ಗಣಿನಾಡಿನ ಧಣಿ ಜನಾರ್ದನ ರೆಡ್ಡಿ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ಹೀಗಿರುವಾಗ ಈ ಹೊಸ ಅತಿಥಿಗೆ ಮುದ್ದಾದ ಹೆಸರಿಡುವ ಮೂಲಕ ರೆಡ್ಡಿ ಸ್ವಾಗತಿಸಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಜನಾರ್ದನ ರೆಡ್ಡಿ ವಿಡಿಯೋ ಒಂದನ್ನೂ ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಹೌದು ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಸಿಲುಕಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ, ಬಹಳಷ್ಟು ಪ್ರಯತ್ನಗಳ ಬಳಿಕ ಜಾಮೀನು ಪಡೆದಿದ್ದಾರೆ. ಆದರೆ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿರುವ ರೆಡ್ಡಿ ರಾಜಕೀಯ ಕ್ಷೇತ್ರ ಹಾಗೂ ಸುಪ್ರೀಂ ಆದೇಶದಂತೆ ಬಳ್ಳಾರಿಯಿಂದಲೂ ದೂರ ಉಳಿದಿದ್ದಾರೆ. ಸದ್ಯ ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿರುವ ರೆಡ್ಡಿಗಾರು ಮನೆಗೆ ಹೊಸ ಅತಿಥಿಯನ್ನು ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ. 

ಜನಾರ್ದನ ರೆಡ್ಡಿ ತಮ್ಮ ಮನೆಗೆ ಬರ ಮಾಡಿಕೊಂಡಿರುವ ಅತಿಥಿ ಬೇರಾರೂ ಅಲ್ಲ, ಮುದ್ದಾದ ಪುಟ್ಟ  ಗಂಡು ಕರು. ತಮ್ಮ ಮನೆಯ ಗೋಮಾತೆ ವೇದಾ ಕರುವಿಗೆ ಜನ್ಮ ಕೊಟ್ಟಿರುವ ಬಗ್ಗೆ ಬರೆದುಕೊಂಡಿದ್ದಾರೆ.

ನಮ್ಮ ಮನೆಯಲ್ಲಿಯೂ ಗೋಮಾತೆ 'ವೇದಾ' ಇದ್ದಾಳೆ. ವೇದಾ ನಮ್ಮ ಮನೆಯ ಬೆಳಕು. ಕಳೆದ 5 ವರ್ಷಗಳಿಂದ ನಮ್ಮ ಮನೆಯ ಬೆಳಕು ವೇದಾ. ಗೋಮಾತೆ ವೇದಾಳನ್ನು ನನ್ನ ತಾಯಿಯಷ್ಟೇ ಗೌರವ, ಪ್ರೀತಿಯಿಂದ ಕಾಣುತ್ತೇನೆ. ಇದೀಗ ಗೋಮಾತೆ ವೇದಾ ನಿನ್ನೆ ಗಂಡು ಕರುವಿಗೆ ಜನ್ಮ ಕೊಟ್ಟಿದ್ದಾಳೆ" ಎಂದು ಜನಾರ್ದನ ರೆಡ್ಡಿ ಫೇಸ್‌ಬುಕ್‌ ಸ್ಟೇಟಸ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.