ಬೆಂಗಳೂರು(ಜ.22):  ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತರಿಗೆ ಎರಡು ಜತೆ ಸಮವಸ್ತ್ರ ನೀಡಲು, ಮುಂದಿನ ಐದು ವರ್ಷದಲ್ಲಿ 5.50 ಲಕ್ಷ ಕುಟುಂಬಗಳಿಗೆ ಗೃಹ ಶೌಚಾಲಯ ನಿರ್ಮಿಸಿ ಕೊಡಲು ಹಾಗೂ ಸರ್ಕಾರಿ ನೌಕರರು ಸೇವೆಯಲ್ಲಿ ಮೃತಪಟ್ಟರೆ ಅವರ ಕುಟುಂಬದ ವಿವಾಹಿತ ಹೆಣ್ಣು ಮಕ್ಕಳಿಗೂ ಅನುಕಂಪದ ಮೇಲೆ ಉದ್ಯೋಗ ಕಲ್ಪಿಸುವ ತಿದ್ದುಪಡಿ ನಿಯಮಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ತೆಗೆದುಕೊಂಡ ನಿರ್ಧಾರಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ್‌ ಬೊಮ್ಮಾಯಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ 62580 ಸಹಾಯಕಿಯರು ಮತ್ತು 65911 ಕಾರ್ಯಕರ್ತರಿಗೆ ಎರಡು ಜತೆ ಸೀರೆಗಳನ್ನು ನೀಡಲು ನಿರ್ಧರಿಸಲಾಗಿದ್ದು, ತಲಾ 400 ರು. ಸೀರೆಯ ಮೌಲ್ಯವಾಗಿದೆ. ಇದಕ್ಕೆ 10.27 ಕೋಟಿ ರು. ವೆಚ್ಚವಾಗಲಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇಲಾಖೆಯಲ್ಲಿ ಆರು ಜಂಟಿ ನಿರ್ದೇಶಕರ ಹುದ್ದೆ ಮತ್ತು 38 ಉಪನಿರ್ದೇಶಕ ಹುದ್ದೆಗಳಿದ್ದು, ನಾಲ್ಕು ಜಂಟಿ ನಿರ್ದೇಶಕ ಹುದ್ದೆಗಳು ಮತ್ತು 19 ಉಪನಿರ್ದೇಶಕ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಭರ್ತಿಗೆ ಕನಿಷ್ಠ 3 ವರ್ಷ ಸೇವಾನುಭವ ಇರಬೇಕು ಎಂಬ ನಿಯಮ ಇದೆ. ಆದರೆ, ಪ್ರಸ್ತುತ ಮೂರು ವರ್ಷ ಸೇವಾನುಭವ ಇರುವವರು ಇಲ್ಲದ ಕಾರಣಕ್ಕಾಗಿ ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ. ಒಂದು ವರ್ಷ ಸೇವಾನುಭವ ಇರುವವರನ್ನು ಖಾಲಿ ಇರುವ ಹುದ್ದೆಗೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಅಂಗವಿಕಲರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನ ನೀಡಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. 12.75 ಲಕ್ಷ ರು. ವೆಚ್ಚದಲ್ಲಿ 1500 ಮಂದಿಗೆ ನೀಡಲಾಗುವುದು ಎಂದು ವಿವರಿಸಿದರು.

ಡಿಜಿಟಲ್ ನತ್ತ ಅಂಗನವಾಡಿ ಕೇಂದ್ರಗಳು, ಕಾರ್ಯಕರ್ತೆಯರಿಗೆ ಬಂತು ಸ್ಮಾರ್ಟ್‌ ಫೋನ್‌

ಗ್ರಾಮೀಣಾಭಿವೃದ್ಧಿ ಇಲಾಖೆಯ ಸ್ವಚ್ಛ ಭಾರತ ಮಿಷನ್‌ನ ಎರಡನೇ ಹಂತಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ ಮುಂದಿನ ಐದು ವರ್ಷದಲ್ಲಿ 5.50 ಲಕ್ಷ ಕುಟುಂಬಗಳಿಗೆ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಡಲಾಗುವುದು. ಶೇ.70ರಷ್ಟುಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವು ಭರಿಸಲಿದೆ. ಇನ್ನುಳಿದ ಶೇ.30ರಷ್ಟು ಅನುದಾನವನ್ನು 15ನೇ ಹಣಕಾಸು ಆಯೋಗ ನೀಡಲಿದೆ.

ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮಕ್ಕೆ ದುಡಿಯುವ ಬಂಡವಾಳಕ್ಕಾಗಿ ಸಾಲಕ್ಕೆ ಖಾತರಿ ನೀಡಲು ಒಪ್ಪಿಗೆ ನೀಡಲಾಗಿದೆ. ನಿಗಮ ಈ ಹಿಂದೆ 31 ಕೋಟಿ ರು. ಸಾಲ ಪಡೆದುಕೊಂಡಿದ್ದು, 7 ಕೋಟಿ ರು. ಸಾಲ ತೀರಿಸಿದೆ. ಉಳಿದ 24 ಕೋಟಿ ರು.ಗೆ ಒಂದು ವರ್ಷ ಖಾತರಿ ನೀಡಲು ನಿರ್ಧರಿಸಲಾಗಿದೆ ಎಂದರು.

ರಾಜ್ಯದಲ್ಲಿ ಹೊಸದಾಗಿ ರಚನೆಯಾದ 52 ತಹಶೀಲ್ದಾರ್‌ ಕಚೇರಿ, 30 ಜಿಲ್ಲಾ ತರಬೇತಿ ಕೇಂದ್ರ, 227 ತಾಲೂಕು ಪಂಚಾಯಿತಿ ಕಚೇರಿ ಮತ್ತು ಮೂರು ಪ್ರಾದೇಶಿಕ ಕಚೇರಿಯಲ್ಲಿ ವಿಡಿಯೋ ಸಂವಾದ ನಡೆಸುವ ವ್ಯವಸ್ಥೆಗೆ ಅನುಮೋದನೆ ನೀಡಲಾಗಿದ್ದು, ಇದಕ್ಕಾಗಿ 35 ಕೋಟಿ ರು. ಅನುದಾನಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರ ನೌಕರರು ಮೃತಪಟ್ಟರೆ ಅವರ ಕುಟುಂಬದ ವಿವಾಹಿತ ಹೆಣ್ಣು ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸುವ ತಿದ್ದುಪಡಿ ನಿಯಮಕ್ಕೆ ಅನುಮೋದನೆ ನೀಡಲಾಗಿದೆ ಎಂದರು.