Asianet Suvarna News Asianet Suvarna News

ಇಲ್ಲಿ ನಡೆಯುತ್ತಿದೆ ವರ್ಷವಿಡೀ ಕನ್ನಡದ ಅವಿರತಸೇವೆ

ಉಡುಪಿ  ಜಿಲ್ಲಾ ಕನ್ನಡ ಸಾಹಿತ್ಯ ಘಟಕವು ಅತ್ಯಂತ ಕ್ರಿಯಾಶೀಲವಾಗಿದ್ದು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಅತ್ಯಂತ ಕ್ರಿಯಾಶೀಲವಾಗಿದೆ.

Full Of Year Udupi People Celebrate Kannada Programs
Author
Bengaluru, First Published Nov 5, 2018, 10:40 AM IST

ಉಡುಪಿ :  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳು ವರ್ಷಕ್ಕೊಮ್ಮೆ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡುವುದರೊಂದಿಗೆ ತಮ್ಮ ಶಕ್ತ್ಯಾನುಸಾರ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡದ ಕೈಂಕರ್ಯ ನಡೆಸುತ್ತಿರುತ್ತವೆ. ಆದರಲ್ಲೂ ಉಡುಪಿ  ಜಿಲ್ಲಾ ಕನ್ನಡ ಸಾಹಿತ್ಯ ಘಟಕವು ಅತ್ಯಂತ ಕ್ರಿಯಾಶೀಲವಾಗಿದ್ದು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಅತ್ಯಂತ ಕ್ರಿಯಾಶೀಲವಾಗಿದೆ.

ಈ ಘಟಕವು ಕಳೆದ 5 ವರ್ಷಗಳಿಂದ 1372 ಕಡೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದಕ್ಕೆ ಸಂಬಂಧಿಸಿದ, ಹಿರಿಯರೆಡೆಗೆ ನಮ್ಮ ನಡಿಗೆ, ಗೀತ ಗಾಯನ, ಹಳ್ಳಿಯತ್ತ ಸಾಹಿತ್ಯ, ಕನ್ನಡ ಡಿಂಡಿಮ, ಸಾಹಿತ್ಯ ಕಮ್ಮಟ, ಗಮಕ ವಾಚನ, ಮನೆಯಂಗಳದಲ್ಲಿ ಸಾಹಿತ್ಯ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿದ್ದು, ರಾಜ್ಯಮಟ್ಟದಲ್ಲಿಯೇ ಒಂದು ದಾಖಲೆಯಾಗಿದೆ. ಇದರ ಹಿಂದೆ ಇರುವವರು ಶಿಕ್ಷಕರೂ ಆಗಿರುವ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು. ಪ್ರಸ್ತುತ ಉಡುಪಿ ಜಿಲ್ಲೆಯ ತೆಕ್ಕಟ್ಟೆಯ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಶಿಕ್ಷಕರಾಗಿ ದುಡಿಯುತ್ತಿರುವ ಇವರು ಕನ್ನಡಕ್ಕಾಗಿ ಸದಾ ಸನ್ನದ್ಧವಾಗಿರುವ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಸಾವಿರಾರು ಕಾರ್ಯಕ್ರಮ: ಈಗ 2ನೇ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಅಡಿಗರು, ಪರಿಷತ್ತಿನ ಪ್ರತಿ ತಾಲೂಕು ಘಟಕಗಳನ್ನು ಮಾತ್ರವಲ್ಲ, ಹೋಬಳಿ ಘಟಕಗಳನ್ನು ರಚಿಸಿದ್ದಾರೆ. ಈ ಘಟಕಗಳ ಮೂಲಕ ವರ್ಷವಿಡೀ, ಜಿಲ್ಲೆಯ ಒಂದಲ್ಲ ಒಂದು ಕಡೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಉದಾಹರಣೆಗೆ ತಿಂಗಳ ಸಡಗರ ಎನ್ನುವ ಕಾರ್ಯಕ್ರಮ, ಜಿಲ್ಲೆಯ 510 ಪ್ರೌಢಶಾಲೆಗಳಲ್ಲಿ ‘ಶಾಲೆಯತ್ತ ಸಾಹಿತ್ಯ’ ಎನ್ನುವ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಹಳಗನ್ನಡದ ಬೋಧನೆ ನಡೆಸಿ, ಕನ್ನಡ ಪ್ರಾಚೀನ ಹಿರಿಯ ಕವಿಗಳನ್ನು ಪರಿಚಯಿಸಲಾಗುತ್ತಿದೆ. ಜಿಲ್ಲೆಯ 80ಕ್ಕೂ ಹೆಚ್ಚು ಹಿರಿಯ ಕನ್ನಡ ಸಾಹಿತಿಗಳ ಮನೆಗೆ ಹೋಗಿ ಅವರೊಂದಿಗೆ ಸಂವಾದ, ಹಿರಿಯನ್ನು ಅವರ ಮನೆಗೆ ಹೋಗಿ ಸನ್ಮಾನಿಸುವ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಗಳು ಕೂಡ ದಾಖಲೆಗಳಾಗಿವೆ.

ರಾಜ್ಯದಲ್ಲಿಯೇ ಅತಿ ಹೆಚ್ಚು 13 ದತ್ತಿನಿಧಿಗಳ ಮೂಲಕ ಕನ್ನಡಕ್ಕೆ ಸಂಬಂಧಪಟ್ಟವೈವಿಧ್ಯ ವಿಷಯಗಳ ಉಪನ್ಯಾಸ ನಡೆಸುವ, ಪ್ರಶಸ್ತಿಗಳನ್ನು ನೀಡುವ ಹೆಗ್ಗಳಿಕೆ ಕೂಡ ಉಡುಪಿ ಜಿಲ್ಲಾ ಕಸಾಪ ಘಟಕದ್ದು. ಜಿಲ್ಲೆಯಲ್ಲಿ 5 ವರ್ಷಗಳಲ್ಲಿ ಜಿಲ್ಲಾ- ತಾಲೂಕು - ಹೋಬಳಿ ಸಮ್ಮೇಳನಗಳ ಜೊತೆಗೆ ಮಕ್ಕಳ ಸಾಹಿತ್ಯ ಸಮ್ಮೇಳನ, ಯಕ್ಷಗಾನ ಸಾಹಿತ್ಯ ಸಮ್ಮೇಳನ, ಶಿಕ್ಷಕರ ಸಾಹಿತ್ಯ ಸಮ್ಮೇಳನಗಳು ಸೇರಿ 30ಕ್ಕೂ ಹೆಚ್ಚು ಸಮ್ಮೇಳಗಳು ನಡೆದಿವೆ.

ವಿಶೇಷ ಎಂದರೆ ಪ್ರತಿ ಸಮ್ಮೇಳನಗಳಿಗೆ ದಾನಿಗಳಿಂದ ಹಣ ಸಂಗ್ರಹಿಸಿ, ಅದರಲ್ಲೂ ಹಣ ಉಳಿಸಿ, ಅದರಿಂದ ಜಿಲ್ಲೆಯ 22 ಮಂದಿ ಸಾಧಕರ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಿ, ಜಿಲ್ಲೆಯ ಪ್ರತಿ ಶಾಲೆಗಳಿಗೆ ಉಚಿತವಾಗಿ ವಿತರಿಸಿದ್ದಾರೆ. ತಾವೇ 50ಕ್ಕೂ ಹೆಚ್ಚು ಮಕ್ಕಳ ಕಾದಂಬರಿ, ಕತೆ - ಕವನ ಸಂಕಲನಗಳನ್ನು ಬರೆದಿದ್ದಾರೆ. ಇತ್ತೀಚೆಗೆ ತಮ್ಮ ಜೀವನಾನುಭವಗಳನ್ನು 4 ಸಾಲುಗಳ 503 ಮುಕ್ತಕಗಳಲ್ಲಿ ಬರೆದು ನಾಕೊಂದ್ಲ ನಾಕು ಎಂಬ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು, ಜನಪ್ರಿಯವಾಗಿದೆ.

ರಾಜ್ಯ ಸರ್ಕಾರದ ಅತ್ಯುತ್ತಮ ಶಿಕ್ಷಕ ವಿಶೇಷ ಪ್ರಶಸ್ತಿ ಪಡೆದಿರುವ ಅಡಿಗರು, 1 ಮತ್ತು 7ನೇ ತರಗತಿಯ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದಾರೆ. ರಾಜ್ಯ ಸರ್ಕಾರದ ಶಿಕ್ಷಕರ ತರಬೇತಿಗೆ 17 ಕೈಪಿಡಿಗಳನ್ನು ರಚಿಸಿ ನೀಡಿದ್ದಾರೆ. ಅವರ ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ ಎಂಬ ಕಥಾಸಂಕಲನ ಐಸಿಎಸ್‌ಇ ಆಂಗ್ಲ ಮಾಧ್ಯಮಕ್ಕೆ ಕನ್ನಡ ಪಠ್ಯ ಪುಸ್ತಕವಾಗಿದೆ. ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಇಷ್ಟೆಲ್ಲಾ ಹೇಗೆ ಸಾಧ್ಯ ಎಂದು ಕೇಳಿದರೆ, ಶಾಲೆಯ ವಾರ್ಷಿಕ ರಜೆಗಳು, ಭಾನುವಾರಗಳು, ಸರ್ಕಾರಿ ರಜೆಗಳು, ತಮ್ಮ ಹಕ್ಕಿನ ರಜೆಗಳಲ್ಲಿ ಒಂದು ದಿನವೂ ಮನೆಯಲ್ಲಿ ಕಳೆಯದೆ ಈ ಕಾರ್ಯಕ್ರಮಗಳನ್ನು ನಡೆಸಿದ ಪಟ್ಟಿಯನ್ನು ಮುಂದಿಟ್ಟು ಮಂದಹಾಸ ಬೀರುತ್ತಾರೆ. ಈ ಕಾರ್ಯಕ್ಕೆ ಜಿಲ್ಲಾ ಕಸಾಪದ ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ವಲೇರಿಯನ್‌ ಮೆನೇಜಸ್‌, ನರೇಂದ್ರ ಕುಮಾರ್‌ ಕೋಟ, ಆರೂರು ತಿಮ್ಮಪ್ಪ ಶೆಟ್ಟಿಸೇರಿದಂತೆ ಎಲ್ಲಾ ತಾಲೂಕು ಕಸಾಪದ ಪದಾಧಿಕಾರಿಗಳು ಈ ಕನ್ನಡ ಸೇವೆಗೆ ಬೆಂಗಾವಲಾಗಿ ನಿಂತಿದ್ದಾರೆ.

25 ಸಾವಿರ ಪತ್ರಿಕೆಗಳ ಸಂಗ್ರಹ

ಅಡಿಗರ ಮನೆಯೇ ಪತ್ರಿಕೆಗಳ ಮ್ಯೂಸಿಯಂ ಇದ್ದ ಹಾಗೆ, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ 25 ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಲೇಖನಗಳ ಸಂಗ್ರಹ ಅವರ ಬಳಿ ಇದೆ. ಅದರಲ್ಲೂ ಸಿಂಹಪಾಲು ಕನ್ನಡಪ್ರಭ ಪತ್ರಿಕೆಯ ಲೇಖನಗಳದ್ದು. ತಾವು ಶಿಕ್ಷಕನಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಲು ಈ ಲೇಖನಗಳು ಬಹಳ ಸಹಾಯ ಮಾಡುತ್ತವೆ ಎನ್ನುತ್ತಾರೆ ಅಡಿಗರು.

ವರದಿ : ಸುಭಾಶ್ಚಂದ್ರ ವಾಗ್ಳೆ

Follow Us:
Download App:
  • android
  • ios