ರಾಯಚೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದೇ ದಿನದಲ್ಲಿ ₹3 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ವಾಹನ ಸವಾರರಲ್ಲಿ ತೀವ್ರ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದರ ಹೆಚ್ಚಿರುವುದಕ್ಕೆ ರಾಜ್ಯ ಸರ್ಕಾರದ ಪಾತ್ರದ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ರಾಯಚೂರು (ಮೇ.15): ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ತೈಲ ಕಂಪನಿಗಳು ಮತ್ತೊಂದು ಬರೆ ಎಳೆದಿವೆ. ರಾಯಚೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಏರಿಕೆಯಾಗಿದ್ದು, ವಾಹನ ಸವಾರರು ಅಕ್ಷರಶಃ ಕಂಗಾಲಾಗಿದ್ದಾರೆ.

ಒಂದೇ ದಿನದಲ್ಲಿ ₹3ಗೂ ಹೆಚ್ಚು ಏರಿಕೆ!
ರಾಯಚೂರಿನಲ್ಲಿ ಇಂದಿನ ಪೆಟ್ರೋಲ್ ₹107.36, ನಿನ್ನೆ: ₹104.09 ಇತ್ತು. ಅಂದರೆ ಒಂದೇ ದಿನದಲ್ಲಿ ₹3.27 ಏರಿಕೆ!
ಇನ್ನು ಡೀಸೆಲ್ ಇಂದಿನ ದರ ₹95.29 ಆಗಿದೆ.ನಿನ್ನೆ: ₹92.18 ಇತ್ತು ಇಲ್ಲಿಯೂ ₹3.11 ಏರಿಕೆಯಾಗಿದೆ.
ಬೆಳ್ಳಂಬೆಳಗ್ಗೆ ಪೆಟ್ರೋಲ್ ಬಂಕ್‌ಗಳಿಗೆ ಬಂದ ವಾಹನ ಸವಾರರು, ರೇಟ್ ಕೇಳಿ ಆಘಾತಕ್ಕೊಳಗಾಗಿದ್ದಾರೆ. ಒಂದೇ ದಿನದಲ್ಲಿ ಇಷ್ಟು ಏರಿಕೆಯಾದರೆ ಹೇಗೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ Vs ಕರ್ನಾಟಕ: ದರದಲ್ಲಿ ಇಷ್ಟೊಂದು ವ್ಯತ್ಯಾಸವೇಕೆ?
ದೇಶದ ರಾಜಧಾನಿ ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ತೈಲ ದರ ಗಗನಕ್ಕೇರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹94.77 ರಷ್ಟಿದ್ದರೆ, ಬೆಂಗಳೂರು, ರಾಯಚೂರಿನಲ್ಲಿ ₹107.36 ತಲುಪಿದೆ. ಅಂದರೆ ದೆಹಲಿಗಿಂತ ರಾಜ್ಯದಲ್ಲಿಯೇ ಪೆಟ್ರೋಲ್ ಡೀಸೆಲ್ ದುಬಾರಿ ಆಯ್ತಲ್ಲ!
ನಿಜಕ್ಕೂ ಬೆಲೆ ಹೆಚ್ಚಿಸಿದ್ದು ಯಾರು?
ಕೇಂದ್ರ ಸರ್ಕಾರ ಬೆಲೆ ಏರಿಸುತ್ತಿದೆ ಎಂದು ಪ್ರತಿ ಬಾರಿ ದೂರುವ ರಾಜ್ಯ ಸರ್ಕಾರಕ್ಕೆ ಈಗ ಸಾರ್ವಜನಿಕರು ನೇರ ಪ್ರಶ್ನೆ ಹಾಕುತ್ತಿದ್ದಾರೆ. ಇಂಧನ ಬೆಲೆ 3 ರೂ. ಹೆಚ್ಚಿಸಿದ ಮೇಲೂ ದೆಹಲಿಯಲ್ಲಿ ಪೆಟ್ರೋಲ್ ದರ ₹95ರ ಒಳಗಿರುವಾಗ, ನಮ್ಮಲ್ಲಿ ₹107 ದಾಟುತ್ತಿರುವುದು ಹೇಗೆ? ಕೇಂದ್ರದ ಮೇಲೆ ಗೂಬೆ ಕೂರಿಸುವ ಮುನ್ನ, ರಾಜ್ಯ ಸರ್ಕಾರ ಈ 3 ರೂಪಾಯಿಗಳ ದರ ಹೆಚ್ಚಳಕ್ಕೆ ನೀಡುವ ಸಮರ್ಥನೆ ಏನು? ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದೇ ನಿಮ್ಮ ಆಡಳಿತ ವೈಖರಿಯೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

