ಬೆಂಗಳೂರಿನ ಕೋರಮಂಗಲ ಫೋರಂ ಮಾಲ್‌ನ ಸಂಗೀತ ಕಾರ್ಯಕ್ರಮದಲ್ಲಿ ಕೇವಲ ತಮಿಳು ಹಾಡುಗಳನ್ನು ಹಾಕಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡ ಕಡೆಗಣನೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ನಂತರ, ಆಯೋಜಕರು ಕ್ಷಮೆಯಾಚಿಸಿ ಡಾ. ರಾಜ್‌ಕುಮಾರ್ ಸಿನಿಮಾಗಳ ಹಾಡುಗಳನ್ನು ಹಾಕಿದರು.
ಬೆಂಗಳೂರು (ಫೆ.09): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಗರದ ಕೋರಮಂಗಲದ ಫೋರಂ ಮಾಲ್‌ನಲ್ಲಿ (Forum Mall) ನಡೆದಿದ್ದು, ಕನ್ನಡದ ನೆಲದಲ್ಲಿ ತಮಿಳು ಹಾಡುಗಳ ಮೂಲಕ ಮನರಂಜನೆ ನೀಡುತ್ತಿದ್ದ ಆಯೋಜಕರಿಗೆ ಕನ್ನಡ ಪರ ಸಂಘಟನೆಗಳು ತಕ್ಕ ಪಾಠ ಕಲಿಸಿವೆ. ಭಾನುವಾರ ಸಂಜೆ ನಡೆದ ಈ ಹೈಡ್ರಾಮಾ, ಮಾಲ್ ಆಡಳಿತ ಮಂಡಳಿ ಕನ್ನಡ ಹಾಡುಗಳನ್ನು ಹಾಕುವ ಮೂಲಕ ಸುಖಾಂತ್ಯಗೊಂಡಿದೆ.
ಏನಿದು ಘಟನೆ?
ಭಾನುವಾರ ವಾರಾಂತ್ಯವಾಗಿದ್ದರಿಂದ ಫೋರಂ ಮಾಲ್‌ನಲ್ಲಿ ನೂರಾರು ಜನರು ಸೇರಿದ್ದರು. ಗ್ರಾಹಕರನ್ನು ಆಕರ್ಷಿಸಲು ಮಾಲ್ ಆವರಣದಲ್ಲಿ ಲೈವ್ ಮ್ಯೂಸಿಕ್ (Live Music) ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತಮಿಳು ಗಾಯಕ ಶ್ಯಾಮ್ ವಿಶಾಲ್ ಅವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ, ಕಾರ್ಯಕ್ರಮದ ಆರಂಭದಿಂದಲೂ ಕೇವಲ ತಮಿಳು ಹಾಗೂ ಅನ್ಯ ಭಾಷೆಯ ಹಾಡುಗಳನ್ನು ಹಾಡುವ ಮೂಲಕ ಅಲ್ಲಿ ನೆರೆದಿದ್ದ ಕನ್ನಡಿಗರನ್ನು ಮತ್ತು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಕನ್ನಡದ ನೆಲದಲ್ಲಿ ನಿಂತು, ಕನ್ನಡಿಗರ ಆಶ್ರಯದಲ್ಲಿ ವ್ಯಾಪಾರ ನಡೆಸುತ್ತಾ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡವನ್ನೇ ಮರೆತಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು.
ಕರವೇ ದಾಳಿ, ಆಯೋಜಕರಿಗೆ ಕ್ಲಾಸ್:
ಫೋರಂ ಮಾಲ್‌ನಲ್ಲಿ ಕನ್ನಡಕ್ಕೆ ಆಗುತ್ತಿರುವ ಅವಮಾನವನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ - ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು, ತಕ್ಷಣವೇ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಲಗ್ಗೆ ಇಟ್ಟರು. ವೇದಿಕೆಯ ಮೇಲೇರಿದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಕಾರ್ಯಕರ್ತರು, ಹಾಡುತ್ತಿದ್ದ ಗಾಯಕ ಶ್ಯಾಮ್ ವಿಶಾಲ್ ಹಾಗೂ ಮಾಲ್‌ನ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. 'ಇದು ಕರ್ನಾಟಕ, ಇಲ್ಲಿ ಕನ್ನಡವೇ ಸಾರ್ವಭೌಮ. ಇಲ್ಲಿ ವ್ಯಾಪಾರ ಮಾಡಿ ಬದುಕುವ ನಿಮಗೆ ಕನ್ನಡದ ಹಾಡುಗಳನ್ನು ಹಾಕಲು ಏನು ಸಂಕಟ? ಕೇವಲ ಅನ್ಯ ಭಾಷೆಗಳಿಗೆ ಮಣೆ ಹಾಕುವುದನ್ನು ನಾವು ಸಹಿಸುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.
ಕನ್ನಡ ಬೋರ್ಡ್ ಕಡ್ಡಾಯಕ್ಕೆ ಆಗ್ರಹ:
ಕೇವಲ ಹಾಡುಗಳ ವಿಚಾರ ಮಾತ್ರವಲ್ಲದೆ, ಮಾಲ್‌ನಲ್ಲಿರುವ ನಾಮಫಲಕಗಳಲ್ಲಿ ಕನ್ನಡವನ್ನು ಕಡೆಗಣಿಸಿರುವ ಬಗ್ಗೆಯೂ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. 'ತಕ್ಷಣವೇ ಕನ್ನಡದ ಬೋರ್ಡ್‌ಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ' ಎಂದು ಮಾಲ್ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ನೀಡಿದರು.
ಮೊಳಗಿದ ಡಾ. ರಾಜ್ ಹಾಡು:
ಕರವೇ ಕಾರ್ಯಕರ್ತರ ಆಕ್ರೋಶಕ್ಕೆ ಬೆದರಿದ ಫೋರಂ ಮಾಲ್ ಆಯೋಜಕರು, ತಕ್ಷಣವೇ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಕ್ಷಮೆಯಾಚಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ತಮಿಳು ಹಾಡುಗಳನ್ನು ನಿಲ್ಲಿಸಿ, ವರನಟ ಡಾ. ರಾಜ್‌ಕುಮಾರ್ ಅವರ ಕನ್ನಡದ ಹಾಡುಗಳನ್ನು ಪ್ರಸಾರ ಮಾಡಿದರು. ಅಲ್ಲಿಯವರೆಗೂ ತಮಿಳುಮಯವಾಗಿದ್ದ ವಾತಾವರಣ ಕ್ಷಣಾರ್ಧದಲ್ಲಿ ಕನ್ನಡಮಯವಾಯಿತು.
ನಿನ್ನೆ ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದ್ದು, ವಿಷಯ ತಿಳಿದ ತಕ್ಷಣ ಕೋರಮಂಗಲ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಮಾಲ್‌ಗಳಲ್ಲಿ ಕನ್ನಡ ಕಡೆಗಣನೆ ಮುಂದುವರಿದರೆ ಸುಮ್ಮನಿರುವುದಿಲ್ಲ ಎಂದು ಕನ್ನಡಪರ ಹೋರಾಟಗಾರರು ಎಚ್ಚರಿಸಿದ್ದಾರೆ.


