ಬೆಂಗಳೂರು(ಮಾ.08): ಕಾಂಗ್ರೆಸ್‌ ಪರವಾಗಿ ಹಿಂದುಳಿದ ಮತ್ತು ದಲಿತ ಜಾತಿಗಳನ್ನು ಸಂಘಟಿಸುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ‘ಹಿಂದ’ ಹೋರಾಟಕ್ಕೆ ಮುನ್ನುಡಿಯಾಗಿ ಗೊಂಡ ಹಾಗೂ ಕೋಲಿ ಸಮಾಜಗಳಿಗೆ ಎಸ್‌.ಟಿ. ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಮಾ.27ರಂದು ಕಲಬುರಗಿಯ ಎನ್‌.ವಿ. ಮೈದಾನದಲ್ಲಿ ಬೃಹತ್‌ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಬೀದರ್‌, ಕಲಬುರಗಿ ಹಾಗೂ ಯಾದಗಿರಿ ಭಾಗದ ಗೊಂಡ ಕುರುಬ, ಕೋಲಿ ಟೋಕ್ರಿ, ಕೋಲಿ ಕಬ್ಬಲಿಗ ಜನಾಂಗಗಳನ್ನು ಎಸ್‌.ಟಿ.ಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಈವರೆಗೂ ಕೇಂದ್ರ ಸರ್ಕಾರವು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

‘ಈಗಾಗಲೇ ಶಿಫಾರಸು ಮಾಡಿರುವ ಜನಾಂಗಗಳಿಗೆ ಎಸ್‌.ಟಿ. ಮೀಸಲಾತಿ ನೀಡದೆ ಇದೀಗ ಬೇರೆ ಜಾತಿಗಳನ್ನು ಬಿಜೆಪಿ ನಾಯಕರ ಮುಂದಾಳತ್ವದಲ್ಲೇ ಎತ್ತಿ ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ. ಕುರುಬ ಸಮುದಾಯವನ್ನು ಸಿದ್ದರಾಮಯ್ಯ ಅವರಿಂದ ದೂರ ಮಾಡಲು ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಎಸ್‌.ಟಿ. ಮೀಸಲಾತಿ ಒತ್ತಾಯ ಸಮಾವೇಶ ನಡೆಸಲಾಗಿದೆ’ ಎಂದು ಬೇಸರಿಸಿದ್ದ ಸಿದ್ದರಾಮಯ್ಯ ಆಪ್ತರು, ಇದಕ್ಕೆ ಪ್ರತಿಯಾಗಿ ಸಣ್ಣಪುಟ್ಟಜಾತಿಗಳಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹಿಂದ ಸಂಘಟನೆ ಮಾಡಲು ನಿರ್ಧರಿಸಿದ್ದರು. ಫೆಬ್ರವರಿ ಎರಡನೇ ವಾರ ಹೊರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು.

ಫೆಬ್ರವರಿ ಮೂರನೇ ವಾರ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಕುರುಬರಿಗೆ ಎಸ್‌.ಟಿ. ಮೀಸಲಾತಿ ಒದಗಿಸುವಂತೆ ಹಾಗೂ ಜಾತಿ ಜನಗಣತಿ ವರದಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಇದರಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗವಹಿಸಿರಲಿಲ್ಲ.

ಆದರೆ, ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ನೇರವಾಗಿ ಮೀಸಲಾತಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಕುರುಬ ಸಮುದಾಯದ ಉಪ ಪಂಗಡಗಳಾದ ಗೊಂಡ, ರಾಜಗೊಂಡ ಜೊತೆಗೆ ಕೋಲಿ ಸಮಾಜದವರನ್ನು ಎಸ್‌.ಟಿ.ಗೆ ಸೇರಿಸಬೇಕು ಕಲಬುರಗಿ ಸಮಾವೇಶದಲ್ಲಿ ಒತ್ತಾಯಿಸಲಿದ್ದಾರೆ. ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಹಾಲುಮತ ಮಹಾಸಭಾ ಸಹೋಗದಲ್ಲಿ ಸಮಾವೇಶ ನಡೆಯಲಿದೆ. ಇದರ ಬೆನ್ನಲ್ಲೇ ಕೆಲವೇ ದಿನಗಳಲ್ಲಿ ಕಲಬುರಗಿಯಲ್ಲೇ ಕುರುಬ ಸಮುದಾಯದವರು ಸೇರಿದಂತೆ ಹಿಂದುಳಿದ ಜಾತಿಗಳಿಗೆ ಸೇರಿದ ನೂತನ ಗ್ರಾ.ಪಂ. ಸದಸ್ಯರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.