ಬೆಂಗಳೂರು [ನ.07]: ಬಾರ್ ಹಾಗೂ ಮದ್ಯ ಮಾರಾಟ ಮಳಿಗೆಗಳಿಗೆ ದೇವರ ಹೆಸರು ಇಡುವುದಕ್ಕೆ ನಿಷೇಧ ಹೇರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. 

ಮದ್ಯ ಮಾರಾಟ ಕೇಂದ್ರಗಳ ನಾಮಫಲಕ ಗಳಿಂದ ದೇವರ ಹೆಸರು ತೆರವುಗೊಳಿಸುವ ಬಗ್ಗೆ ಕಾನೂನು ಮತ್ತು ಅಬಕಾರಿ ಇಲಾಖೆಯ ಅಭಿಪ್ರಾಯ ಪಡೆಯುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

ಸಾಕಷ್ಟು ಬಾರ್ ಅಥವಾ ಮದ್ಯ ಮಾರಾಟ ಕೇಂದ್ರಗಳಿಗೆ ಮಹಾ ಗಣಪತಿ, ರಾಘವೇಂದ್ರ, ಮಂಜು ನಾಥ, ವೆಂಕಟೇಶ್ವರ ಎಂಬಿತ್ಯಾದಿ ದೇವರ ಹೆಸರುಗಳನ್ನು ಇಡಲಾಗಿರುತ್ತದೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದರ ಜತೆಗೆ ದೇವರಿಗೆ ಅಗೌರವ ಸೂಚಿಸಿದಂತಾ  ಗುತ್ತದೆ. ಹೀಗಾಗಿ ಇನ್ನು ಮುಂದೆ ಬಾರ್‌ಗಳಿಗೆ ದೇವರ ಹೆಸರು ಇಡದಂತೆ ನಿಷೇಧವೇರಲು ಹಾಗೂ ಹಾಲಿ ಇರುವ ಹೆಸರುಗಳನ್ನು ತೆಗೆಸಿಹಾಕಲು ಸಂಬಂಧ ಪಟ್ಟ ಕಾಯ್ದೆಗೆ ತಿದ್ದುಪಡಿ ಮಾಡಲು ಸಹ ಇಲಾಖೆ ಚಿಂತನೆ ನಡೆಸಿದೆ.

ಈ ಬಗ್ಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಾರ್‌ಗಳಿಗೆ ದೇವರ ಹೆಸರು ಇಡುವುದು ಅಭಾಸ ಎನಿಸುತ್ತದೆ. ಹೀಗಾಗಿ ಇದನ್ನು ತೆರವುಗೊಳಿಸಲು ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಕಾನೂನು ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಮಂಡಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂತಹ ಚಿಂತನೆ ಇರುವುದು ಸತ್ಯ. ಆದರೆ ಯಾವ ರೀತಿ ಮುಂದು ವರಿಯಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಹೇಳಿದರು. ಅಲ್ಲದೆ, ಬಾರ್‌ಗಳಿಗೆ ದೇವರ ಹೆಸರು ಇಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಇದಕ್ಕೆ ಜನರಿಂದಲೂ ಬೆಂಬಲ ದೊರೆತರೆ ಕಾನೂನು ತಿದ್ದುಪಡಿ ಮಾಡಿಯಾದರೂ ನಿಷೇಧ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.