* ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಕೊರೋನಾ ಪಾಸಿಟಿವ್.* ಮಣಿಪಾಲ್ ಆಸ್ಪತ್ರೆ ಗೆ ದಾಖಲಾಗಿರುವ ಎಚ್. ಡಿ. ದೇವೇಗೌಡ
ಬೆಂಗಳೂರು(ಜ.22): ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡರಿಗೆ ಕೊರೋನಾ ಸೋಂಕು ತಗುಲಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವೇಗೌಡರು, ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ದೇವೇಗೌಡರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ಹಿಂದೆಯೂ ಅಂದರೆ ಕೊರೋನಾ ಎರಡನೇ ಅಲೆಯಲ್ಲೂ ದೇವೇಗೌಡ ದಂಪತಿಗೆ ಕೊರೋನಾ ಸೋಂಕು ತಗುಲಿತ್ತು.
ಬೊಮ್ಮಾಯಿ ದೂರವಾಣಿ ಕರೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೂರವಾಣಿ ಕರೆ ಮಾಡಿ ದೇವೇಗೌಡರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.
‘ಮಾಜಿ ಪ್ರಧಾನಮಂತ್ರಿಗಳು, ಹಿರಿಯರಾದ ಎಚ್.ಡಿ.ದೇವೇಗೌಡ ಅವರು ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ತಮ್ಮ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ’ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
