ಗೋಕಾಕ್(ಜ.30): ಅತೃಪ್ತಿ, ಅಸಮಾಧಾನ, ಕೋಪ, ಬಂಡಾಯ ಇವೆಲ್ಲಾ ಒತ್ತಟ್ಟಿಗಿರಲಿ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನ್ರತಿನಿಧಿಗಳು ಏನಾದರೂ ನಾಟಕವಾಡಲಿ. ಆದರೆ ತಮ್ಮನ್ನು ಆರಿಸಿ ಕಳುಹಿಸಿದ ಕ್ಷೇತ್ರದ ಜನರನ್ನು ಮರೆತವರನ್ನು ಶಾಸಕ ಎಂದು ಕರೆಯುವುದಾದರೂ ಹೇಗೆ ಹೇಳಿ?.

ಗೋಕಾಕ್ ಶಾಸಕರ ಕತೆಯೂ ಹೀಗೆ ಇದೆ. ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದಿರುವ ಈ ಜನಪ್ರಿಯ ಶಾಸಕ, ತಮ್ಮದೇ ನಾಯಕರ ಮೇಲೆ ಮುನಿಸಿಕೊಂಡು ಮುಂಬೈಗೆ ಹೊಗಿ ಕುಳಿತಿದ್ದಾರೆ.

ಕಳೆದೊಂದು ತಿಂಗಳಿನಿಂದ ಮುಂಬೈ ಐಷಾರಾಮಿ ಹೊಟೇಲ್‌ನಲ್ಲಿರುವ ಗೋಕಾಕ್ ಶಾಸಕರು, ಕ್ಷೇತ್ರದ ಜನರನ್ನು ಮರೆತೇ ಹೋಗಿದ್ದಾರೆ. ಎರಡು ದಿನದಲ್ಲಿ ರಾಜೀನಾಮೆ ಕೊಡ್ತಿನಿ ಅಂದಿದ್ದ ಶಾಸಕರು, ಒಂದು ತಿಂಗಳು ಕಳೆದರೂ ಏನೂ ನಿರ್ಧಾರ ಕೈಗೊಳ್ಳದೇ ಮುಂಬೈನಲ್ಲಿ ಮೋಜು ಮಸ್ತಿಯಲ್ಲಿ  ತೊಡಗಿದ್ದಾರೆ.

ಇತ್ತ ತಮ್ಮ ಶಾಸಕರನ್ನು ಕಾಣದೇ ಕ್ಷೇತ್ರದ ಜನ ಕಂಗಾಲಾಗಿದ್ದು, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದೇ ಪರದಾಡುತ್ತಿದ್ದಾರೆ. ಇದೇ ವೇಳೆ ಗೋಕಾಕ್ ಕ್ಷೇತ್ರದ ರೈತರು ಕೂಡ ಕಂಗಾಲಾಗಿದ್ದು, ಶಾಸಕರ ಒಡೆತನದ ಸೌಭಾಗ್ಯ ಲಕ್ಷ್ಮೀ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು ಬಾಕಿ ಹಣ ಕಾಣದೆ ಕಂಗಾಲಾಗಿದ್ದಾರೆ.

ಈ ಕುರಿತು ರೈತರು ಪ್ರತಿಭಟನೆ ಮಾಡಿದರೂ ಕ್ಯಾರೆ ಎನ್ನದ ಶಾಸಕರು, ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ ಹಂಗ್ ಮಾಡ್ತಿನಿ, ಹಿಂಗ್ ಮಾಡ್ತಿನಿ ಅಂತಾ ಕ್ಷಣಕ್ಕೊಂದು ಹೇಳಿಕೆ ಕೊಡುತ್ತಾ ಕಾಲಹರಣ ಮಾಡುತ್ತಿದ್ದಾರೆ.