ಬೆಂಗಳೂರು(ಮಾ.18): ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ಸಾಂಸ್ಥಿಕ ಸಾಮಾಜಿಕ ನಿಧಿ (ಸಿಎಸ್‌ಆರ್‌) ಯ ಹಣವನ್ನು ದೊಡ್ಡ ಮಟ್ಟದಲ್ಲಿ ಸೆಳೆಯಲು ಸಾಂಸ್ಥಿಕ ಸಾಮಾಜಿಕ ನಿಧಿ ಸಮಿತಿಯನ್ನು ರಚಿಸಲಾಗಿದ್ದು ಇದರ ಮುಖ್ಯಸ್ಥರನ್ನಾಗಿ ಕಿರ್ಲೋಸ್ಕರ್‌ ಕಂಪೆನಿಯ ನಿರ್ದೇಶಕಿ ಗೀತಾಂಜಲಿ ಕಿರ್ಲೋಸ್ಕರ್‌ ಅವರನ್ನು ನೇಮಿಸಲಾಗಿದೆ.

ಬುಧವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನೇಮಕಾತಿ ಪತ್ರವನ್ನು ಗೀತಾಂಜಲಿ ಕಿಲೋಸ್ಕರ್‌ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಗುರಿಯನ್ನು ನಮ್ಮ ಸರ್ಕಾರ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಗೀತಾಂಜಲಿ ಕಿರ್ಲೋಸ್ಕರ್‌ ಅವರು ಹೆಚ್ಚಿನ ಶ್ರಮವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಸದ್ಯ 8 ರಿಂದ 9 ಸಾವಿರ ಕೋಟಿ ರು. ಗಳಷ್ಟು ಸಿಎಸ್‌ಆರ್‌ ನಿಧಿ ಸಂಗ್ರಹವಾಗುತ್ತಿದೆ. ಇದರಲ್ಲಿ ಶೇ.25ರಷ್ಟು ಆರೋಗ್ಯ ಕ್ಷೇತ್ರಕ್ಕೆ ಬಳಕೆಯಾದರೂ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಾಗಲಿದೆ. ಆದ್ದರಿಂದ ಸಿಎಸ್‌ಆರ್‌ ನಿಧಿಯನ್ನು ಬಳಸಿಕೊಂಡು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಯಡಿಯೂರಪ್ಪ ತಿಳಿಸಿದರು.

'ನಂಬರ್‌ ಫ್ಲೇಟ್‌ನಲ್ಲಿ ಅನಧಿಕೃತ ಹುದ್ದೆ ಹೆಸರಿದ್ದರೆ ವಿಧಾನಸೌಧಕ್ಕೆ ಎಂಟ್ರಿ ಬೇಡ'

ಸಿಎಸ್‌ಆರ್‌ ನಿಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ.25ರಷ್ಟು ಖರ್ಚು ಮಾಡಬೇಕು ಎಂದು ಕೇಂದ್ರ ಸರ್ಕಾರ ಕಾನೂನಿನಲ್ಲಿ ತಿದ್ದುಪಡಿ ತಂದಿದೆ. ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಮೂಲಭೂತ ಸೌಕರ್ಯ ಮಾತ್ರವಲ್ಲದೆ ಸ್ವಚ್ಛತೆ ಮೊದಲಾದ ಕೆಲಸಗಳಿಗೆ ಹಣ ಖರ್ಚು ಮಾಡಬಹುದು. ಈ ಹೊಸ ಸಮಿತಿಗೆ ಇನ್ನೂ ಅನೇಕರನ್ನು ಸದಸ್ಯರನ್ನಾಗಿ ತೆಗೆದುಕೊಳ್ಳಲಾಗುವುದು. ಇದೊಂದು ತಜ್ಞರ ತಂಡವಾಗಿ ಸರ್ಕಾರೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಆರೋಗ್ಯ ಸಚಿವ ಸುಧಾಕರ್‌ ತಿಳಿಸಿದರು.

ರಾಜ್ಯದಲ್ಲಿ ಆರೋಗ್ಯ ಕ್ಷೇತ್ರವು ಸಿಎಸ್‌ಆರ್‌ ನಿಧಿಯಿಂದ ಅಭಿವೃದ್ಧಿಯಾಗಬೇಕು. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಬೇಕು ಎಂಬ ಉದ್ದೇಶವನ್ನು ಕಂಪನಿಗಳಿಗೆ ತಿಳಿಸಲಾಗಿದೆ. ರಾಜ್ಯದಲ್ಲಿ 2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇದನ್ನು ಮೇಲ್ದರ್ಜೆಗೇರಿಸಲು ಸಾವಿರಾರು ಕೋಟಿ ರು. ಬೇಕು. ಸರ್ಕಾರಕ್ಕೆ ಇಷ್ಟೊಂದು ಹಣ ವಿನಿಯೋಗಿಸಲು ವರ್ಷಗಳೇ ಬೇಕಾಗುತ್ತದೆ. ಇದಕ್ಕಾಗಿ ಸಿಎಸ್‌ಆರ್‌ ಅಗತ್ಯ. ರಾಜ್ಯದ ಐಟಿದಲ್ಲಿ ಐಟಿ ಮತ್ತಿತ್ತರ ಕ್ಷೇತ್ರದ ಕಂಪನಿಗಳಿದ್ದು ಈ ಎಲ್ಲ ಕಂಪನಿಗಳೊಂದಿಗೆ ಈ ಸಮಿತಿ ಮಾತುಕತೆ ನಡೆಸಲಿದೆ. ಇದು ಹೆಚ್ಚು ಫಲ ಕೊಡಲಿದೆ ಎಂದು ಅಭಿಪ್ರಾಯ ಪಟ್ಟರು.

ಈ ಜವಾಬ್ದಾರಿಯನ್ನು ನೀಡಿದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಆರೋಗ್ಯ ಕ್ಷೇತ್ರವು ಅತ್ಯಂತ ಪ್ರಮುಖವಾಗಿದ್ದು ಇದರ ಸುಧಾರಣೆಯಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಸಿಎಸ್‌ಆರ್‌ ನಿಧಿಯು ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ಮೂಲೆ ಮೂಲೆಯಲ್ಲಿನ ಹಳ್ಳಿಗಳಿಗೂ ತಲುಪಬೇಕು. ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಸಿಎಸ್‌ಆರ್‌ ನಿಧಿ ಆರೋಗ್ಯ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಲು ಶ್ರಮಿಸುವುದಾಗಿ ಗೀತಾಂಜಲಿ ಕಿರ್ಲೋಸ್ಕರ್‌ ಹೇಳಿದರು.