ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು [ಡಿ.14]:  ರಾಜ್ಯದ ನಿರಾಶ್ರಿತರಿಗೆ ಸೂರು ಕಲ್ಪಿಸಲು ಜಾರಿಗೊಳಿಸಿರುವ ವಿವಿಧ ಯೋಜನೆಗಳಿಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವು ಕಳೆದ ಮೂರು ತಿಂಗಳಿನಿಂದ ಅನುದಾನ ಬಿಡುಗಡೆ ಮಾಡಿಲ್ಲ. ಪರಿಣಾಮ ಬಸವ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆಗಳ ಸುಮಾರು 53 ಸಾವಿರ ಫಲಾನುಭವಿಗಳು ಇದೀಗ ಅತಂತ್ರರಾಗಿದ್ದಾರೆ.

ಹಂತ ಹಂತವಾಗಿ ಬಿಡುಗಡೆಯಾಗಬೇಕಿದ್ದ ಅನುದಾನವು ಏಕಾಏಕಿ ಸ್ಥಗಿತಗೊಡಿದ್ದರಿಂದ ಈ ವಸತಿ ಯೋಜನೆಗಳಡಿ ಗೃಹ ನಿರ್ಮಾಣ ಆರಂಭಿಸಿದ್ದ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತಂಕಗೊಂಡಿರುವ ಸಾವಿರಾರು ಫಲಾನುಭವಿಗಳು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವನ್ನು ನಿತ್ಯ ಸಂಪರ್ಕಿಸುತ್ತಿದ್ದಾರೆ. ನಿಗಮದಿಂದ ಪ್ರಾರಂಭಿಸಿರುವ ಕಾಲ್‌ಸೆಂಟರ್‌ಗೆ ಪದೇ ಪದೇ ಕರೆ ಮಾಡಿ ಪ್ರಶ್ನಿಸುತ್ತಿದ್ದಾರೆ.

ವಸತಿ ಹಗರಣ: ಒಂದೇ ಕುಟುಂಬಕ್ಕೆ 10 ಮನೆ!...

ಫಲಾನುಭವಿಗಳಿಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವು .1.5 ಲಕ್ಷದಿಂದ .1.65 ಲಕ್ಷದವರೆಗೆ ಅನುದಾನ ನೀಡುತ್ತಿದೆ. 20/30 ಹಾಗೂ 15/20 ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶವಿದೆ. ಫಲಾನುಭವಿಗಳಿಗೆ ವಿವಿಧ ಹಂತಗಳಲ್ಲಿ (ಅಡಿಪಾಯ, ಕಿಟಕಿ ನಿಲ್ಲಿಸುವುದು, ಛಾವಣಿ ಹಾಗೂ ಮನೆ ನಿರ್ಮಾಣ ಪೂರ್ಣಗೊಂಡಾಗ) ಅನುದಾನ ಬಿಡುಗಡೆಯಾಗುತ್ತದೆ. ಜಿಪಿಎಸ್‌ ತಂತ್ರಜ್ಞಾನದ ಮೂಲಕ ಈ ಹಂತಗಳನ್ನು ಪರಿಶೀಲಿಸುವ ಅಧಿಕಾರಿಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುತ್ತಾರೆ. ಆದರೆ, ಇದೀಗ ಮನೆ ನಿರ್ಮಾಣ ಹಂತದಲ್ಲಿದ್ದರೂ, ಹಣ ಬಿಡುಗಡೆಯಾಗದ ಪರಿಣಾಮ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗದೆ ಫಲಾನುಭವಿಗಳು ಆತಂಕಗೊಂಡಿದ್ದಾರೆ.

ಸ್ಥಗಿತಕ್ಕೆ ಏನು ಕಾರಣ?:

ಯಾದಗಿರಿ, ಚಿತ್ರದುರ್ಗ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಹಣಕಾಸಿನ ಅವ್ಯವಹಾರಗಳು ನಡೆದಿರುವ ಸಂಬಂಧ ದೂರುಗಳು ದಾಖಲಾಗಿವೆ. ಈ ಸಂಬಂಧ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಅನುದಾನ ಬಿಡುಗಡೆಯಾಗಲಿದೆ ಎಂದು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ, ಕೆಲ ಜಿಲ್ಲೆಗಳಲ್ಲಿ ಅವ್ಯವಹಾರ ನಡೆದ ಪರಿಣಾಮ ಇಡೀ ರಾಜ್ಯದಲ್ಲಿ ಅನುದಾನ ಸ್ಥಗಿತ ಮಾಡಲು ಕಾರಣವೇನು ಎಂದು ಪ್ರಶ್ನಿಸಿದರೆ ಅಧಿಕಾರಿಗಳಿಂದ ಯಾವುದೇ ಉತ್ತರ ದೊರೆಯುತ್ತಿಲ್ಲ.

ಅಂಬೇಡ್ಕರ್‌ ಯೋಜನೆಯಲ್ಲಿ ಮನೆ ಮಂಜೂರಾಗುತ್ತಿದ್ದಂತೆ ಹಳೆಯ ಮನೆಯನ್ನು ಕೆಡವಿದ್ದೇವೆ. ಈಗಾಗಲೇ ಒಂದು ಕಂತು ಹಣ ಬಿಡುಗಡೆಯಾಗಿದ್ದು, ಅಡಿಪಾಯ ಹಾಕಿ, ತಾತ್ಕಾಲಿಕ ನಿರ್ಮಿಸಿಕೊಂಡಿರುವ ಜೋಪಡಿಯಲ್ಲಿ ವಾಸ ಮಾಡುತ್ತಿದ್ದೇವೆ. ಆದರೆ, ಅನುದಾನ ಬಿಡುಗಡೆಯಾಗುವ ಸಂಬಂಧ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಚಾಮರಾಜನಗರದಿಂದ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಬಂದಿದ್ದ ಪ್ರಭು ಎಂಬುವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಯೋಜನೆ ಫಲಾನುಭವಿಗಳು ಬಿಡುಗಡೆಯಾಗಬೇಕಾದ ಮೊತ್ತ ಕೋಟಿ ರು.ಗಳಲ್ಲಿ

ಬಸವ ವಸತಿ ಯೋಜನೆ 31,591 11.41

ಡಾ.ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆ 16,116 82.38

ದೇವರಾಜ ಅರಸು ವಸತಿ ಯೋಜನೆ 645 1.65

ಪ್ರಧಾನ ಮಂತ್ರಿ ಆವಾಸ್‌ ಯೋಜನೆ 3,501 8.97

ವಾಜಪೇಯಿ ನಗರ ವಸತಿ ಯೋಜನೆ 1,443 3.92

ಕೆಲ ಜಿಲ್ಲೆಗಳಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಅಡಿಯ ವಸತಿ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಸ್ಥಗಿತವಾಗಿತ್ತು. ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು.

- ಮನೋಜ್‌ ಕುಮಾರ್‌ ಮೀನಾ, ವಸತಿ ಇಲಾಖೆ ಕಾರ್ಯದರ್ಶಿ