ಗೌರಿಬಿದನೂರಿನಲ್ಲಿ ಆಸ್ತಿಗಾಗಿ ತಾಯಿಯ ಶವವನ್ನೇ ಬೀದಿಯಲ್ಲಿಟ್ಟು ಮಕ್ಕಳು ಜಗಳವಾಡಿದ್ದಾರೆ. ಪರಿಹಾರದ ಹಣಕ್ಕಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡದೆ ವಿವಾದ ಸೃಷ್ಟಿಸಿದ್ದಾರೆ.

ಣ ಕಂಡರೆ ಹೆಣವೂ ಬಾಯ್ಬಿಡುತ್ತೆ ಅಂತಾರೆ. ಆದರೆ, ಹಣಕ್ಕಾಗಿ ಹೆತ್ತ ತಾಯಿಯ ಹೆಣವನ್ನೇ ಬೀದಿಯಲ್ಲಿಟ್ಟ ಮಕ್ಕಳನ್ನು ನೋಡಿದ್ದೀರಾ ? ಹಣಕ್ಕಾಗಿ ಹಪಹಪಿಸುತ್ತಾ ತಾಯಿಯ ಶವವನ್ನೇ ಬಿಸಿಲಿನಲ್ಲಿಟ್ಟು ಜಗಳಕ್ಕೆ ನಿಂತ ಮಕ್ಕಳ ಬಗ್ಗೆ ಕೇಳಿದ್ದೀರಾ ?
ಇಂಥ ಘಟನೆಗೆ ಸಾಕ್ಷಿಯಾಗಿದ್ದು ಗೌರಿಬಿದನೂರು ದೊಡ್ಡ ಕುರುಗೋಡು ಗ್ರಾಮದಲ್ಲಿ. 75 ವರ್ಷದ ಅನಂತಕ್ಕಳಿಗೆ ಆರು ಮಕ್ಕಳು. ನಾಲ್ವರು ಹೆಣ್ಣು, ಇಬ್ಬರು ಗಂಡು ಮಕ್ಕಳು. ಇದ್ದದ್ದು ಅಂಗೈ ಅಗಲದ ಜಮೀನು. ಗಂಡನ ಜತೆಗೂಡಿ ಜಮೀನು, ತೋಟದಲ್ಲಿ ಕೆಲಸ ಮಾಡಿಕೊಂಡು, ಆರು ಮಕ್ಕಳನ್ನು 9 ತಿಂಗಳು ಹೊತ್ತು, ಹೆತ್ತು, ರಾತ್ರಿ ಹಗಲು ನಿದ್ದೆ ಬಿಟ್ಟು ಸಾಕಿ ಕೈ ತುತ್ತು ನೀಡಿ ಬೆಳೆಸಿದ್ದಳು ಅನಂತಕ್ಕ. ಮಕ್ಕಳನ್ನು ಮದುವೆಯೂ ಮಾಡಿ, ನೆಮ್ಮದಿಯಾಗಿದ್ದ ಅನಂತಕ್ಕ, ಗಂಡನ ಸಾವಿನ ನಂತರ ಅಕ್ಷರಶಃ ಒಂಟಿಯಾಗಿದ್ದರು. ಹೆಣ್ಮಕ್ಕಳು, ಗಂಡ್ಮಕ್ಕಳು ತಮ್ಮ, ತಮ್ಮ ಹೆಂಡ್ತಿ, ಮಕ್ಕಳ ಜತೆ ಸಂತೋಷವಾಗಿ ಸಂಸಾರ ಮಾಡಿಕೊಂಡಿದ್ರೆ, ಅನಂತಕ್ಕ ಊರಿನ ಮನೆಯಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದರು. 

ಈ ಮಧ್ಯೆ, ಅನಂತಕ್ಕ ಹೆಸರಿನಲ್ಲಿದ್ದ ಎರಡು ಎಕರೆ ಜಮೀನನ್ನು ಕುಡಮಲಕುಂಟೆ ಕೈಗಾರಿಕಾ ಪ್ರದೇಶಕ್ಕಾಗಿ ಕೆಐಎಡಿಬಿ ವಶಪಡಿಸಿಕೊಂಡಿತ್ತು, ಅದಕ್ಕಾಗಿ 90 ಲಕ್ಷ ರೂ. ಪರಿಹಾರವನ್ನೂ ನೀಡಿತ್ತು. ಈ ಹಣವನ್ನು ಅನಂತಕ್ಕ ಇಬ್ಬರು ಗಂಡು ಮಕ್ಕಳು ಹಂಚಿಕೊಂಡಿದ್ದರು.

ಇದರಿಂದ ಸಿಟ್ಟಿಗೆದ್ದಿದ್ದ ಅಂತಕ್ಕನ ನಾಲ್ವರು ಹೆಣ್ಮಕ್ಕಳು, ಅಮ್ಮನ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದರು. ಕೆಐಡಿಬಿ ಕೊಟ್ಟ 90 ಲಕ್ಷ ಪರಿಹಾರ ಹಣದಲ್ಲಿ ತಮಗೂ ಅರ್ಧ ಪಾಲು ಬೇಕೆಂದು ಪಟ್ಟು ಹಿಡಿದು ಕೋರ್ಟ್​ನಲ್ಲಿ ಗೆದ್ದು ಬಿಟ್ಟರು. 
ಕೋರ್ಟ್ ಆದೇಶದಂತೆ ನಾಲ್ವರು ಹೆಣ್ಮಕ್ಕಳಿಗೆ 40 ಲಕ್ಷ ರೂ ಹಂಚಿದ್ದರು ಅನಂತಕ್ಕ. ಈ ಘಟನೆ ಬಳಿಕ ಆರು ಮಕ್ಕಳು ವೈರಿಗಳಂತಾದರು. ಗಂಡು ಮಕ್ಕಳು ಮತ್ತು ಹೆಣ್ಮಕ್ಕಳ ಹಣದ ವಿಚಾರಕ್ಕೆ ವೈಮನಸ್ಸು ಹೆಚ್ಚಿತ್ತು. ಈ ಮಧ್ಯೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಂತಕ್ಕನನ್ನು ಮೊಮ್ಮಗಳು ಚಿಕಿತ್ಸೆಗೆಂದು ಮಧುಗಿರಿಯ ಬಳಿಯ ತನ್ನ ಮನೆಗೆ ಕರೆದೊಯ್ದಿದ್ದಳು. ವಯೋವೃದ್ಧ ಅನಂತಕ್ಕ ಬುಧವಾರ ಕೊನೆಯುಸಿರೆಳೆದಳು. ಅಮ್ಮನ ಶವವನ್ನು ಆಕೆಯೇ ಬಿಟ್ಟುಹೋದ ಹೊಲದಲ್ಲಿ, ಅಪ್ಪನ ಸಮಾಧಿ ಪಕ್ಕದಲ್ಲೇ ಸಂಸ್ಕಾರ ನಡೆಸಲು ನಿರ್ಧರಿಸಿದ್ದ ಹೆಣ್ಮಕ್ಕಳು, ಊರಿಗೆ ಶವ ತೆಗೆದುಕೊಂಡು ಬಂದ್ರು.

ಆದ್ರೆ, ಅಮ್ಮನ ಸಾವಿಗೆ ಕಣ್ಣೀರು ಮಿಡಿಯದ ಮಕ್ಕಳು, ಹೆತ್ತವಳ ಶವದ ಎದುರು ಹಣಕ್ಕಾಗಿ ಚೌಕಾಸಿಗಿಳಿದರು. ಪರಿಹಾರದ ಮೊತ್ತದಲ್ಲಿ ಪಾಲು ಪಡೆದ ಹೆಣ್ಮಕ್ಕಳ ವಿರುದ್ಧ ಸೇಡಿಗೆ ನಿಂತರು. 40 ಲಕ್ಷ ನೀಡಿದರೆ ಮಾತ್ರ ತಂದೆಯ ಸಮಾಧಿ ಪಕ್ಕದಲ್ಲಿ ತಾಯಿಯ ಶವ ಹೂಳಲು ಅವಕಾಶ ನೀಡುವುದಾಗಿ ಷರತ್ತು ಹಾಕಿದ್ರು. ಅಕ್ಕ, ತಂಗಿಯರು, ಅಣ್ತಮ್ಮರ ನಡುವೆ ವಾಕ್ಸಮರ, ಜಗಳ ನಡೆದೇ ಇತ್ತು. ತಾಯಿಯ ಶವ ಬಿಸಿಲಿನಲ್ಲಿ ಅನಾಥವಾಗಿ ಹೊಲದಲ್ಲಿತ್ತು. ಗಂಟೆಗಳೇ ಕಳೆದರೂ ಎರಡೂ ಗುಂಪಿನ ಜಗಳ ಮುಗಿಯಲೊಲ್ಲದು.

ಬೇಸತ್ತ ಅನಂತಕ್ಕನ ಪುತ್ರಿಯರು ತಾಯಿ ಶವವನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಸ್ಟೇಷನ್​ಗೆ ಕೊಂಡೊಯ್ದು, ಅಮ್ಮನ ಶವಸಂಸ್ಕಾರಕ್ಕೆ ಅಣ್ಣಂದಿರು ಬಿಡುತ್ತಿಲ್ಲ ಎಂದು ಕೇಸ್​ ದಾಖಲಿಸಲು ಒತ್ತಾಯಿಸಿದ್ರು. ಕೊನೆಗೆ ಈ ವಿಷಯ ತಿಳಿದು ದೌಡಾಯಿಸಿ ಬಂದ ತಹಶೀಲ್ದಾರ್, ಅನಂತಕ್ಕನ ಮಕ್ಕಳ ಜೊತೆ ಮಾತನಾಡಿ, ಮನವೊಲಿಸಿ ಅಮ್ಮನ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ಟರು.

Chikkaballapur: ಹಣಕ್ಕಾಗಿ ಹೆತ್ತ ತಾಯಿಯ ಶವವನ್ನೇ ಹೂಳಲು ಬಿಡದ ಗಂಡು ಮಕ್ಕಳು!

ಹಣದಾಸೆಗಾಗಿ ಹೆತ್ತವಳ ಶವವನ್ನೇ ಬಿಸಿಲಿನಲ್ಲಿ ಎಸೆದು ಜಗಳ ನಿಂತ ಮಕ್ಕಳನ್ನು ನೋಡಿ, ಗ್ರಾಮಸ್ಥರು ದಂಗಾದರೆ, ಇಂಥ ಮಕ್ಕಳು ಬೇಕಾ ಎಂದು ಕೆಲವರು ನೊಂದುಕೊಂಡ್ರು. ಹಣ ಎಂಥವರನ್ನೂ ಕ್ರೂರಿಗಳನ್ನಾಗಿ ಮಾಡುತ್ತೆ ಅನ್ನೋದು ನಿಜ. ಹೆತ್ತವರನ್ನು ಮನೆಯಿಂದ ಹೊರಹಾಕ್ತಾರೆ, ಅನಾಥಾಶ್ರಮಕ್ಕೆ ಸೇರಿಸ್ತಾರೆ. ಆದ್ರೆ, ತನ್ನ ರಕ್ತವನ್ನೇ ಹಾಲಾಗಿ ಉಣಿಸಿದ ಅಮ್ಮನ ಶವವನ್ನು ಬಿಸಿಲಿಗೆ ಎಸೆಯುವಂಥ ಮಕ್ಕಳು ಈ ಕಲಿಯುಗದಲ್ಲಷ್ಟೇ ಹುಟ್ಟಿರಬೇಕು. ಹೆತ್ತ ತಾಯಿಯ ಮೇಲಿನ ಇಂಥ ಕ್ರೌರ್ಯಕ್ಕೆ ಕಾನೂನಿನಲ್ಲಿ ಯಾವುದಾದರೂ ಶಿಕ್ಷೆ ಇದೆಯಾ? ಇದ್ದರೆ, ಇಂತಹ ಕ್ರೂರಿ, ಆಸೆಬುರುಕ ಮಕ್ಕಳನ್ನೂ ಜೈಲಿಗಟ್ಟಬೇಕು. ಹೆತ್ತವರನ್ನು ಬೀದಿಗೆ ತಳ್ಳುವ ಮಕ್ಕಳಿಗೆ ಕಾನೂನಿನ ಮೂಲಕವೇ ತಕ್ಕ ಪಾಠ ಕಲಿಸಬೇಕು.

ಕರ್ನಾಟಕದ ಆರುಷಿಯಾದ ಸೌಜನ್ಯ: ಮರು ತನಿಖೆ ಸಾಧ್ಯವೇ ಇಲ್ಲ ಎಂದು ಹೈಕೋರ್ಟ್‌ ಹೇಳಿದ್ದೇಕೆ? ತಪ್ಪು ಆಗಿದ್ದೆಲ್ಲಿ!

.