ಬೆಂಗಳೂರು : ಹಾಲು ಒಕ್ಕೂಟ (ಬಮೂಲ್) ಡಿಸೆಂಬರ್ ತಿಂಗಳಲ್ಲಿ ದೇಸಿ ತಳಿ ಹಸುವಿನ (ನಾಟಿ ಹಸು) ಹಾಲನ್ನು ಮಾರುಕಟ್ಟೆಗೆ ಬಿಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿ ದ್ದು, ಬೆಂಗಳೂರಿನ ನಂದಿನಿ ಬೂತ್‌ಗಳಲ್ಲಿ ವರ್ಷಾಂತ್ಯದೊಳಗೆ ಆರೋಗ್ಯಕ್ಕೆ ಪೂರಕವಾದ ನಾಟಿ ಹಾಲು ಗ್ರಾಹಕರಿಗೆ ಲಭ್ಯವಾಗಲಿದೆ.

ಬಮೂಲ್, ದೇಸಿ ತಳಿಯ ಹಸುಗಳ ಅಭಿವೃದ್ಧಿಗೆ ಕೆಎಂಎಫ್ ಮತ್ತು ರಾಜ್ಯಸರ್ಕಾರ ನೆರವಿನಿಂದ ಯೋಜನೆ ರೂಪಿಸಿತ್ತು. ರಾಮನಗರ ಜಿಲ್ಲೆಯ ಕನಕಪುರ ಮತ್ತು ಮಾಗಡಿ ತಾಲೂಕಿನ 150 ಹಳ್ಳಿಗಳಲ್ಲಿ ದೇಸಿ ತಳಿಯ ಹಸುಗಳ ಅಭಿವೃದ್ಧಿ  ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಗೊಳಿಸಲಾಗಿತ್ತು. ಇದೀಗ ಈ ಯೋಜನೆಯ ಫಲಾನುಭವಿ ರೈತರು ಸಾಕಿರುವ ದೇಸಿ ತಳಿಗಳಾದ ಗಿರ್, ಸಾಹಿವಾಲ್, ಹಳ್ಳಿಕಾರ್, ಅಮೃತ್ ಮಹಲ್ ತಳಿಯ ಹಸುಗಳ ಹಾಲು ಖರೀದಿಸಿ ಮಾರುಕಟ್ಟೆಗೆ ಬಿಡಲು ಬಮೂಲ್ ನಿರ್ಧರಿಸಿದೆ. 

ಮೊದಲ ಹಂತದಲ್ಲಿ ಸುಮಾರು 4 ರಿಂದ 5 ಸಾವಿರ ದೇಸಿ ತಳಿ ಹಸುಗಳಿಂದ 1000 ಲೀಟರ್‌ನಷ್ಟು ಹಾಲು ಖರೀದಿಸಿ ಬಮೂಲ್ ವ್ಯಾಪ್ತಿಯ (ಬೆಂಗಳೂರು ಡೈರಿಯಿಂದ ಸದಾಶಿವನಗರ, ಮೆಖ್ರಿ ಸರ್ಕಲ್, ಬನಶಂಕರಿ, ಯಶವಂತಪುರ, ಹಲಸೂರು ಪ್ರದೇಶ) ನಂದಿನಿ ಬೂತ್ ಗಳಲ್ಲಿ ಮಾರಾಟ ಮಾಡಲಿದೆ. ಬೇಡಿಕೆಗೆ ತಕ್ಕಂತೆ ಆಯಾ ಪ್ರದೇಶದ ನಂದಿನಿ ಬೂತ್‌ಗಳಿಗೆ ನಾಟಿ ಹಸುಗಳ ಹಾಲು ಪೂರೈಕೆ ಮಾಡುವುದಾಗಿ ಬಮೂಲ್ ತಿಳಿಸಿದೆ. 

ಔಷಧೀಯ ಗುಣ ಹೆಚ್ಚು: ನಾಟಿ ತಳಿಯ ರಾಸುಗಳ ಗಂಜಲ, ಸಗಣಿ, ಹಾಲು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ದೇಸಿ ತಳಿಯ ಹಾಲಿನಲ್ಲಿ ಎ2  ಪ್ರೋಟಿನ್, ಶೇ. 30 ಬೀಟಾ  ಕ್ಯಾಸಿನ್ ಇದ್ದು ಔಷಧೀಯ ಗುಣ ಹೆಚ್ಚು ಇರುತ್ತದೆ. ಆದರೆ ಮಿಶ್ರತಳಿಯಲ್ಲಿ ಅದು ಹೆಚ್ಚು ಇರುವುದಿಲ್ಲ. ಎ2 ಹಾಲು  ಮನುಷ್ಯನ ದೇಹಕ್ಕೆ ತುಂಬಾ ಅವಶ್ಯಕ. ಐಟಿಬಿಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಹೆಚ್ಚಾಗಿ ದೇಸಿ ತಳಿಯ ಎ2 ಅಂಶವಿರುವ ಹಾಲು ಖರೀದಿಗೆ ಇಷ್ಟ ಪಡುತ್ತಿದ್ದಾರೆ. 

ಆದ್ದರಿಂದ ಬಮೂಲ್ ಕೂಡ ಈ ಹಾಲನ್ನು ಗ್ರಾಹಕರಿಗೆ ಒದಗಿಸಲು ಕ್ರಮಕೈಗೊಂಡಿದೆ. ದೇಸಿ ತಳಿ ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ದರ ಹೆಚ್ಚು ಎಂದು ಬಮೂಲ್ ಪ್ರಧಾನ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಮಾಹಿತಿ ನೀಡಿದ್ದಾರೆ. 

ರೈತರಿಗೆ ತರಬೇತಿ: ದೇಸಿ ತಳಿಯ ಹಸುಗಳ ಅಭಿವೃದ್ಧಿ ಯೋಜನೆಗೆ ಒಳಪಡುವ ರೈತರು ಸಾವಯವ ಕೃಷಿ (ಆರ್ಗಾನಿಕ್ ಫಾರ್ಮಿಂಗ್)ಗೆ ಹೆಚ್ಚು ಆದ್ಯತೆ ನೀಡಬೇಕು. ಹಸುಗಳಿಗೆ ಮೇವು ಹಾಕುವ ಹೊಲಗಳಿಗೆ ಕ್ರಿಮಿನಾಶಕ ಬಳಸುವಂತಿಲ್ಲ. ದೇಸಿ ದನಗಳ ಸಗಣಿ, ಗಂಜಲ ಬಳಸಿ ತಯಾರಿಸಿದ ಕೊಟ್ಟಿಗೆ ಗೊಬ್ಬರವನ್ನು ಹೊಲಕ್ಕೆ ಬಳಸಬೇಕು. ಹಸುಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬಿತ್ಯಾದಿ ವಿಷಯ ಗಳ ಕುರಿತು ರೈತರಿಗೆ ಬಮೂಲ್ ಸಮಗ್ರವಾಗಿ ತರಬೇತಿ ನೀಡುತ್ತಿದೆ. 

ದೇಸಿ ತಳಿಯ ಹಸುಗಳ ಹಾಲು ಕರೆಯುವ ಸಂದರ್ಭದಲ್ಲಿ ಕರುಗಳು ಹಾಲು ಕುಡಿದ ಬಳಿಕವೇ ಹಾಲು ಹಿಂಡಬೇಕು. ಇದರಿಂದ ದೇಸಿ ತಳಿ ಹಸುಗಳ ಅಭಿವೃದ್ಧಿ ಜತೆಗೆ ಹಾಲು ಉತ್ಪಾದನೆಗೆ ಆದ್ಯತೆಗೆ ರೈತರು ಸಹಕರಿಸಬೇಕಿದೆ.