ಬೆಂಗಳೂರು(ಜ.10): ಎಪ್ಪತ್ತರ ಸಂಭ್ರಮದಲ್ಲಿರುವ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್‌ ಅವರ ಜೀವನಾಧಾರಿತ ಕೃತಿ ’ಗಿರಿಜಾ ಪರಸಂಗ’ ಕೃತಿ ಬಿಡುಗಡೆ ಸಮಾರಂಭ ಜ.10ರಂದು (ಭಾನುವಾರ) ನಗರದ ಬನಶಂಕರಿಯ ಸುಚಿತ್ರಾ ಫಿಲ್ಮ್‌ಸೊಸೈಟಿಯಲ್ಲಿ ನಡೆಯಲಿದೆ.

‘ಕನ್ನಡಪ್ರಭ’ ಪುರವಣಿ ಪ್ರಧಾನ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಅವರು ಬರೆದಿರುವ ಗಿರಿಜಾ ಪರಸಂಗ ಕೃತಿಯನ್ನು ಹಿರಿಯ ಬರಹಗಾರ್ತಿ ವಿಜಯಮ್ಮ ಅವರು ಸಂಜೆ ಆರಕ್ಕೆ ನಡೆಯಲಿರುವ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಬಿಜೆಪಿ ವಿರುದ್ಧ ವರ್ಷವಿಡೀ ಕಾಂಗ್ರೆಸ್‌ ಹೋರಾಟ

ಇದಕ್ಕೂ ಮುನ್ನ ಭಾನುವಾರ ಇಡೀ ದಿನ ಕಲಾವಿದೆ ಗಿರಿಜಾ ಲೋಕೇಶ್‌ ಕುರಿತು ಸಂವಾದ, ವಿಚಾರ ಸಂಕಿರಣ ಹಾಗೂ ಮಾತುಕತೆ ಕಾರ್ಯಕ್ರಮಗಳು ಸುಚಿತ್ರಾ ಫಿಲ್ಮ್‌ ಸೊಸೈಟಿಯಲ್ಲಿ ನಡೆಯಲಿದೆ. ಬೆಳಗ್ಗೆ 11ಕ್ಕೆ ಆರಂಭವಾಗುವ ಗಿರಿಜಾ ಲೋಕೇಶ್‌ ಅವರೊಂದಿಗಿನ ಆಪ್ತ-ಸಂವಾದ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಉದ್ಘಾಟಿಸಲಿದ್ದಾರೆ. ಆಪ್ತಸಂವಾದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ಕಲಾವಿದರಾದ ಟಿ.ಎನ್‌.ಸೀತಾರಾಮ್‌, ದೊಡ್ಡಣ್ಣ ಹಾಗೂ ಶೈಲಶ್ರೀ, ಆಶಾಲತಾ, ಫಣಿರಾಮಚಂದ್ರ ಮತ್ತು ವಿಜಯಶ್ರೀ ಆಗಮಿಸಲಿದ್ದಾರೆ.

ಸಂಜೆ ಆರಕ್ಕೆ ನಡೆಯುವ ಕೃತಿ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಸಾಹಿತಿ ಎಚ್‌.ಎಸ್‌.ವೆಂಕಟೇಶ್‌ಮೂರ್ತಿ, ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಜಯಮಾಲಾ, ಲೇಖಕ ಜೋಗಿ, ನಿರ್ಮಾಪಕ ಸಂದೇಶ ನಾಗರಾಜ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.