ಕರ್ನೂಲ್ ಬಸ್‌ ಅಗ್ನಿ ಅವಘಡ ಹಿನ್ನೆಲೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಬಸ್ಸುಗಳ ಸುರಕ್ಷತಾ ವ್ಯವಸ್ಥೆ ಆಡಿಟ್‌ ತಪಾಸಣೆ ನಡೆಸುವಂತೆ ಹಾಗೂ ನ್ಯೂನತೆ ಇದ್ದಲ್ಲಿ ನಿರ್ದಾಕ್ಷಿಣ್ಯವಾಗಿ  ಕ್ರಮ ಕೈಗೊಳ್ಳುವಂತೆ   ಸಚಿವ ರಾಮಲಿಂಗಾರೆಡ್ಡಿ ಅವರು ಸೂಚಿಸಿದ್ದಾರೆ.

ಬೆಂಗಳೂರು : ಕರ್ನೂಲ್ ಬಸ್‌ ಅಗ್ನಿ ಅವಘಡ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಬಸ್ಸುಗಳಲ್ಲಿರುವ ಸುರಕ್ಷತಾ ವ್ಯವಸ್ಥೆ ಆಡಿಟ್‌ ತಪಾಸಣೆ ನಡೆಸುವಂತೆ ಹಾಗೂ ನ್ಯೂನತೆ ಇದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚಿಸಿದ್ದಾರೆ.

ಈ ಸಂಬಂಧ ಪರಿಶೀಲನೆಗೆ ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಯ ರಸ್ತೆ ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಹಾಗೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಈ ನಿರ್ದೇಶನ ನೀಡಿದ್ದಾರೆ.

ಪರವಾನಗಿ ರದ್ದತಿಗೆ ಸೂಚನೆ:

ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ. ಖಾಸಗಿ ಬಸ್ಸುಗಳಲ್ಲಿ ಯಾವುದೇ ವಾಣಿಜ್ಯ ಸರಕು ಸಾಗಿಸುವ ಸಂದರ್ಭದಲ್ಲಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಅಥವಾ ಇತರೆ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ನಿಗಾವಹಿಸಬೇಕು. ಎಲ್ಲಾ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿ ಒಡೆಯಲು ಸುತ್ತಿಗೆ ಇರಿಸುವುದು ಕಡ್ಡಾಯ ಮಾಡಬೇಕು. ಲಗೇಜ್ ಸಾಗಣೆ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ‌ ಪರಿಶೀಲನೆ ನಡೆಸಬೇಕು. ಜತೆಗೆ ಅನಧಿಕೃತವಾಗಿ ವಾಹನಗಳ ಮಾರ್ಪಾಡು ಕಂಡು‌ ಬಂದರೆ ಕೂಡಲೇ ಪರವಾನಗಿ ರದ್ದುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಹಿಂದೆ ಸಾರಿಗೆ ಸಚಿವನಾಗಿದ್ದ ವೇಳೆ ಹಾವೇರಿ ಬಳಿ ಜಬ್ಬಾರ್ ಟ್ರಾವೆಲ್ಸ್‌ನ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಪ್ರಯಾಣಿಕರು‌ ಪ್ರಾಣ ಕಳೆದುಕೊಂಡಿದ್ದರು. ಆಗ ರಾಜ್ಯದ ಎಲ್ಲಾ ಸುಮಾರು 50 ಸಾವಿರ ವಾಹನಗಳಲ್ಲಿ (ಸಾರಿಗೆ ಸಂಸ್ಥೆಗಳ ಬಸ್ಸುಗಳು, ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸು, ಖಾಸಗಿ ಟೂರಿಸ್ಟ್ ಬಸ್‌, ಟೆಂಪೋ ಟ್ರಾವೆಲರ್ಸ್‌‌, ಶಾಲಾ ವಾಹನ) ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ಸಮರ್ಪಕವಾಗಿ ದ್ವಾರ ಕೆಲಸ ಮಾಡುತ್ತಿದೆಯೇ ಎಂದು ಪರಿಶೀಲಿಸಲು ಒಂದು ಅಭಿಯಾನ ಕೈಗೆತ್ತಿಕೊಳ್ಳಲಾಗಿತ್ತು. ಆಗ ಹಲವು ಬಸ್ಸುಗಳಲ್ಲಿನ ಲೋಪದೋಷಗಳು ಗಮನಕ್ಕೆ‌‌ ಬಂದು ತುರ್ತು ನಿರ್ಗಮನ ದ್ವಾರಗಳ ಅಳವಡಿಕೆ‌ ಕಡ್ಡಾಯ ಮಾಡಿದ್ದೆವು ಎಂದು ಇದೇ ವೇಳೆ ಅವರು ಹೇಳಿದ್ದಾರೆ.

ಸುರಕ್ಷತೆಗೆ ಸಂಬಂಧಿಸಿ ನ್ಯೂನತೆ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಾಣ ಹಾನಿಯಾದರೆ ಯಾವುದೇ ರೀತಿಯಲ್ಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಈ‌ ಕೂಡಲೇ ಕ್ರಮ ವಹಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಸಚಿವ ರೆಡ್ಡಿ ಸೂಚನೆಗಳು

- ಬಸ್ಸುಗಳಲ್ಲಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಅಥವಾ ಸ್ಫೋಟಕ ವಸ್ತು ಸಾಗಿಸದಂತೆ ನಿಗಾ

- ಎಲ್ಲಾ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿ ಒಡೆಯಲು ಸುತ್ತಿಗೆ ಇರಿಸುವುದು ಕಡ್ಡಾಯ

- ಲಗೇಜ್ ಸಾಗಣೆ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಿಕೊಂಡು ಸಾಗಲು ಅವಕಾಶ ನೀಡಬಾರದು

- ಅನಧಿಕೃತವಾಗಿ ವಾಹನ ಮಾರ್ಪಾಡು ಕಂಡು‌ಬಂದರೆ ಕೂಡಲೇ ಪರವಾನಗಿ ರದ್ದು ಮಾಡಬೇಕು