜು ಮತ್ತು ನಜೀರ್‌ ಅಹ್ಮದ್‌ ಅವರನ್ನು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಿಸಿ ಸರ್ಕಾರ ಗುರುವಾರ ಆದೇಶಿಸಿದೆ. ಅಲ್ಲದೆ, ಕಾಂಗ್ರೆಸ್‌ನ ಚುನಾವಣಾ ನೀತಿ ತಂತ್ರಜ್ಞ ಸುನೀಲ್‌ ಕನುಗೋಲು ಅವರನ್ನು ಮುಖ್ಯಮಂತ್ರಿ ಅವರ ಮುಖ್ಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ.

ಈ ಮೂವರಿಗೂ ಸಂಪುಟ ದರ್ಜೆ ಸಚಿವರ ಸ್ಥಾನಮಾನಗಳೊಂದಿಗೆ ಎಲ್ಲ ಸೌಲಭ್ಯಗಳನ್ನೂ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಕೆ.ಗೋವಿಂದರಾಜು ಅವರು ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದರು.

ಸಿಎಂ ಪ್ರಧಾನ ಸಲಹೆಗಾರನಾಗಿ ಕನುಗೋಲು ನೇಮಕ

ಎ.ಎಸ್‌.ಪೊನ್ನಣ್ಣ ಮುಖ್ಯಮಂತ್ರಿ ಕಾನೂನು ಸಲಹೆಗಾರ

ಮಡಿಕೇರಿ: ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನೇಮಕ ಮಾಡಿ ಸಂಪುಟ ದರ್ಜೆಯ ಸ್ಥಾನಮಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 25 ವರ್ಷಗಳ ಬಳಿಕ ಗೆಲವು ಸಾಧಿಸಿದ್ದು, ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹಲವು ಸಂಘಟನೆಗಳು ಆಗ್ರಹಿಸಿದ್ದರು.

ಆದರೆ ಹೊಸ ಶಾಸಕರಾದ ಕಾರಣ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ತಾಣದಲ್ಲಿ ಸ್ಪಷ್ಟನೆ ನೀಡಿದ್ದರು. ಸಚಿವ ಸ್ಥಾನ ನೀಡದಿದ್ದರೂ ಕೂಡ ಎ.ಎಸ್‌. ಪೊನ್ನಣ್ಣ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನೇಮಕ ಮಾಡಿರುವುದು ಜಿಲ್ಲೆಯ ಕಾಂಗ್ರೆಸ್‌ ಪಾಳಯದಲ್ಲಿ ಸಂಭ್ರಮ ಮೂಡಿಸಿದೆ.

ಎ.ಕೆ.ಸುಬ್ಬಯ್ಯರ ಪುತ್ರ ನಡೆದು ಬಂದ ಹಾದಿ:

ಎ.ಎಸ್‌. ಪೊನ್ನಣ್ಣ ದಕ್ಷಿಣ ಕೊಡಗಿನ ಬೆಳ್ಳೂರು ಗ್ರಾಮದವರು. ಕಳೆದ ಎರಡು ವರ್ಷಗಳಿಂದ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. 1974 ಜು.9ರಂದು ಎ.ಕೆ. ಸುಬ್ಬಯ್ಯ - ಪೊನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಹೈದರಾಬಾದ್‌ ಕರ್ನಾಟಕ ಎಜುಕೇಶನ್‌ ಸೊಸೈಟಿಯಲ್ಲಿ ಪಿಯುಸಿ, ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಮಾಡಿದ್ದಾರೆ. ಪೊನ್ನಣ್ಣ 1997ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು.

ಪೊನ್ನಣ್ಣ 2013 ರಲ್ಲಿ ಮುಖ್ಯ ಸರ್ಕಾರಿ ವಕೀಲರಾಗಿ ನೇಮಕಗೊಂಡರು. ಜು.9, 2014 ರಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ನೇಮಕಗೊಂಡರು. 2018 ರಲ್ಲಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ನೇಮಕಗೊಂಡರು.
ನವೆಂಬರ್‌ 2018ರಲ್ಲಿ ಕರ್ನಾಟಕ ಹೈಕೋರ್ಚ್‌ನಿಂದ ಗೊತ್ತುಪಡಿಸಿದ ಹಿರಿಯ ವಕೀಲರಾಗಿ ನೇಮಕಗೊಂಡರು. 2020ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ಸೆಲ್‌ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. 2020ರಲ್ಲಿ ಕಾಂಗ್ರೆಸ್‌ ವಕ್ತಾರರಾದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಾಗೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಆರಂಭಿಕ ಅವಧಿಯಲ್ಲಿ ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಖಾಸಗಿ ವಕಾಲತ್ತು ಅಭ್ಯಾಸವನ್ನು ಪ್ರಾರಂಭಿಸಲು 2018 ಏಪ್ರಿಲ್‌ನಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ಕೋಶದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದರು. ಆ ನಂತರ ಕಾಂಗ್ರೆಸ್‌ ಪಕ್ಷದ ಅಧಿಕೃತ ವಕ್ತಾರನಾಗಿಯೂ ನೇಮಿಸಲಾಯಿತು. ಹಿರಿಯ ಸಲಹೆಗಾರನಾಗಿ ನೇಮಕಗೊಳ್ಳುವ ಮೊದಲು ಎಕೆಎಸ್‌ ಲೀಗಲ್‌ ಹೆಸರಿನಲ್ಲಿ ಕಾನೂನು ಸಂಸ್ಥೆ ಸ್ಥಾಪಿಸಿದ್ದಾರೆ.

ಸಮಾಜ ಸೇವೆಯಲ್ಲಿ ಮುಂದು:

ಪೊನ್ನಣ್ಣ ಅವರು ಸಮಾಜ ಸೇವೆಯಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೊಡಗಿಗೆ ಬಂದು ನೆಲೆಸಿರುವ ಪೊನ್ನಣ್ಣ ಅವರು ಎ.ಕೆ. ಸುಬ್ಬಯ್ಯ ಪೊನ್ನಮ್ಮ ಶೈಕ್ಷಣಿಕ ಮತ್ತು ಚಾರಿಟಬಲ್‌ ಶೈಕ್ಷಣಿಕ ಮತ್ತು ಚಾರಿಟಬಲ್‌ ಟ್ರಸ್ಟ್‌ ಸ್ಥಾಪಿಸಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಕರಾವಳಿಯ ಖಾಸಗಿ ಬಸ್‌ಗಳಲ್ಲೂ ಉಚಿತ ‘ಗ್ಯಾರಂಟಿ’ಗೆ ಸುನಿಲ್‌ ಆಗ್ರಹ

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಪರೋಪಕಾರಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಸುಮಾರು 10 ಸಾವಿರ ಮಂದಿಗೆ ಕೋವಿಡ್‌ ಸಂದರ್ಭದಲ್ಲಿ ಕಿಟ್‌ ವಿತರಣೆ ಮಾಡಿದ್ದರು. ಅಲ್ಲದೆ ಹಲವು ದೇವಾಲಯಗಳಿಗೆ ಹಣ, ಕ್ರೀಡಾಕೂಟಕ್ಕೆ ಪ್ರೋತ್ಸಾಹ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ಕಾನೂನು ಹೋರಾಟದ ಮೂಲಕ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿದ ಕೀರ್ತಿ ಪೊನ್ನಣ್ಣ ಅವರದ್ದು.
ಕೂಗ್‌ರ್‍ ಬೈ ರೇಸ್‌ ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಪರವಾನಗಿ ವಿನಾಯಿತಿ ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ನಡೆದ ಕಲಾಪದಲ್ಲಿ ಸಮರ್ಥವಾಗಿ ವಾದ ಮಂಡಿ ಜಿಲ್ಲೆಯ ಜನರ ಪರ ತೀರ್ಪನ್ನು ಕೊಡಿಸುವಲ್ಲಿ ಸಫಲರಾದರು. ಕೊಡವ ಜನಾಂಗದ ಕುಲಶಾಸ್ತ್ರ ಅಧ್ಯಯನಕ್ಕೆ 2016ರಲ್ಲಿ ನೀಡಿದ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿ ನಡೆಸುತ್ತಿದ್ದ ಅಧ್ಯಯನವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಯಶಸ್ಸು ಕಂಡಿದ್ದಾರೆ. ಅಮ್ಮತ್ತಿಯಲ್ಲಿರುವ ಅಮೆರಿಕನ್‌ ಆಸ್ಪತ್ರೆಗೆ ರು.6.5 ಲಕ್ಷ ಮೌಲ್ಯದ ಡಯಾಲಿಸಿಸ್‌ ಯಂತ್ರ ಕೊಡುಗೆಯಾಗಿ ನೀಡಿದ್ದಾರೆ. ಇದಲ್ಲದೆ ಸಾಕಷ್ಟು ಮಂದಿಗೆ ಆರೋಗ್ಯ ಸುಧಾರಣೆಗೆ ಆರ್ಥಿಕ ನೆರವು ನೀಡಿದ್ದಾರೆ.

ಕೊಡಗಿಗೆ ಹಲವು ನಿರೀಕ್ಷೆ

ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನೇಮಕ ಆಗಿರುವುದರಿಂದ ಕೊಡಗಿನ ಜನರಲ್ಲಿ ಹಲವು ನಿರೀಕ್ಷೆ ಮೂಡಿದೆ. ಅವರ ಮೂಲಕ ಜಿಲ್ಲೆಗೆ ವಿಶೇಷ ಯೋಜನೆ ಹಾಗೂ ಅನುದಾನಕ್ಕೆ ಬೇಡಿಕೆ ಇಡಲು ಅವಕಾಶವಿದೆ. ಜಿಲ್ಲೆಯ ಒಬ್ಬ ಶಾಸಕರಿಗಾದರೂ ಈ ಬಾರಿ ಸಚಿವ ಸ್ಥಾನ ದೊರಕಬಹುದೆಂಬ ನಂಬಿಕೆಯಲ್ಲಿದ್ದ ಜನತೆಗೆ ಕಾನೂನು ಸಲಹೆಗಾರರಾಗಿ ಪೊನ್ನಣ್ಣ ಅವರನ್ನು ನೇಮಿಸುವ ಮೂಲಕ ಸಮಾಧಾನ ತರಿಸಿದೆ.

Follow Us:
Download App:
  • android
  • ios