ಬೆಂಗಳೂರು[ನ.20]: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಇದೇ ತಿಂಗಳ ಕೊನೆಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪುಟಗಳ ಬೃಹತ್ತಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಗೌರಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದರೊಂದಿಗೆ ಗೌರಿ ಹಂತಕರ ವಿರುದ್ಧ ಹದಿನಾಲ್ಕು ತಿಂಗಳ ಕಾಲ ನಡೆಸಿದ ಎಸ್‌ಐಟಿ ಕಾರ್ಯಾಚರಣೆ ಕೂಡಾ ಕೊನೆಗೊಳ್ಳುವ ಸಾಧ್ಯತೆಯಿದೆ. ಈ ಪ್ರಕರಣ ಸಂಬಂಧ ಕಳೆದ ಮೇ ತಿಂಗಳಲ್ಲಿ 650 ಪುಟಗಳ ಮೊದಲ ದೋಷಾರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿತ್ತು. ಆನಂತರ ಎಸ್‌ಐಟಿ ತನಿಖೆ ಮುಂದುವರೆಸಿದಂತೆ ಕೊಲೆ ಸಂಚಿನ ಜಾಲವು ಬಿಚ್ಚಿಕೊಂಡಿತು. ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ ಹಾಗೂ ಗೋವಾದಲ್ಲೂ ಗೌರಿ ಲಂಕೇಶ್‌ ಕೊಲೆಗೆ ಆರೋಪಿಗಳು ಪೂರ್ವ ಸಿದ್ಧತೆ ನಡೆಸಿದ್ದರು ಎಂಬ ಮಹತ್ವದ ಮಾಹಿತಿಯು ತನಿಖೆಯಲ್ಲಿ ಬಯಲಾಯಿತು.

ಹೀಗೆ ಎರಡನೇ ಹಂತದಲ್ಲಿ ಸೆರೆಯಾದ ಪ್ರಕರಣದ ಪ್ರಧಾನ ಸಂಚುಕೋರ ಎನ್ನಲಾದ ಮಹಾರಾಷ್ಟ್ರದ ಮೂಲದ ಅಮೋಲ್‌ ಕಾಳೆ ಸೇರಿದಂತೆ 15 ಮಂದಿ ಆರೋಪಿಗಳು ಹಾಗೂ ಅವರ ಪೂರ್ವಾಪರ ಮಾಹಿತಿ ಕ್ರೋಢೀಕರಿಸಿ ಎಸ್‌ಐಟಿ ದೋಷಾರೋಪಟ್ಟಿಸಲ್ಲಿಸಲಿದೆ. ಈ ಆರೋಪಟ್ಟಿಯಲ್ಲಿ ತನಿಖೆಯಲ್ಲಿ ಗೌಪ್ಯವಾಗಿಟ್ಟಿದ್ದ ಮತ್ತಷ್ಟುರೋಚಕ ಸಂಗತಿಗಳು ಹೊರಬರಲಿವೆ.

ಆರೋಪಿಗಳ ಮೇಲೆ ಕೋಕಾ ಕಾಯ್ದೆ ಹೂಡಲಾಗಿದೆ. ಈ ಪ್ರಕರಣದ ಹೆಚ್ಚುವರಿ ಆರೋಪಿ ಸಲ್ಲಿಕೆಗೆ ಈ ತಿಂಗಳ 27 ಕೊನೆಯ ದಿನವಾಗಿದೆ. ಹೀಗಾಗಿ ಬಹುತೇಕ ಶನಿವಾರ ಅಥವಾ ಸೋಮವಾರ ನ್ಯಾಯಾಲಯಕ್ಕೆ ಅಧಿಕಾರಿಗಳು ಜಾಜ್‌ರ್‍ಶೀಟ್‌ ಕೊಡಲಿದ್ದಾರೆ. ಇದಕ್ಕಾಗಿ ಅವಿರತವಾಗಿ ತನಿಖಾ ತಂಡವು ಸಿದ್ಧತೆಯಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.

ಪ್ರಗತಿಪರ ಚಿಂತಕರ ಹತ್ಯೆ ಸಂಚು:

2017ರ ಸೆ.5ರಂದು ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಂ ಬಡಾವಣೆಯ ತಮ್ಮ ಮನೆ ಮುಂದೆ ದುಷ್ಕರ್ಮಿಗಳ ಗುಂಡಿಗೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಬಲಿಯಾಗಿದ್ದರು. ಈ ಪ್ರಕರಣವು ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತು. ಅಲ್ಲದೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲೂ ಹತ್ಯೆಗೆ ಖಂಡನೆ ವ್ಯಕ್ತವಾಯಿತು. ಪ್ರಕರಣದ ತನಿಖೆಗೆ ಎಸ್‌ಐಟಿ ಐಜಿಪಿ ಬಿ.ಕೆ.ಸಿಂಗ್‌ ಉಸ್ತುವಾರಿಯಲ್ಲಿ ಡಿಸಿಪಿ ಎಂ.ಎನ್‌.ಅನುಚೇತ್‌ ಹಾಗೂ ಆಗಿನ ಸಿಐಡಿ ಎಸ್ಪಿ ಹರೀಶ್‌ ಪಾಂಡೆ ನೇತೃತ್ವದಲ್ಲಿ ಸರ್ಕಾರವು ಎಸ್‌ಐಟಿ ರಚಿಸಿತ್ತು. ಸವಾಲಾಗಿದ್ದ ಕೊಲೆ ಕೃತ್ಯವನ್ನು ಭೇದಿಸುವಲ್ಲಿ ಯಶಸ್ಸು ಕಂಡ ಎಸ್‌ಐಟಿ, ದೇಶದ ಪೊಲೀಸ್‌ ವ್ಯವಸ್ಥೆಯಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮೂಲದ ಅಮೋಲ್‌ ಕಾಳೆ ತಂಡವು, ಪ್ರಗತಿಪರ ಚಿಂತಕರ ಕೊಲೆಗೆ ಸಂಚು ರೂಪಿಸಿತ್ತು. ಅದರಂತೆ ಗೌರಿ ಲಂಕೇಶ್‌ ಅವರನ್ನು ಹತ್ಯೆಗೈದಿದ್ದರು ಎಂಬ ಸಂಗತಿ ಎಸ್‌ಐಟಿ ಬಯಲುಗೊಳಿಸಿತು.

ಮೇ ತಿಂಗಳಲ್ಲಿ ಮೊದಲ ಆರೋಪ ಪಟ್ಟಿ:

ಎಸ್‌ಐಟಿ ತಂಡದ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಹಿಂದೂ ಪರ ಸಂಘಟನೆಗಳ ಕೆಲ ಮುಖಂಡರ ಕಾನೂನುಬಾಹಿರ ಕೃತ್ಯಗಳು ಬೆಳಕಿಗೆ ಬಂದವು. ಹಾಗೆಯೇ ಮಹಾರಾಷ್ಟ್ರ ಚಿಂತಕರಾದ ಡಾ.ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಹಾಗೂ ಕರ್ನಾಟಕದ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಸಂಚು ಸಹ ಬಯಲಾಯಿತು. ಫೆಬ್ರವರಿಯಲ್ಲಿ ಪ್ರಕರಣದ ಸಂಬಂಧ ಮೊದಲ ಆರೋಪಿಯಾಗಿ ಮದ್ದೂರು ತಾಲೂಕಿನ ಹಿಂದೂ ಪರ ಸಂಘಟನೆ ಮುಖಂಡ ಕೆ.ಟಿ.ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆಮಂಜನನ್ನು ಎಸ್‌ಐಟಿ ಬಂಧಿಸಿತು. ಬಳಿಕ ಆತನ ವಿರುದ್ಧ ಮೇ ತಿಂಗಳಲ್ಲಿ ಆರೋಪ ಪಟ್ಟಿಸಲ್ಲಿಸಿದ ಅಧಿಕಾರಿಗಳು, ಅವತ್ತೇ ಅಮೋಲ್‌ ಕಾಳೆ ಸೇರಿ ನಾಲ್ವರನ್ನು ಬಂಧಿಸಿತು. ಇದೇ ಆರೋಪಿಗಳಿಂದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ಕೊಲೆ ಸಂಚು ಸಹ ಗೊತ್ತಾಗಿತ್ತು. ಹೀಗಾಗಿ ಎರಡನೇ ಹಂತದಲ್ಲಿ ವೈದ್ಯಕೀಯ ದಾಖಲೆಗಳು, ಕಾಳೆ ತಂಡದ ಹೇಳಿಕೆಗಳು ಹಾಗೂ ಗುಜರಾತ್‌ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಮತ್ತು ಇತರೆ ದಾಖಲೆಗಳು ಸೇರಿ ಒಟ್ಟು 4 ಸಾವಿರಕ್ಕೂ ಅಧಿಕ ಪುಟದ ಆರೋಪ ಪಟ್ಟಿಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಯಾರು?

ನಂ. ಆರೋಪಿ ಎಲ್ಲಿಯವನು ನಿರ್ವಹಿಸಿದ ಪಾತ್ರ

1.ಅಮೋಲ್‌ ಕಾಳೆ ಮಹಾರಾಷ್ಟ್ರ ಪ್ರಧಾನ ಸಂಚುಕಾರ

2.ಪರಶುರಾಮ್‌ ವಾಗ್ಮೋರೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣ ಶೂಟರ್‌

3.ಗಣೇಶ್‌ ಮಿಸ್ಕಿನ್‌ ಹುಬ್ಬಳ್ಳಿ ಬೈಕ್‌ ರೈಡರ್‌

4.ಅಮಿತ್‌ ಬದ್ದಿ ಹುಬ್ಬಳ್ಳಿ ರೈಡರ್‌ ಸಹಾಯಕ

5.ಅಮಿತ್‌ ದೇಗ್ವೇಕರ್‌ ಮಹಾರಾಷ್ಟ್ರ ಹಣಕಾಸು ಉಸ್ತುವಾರಿ

6.ಭರತ್‌ ಕುರ್ನೆ ಬೆಳಗಾವಿ ಶಸ್ತ್ರಾಸ್ತ್ರ ತರಬೇತಿಗೆ ಆಶ್ರಯ

7.ಸುಧನ್ವಾ ಗೋಲೆಧಕರ್‌ ಮಹಾರಾಷ್ಟ್ರ ಸಂಚುಗಾರ

8.ಶರದ್‌ ಕಲಾಸ್ಕರ್‌ ಮಹಾರಾಷ್ಟ್ರ ಸಂಚುಗಾರ

9.ರಾಜೇಶ್‌ ಬಂಗೇರಾ ಕೊಡಗು ಶಸ್ತ್ರಾಸ್ತ್ರ ತರಬೇತುದಾರ

10.ಶ್ರೀಕಾಂತ್‌ ಪಂಗಾರ್ಕರ್‌ ಮಹಾರಾಷ್ಟ್ರ ಸಂಚುಗಾರ

ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಿದ್ದಾರೆ.