Jaladhare: ಜೆಡಿಎಸ್ ಜಲಧಾರೆ ಯಾತ್ರೆಗೆ ದೇವೇಗೌಡ ನಿಶಾನೆ
* 15 ಗಂಗಾರಥಗಳಿಗೆ ರಾಮನಗರದಲ್ಲಿ ಚಾಲನೆ
* 51 ನದಿಗಳಿಂದ ಏ.16ಕ್ಕೆ ನೀರು ಸಂಗ್ರಹ
* ಈ ಕಾರ್ಯಕ್ರಮವನ್ನು ಚುನಾವಣೆ ಉದ್ದೇಶದಿಂದ ನಡೆಸುತ್ತಿಲ್ಲ
ರಾಮನಗರ(ಏ.13): ಜನರಿಗೆ ಕುಡಿಯುವ ನೀರೊದಗಿಸಲು ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಜೆಡಿಎಸ್‌ನ(JDS) ಬದ್ಧತೆ ಪ್ರದರ್ಶಿಸಲು ಆಯೋಜಿಸಿರುವ ಜನತಾ ಜಲಧಾರೆ ಕಾರ್ಯಕ್ರಮದ ಭಾಗವಾಗಿ ಪ್ರಮುಖ ನದಿಗಳಿಂದ ಜಲ ಸಂಗ್ರಹಿಸುವ 15 ಗಂಗಾರಥಗಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(HD Devegowda) ಮಂಗಳವಾರ ಹಸಿರು ನಿಶಾನೆ ತೋರಿದರು. ಈ ಗಂಗಾರಥಗಳು ಏ.16ರಂದು ರಾಜ್ಯದ 15 ಕಡೆ ಜಲ ಸಂಗ್ರಹಿಸುವ ಮೂಲಕ ಜಲಧಾರೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಗಲಿದೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದೇವೇಗೌಡ ಅವರು ಸಹಸ್ರಾರು ಮಂದಿ ಸಮ್ಮುಖದಲ್ಲಿ ಗಂಗಾರಥಗಳ (ವಾಹನಗಳಿಗೆ) ಸಂಚಾರಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy), ಅಲ್ಲಿ ಗಂಗಾರಥವೊಂದಕ್ಕೆ ಪೂಜೆ ಸಲ್ಲಿಸಿದರು. ನಂತರ ರಾಮನಗರಕ್ಕೆ ಆಗಮಿಸಿ ದೇವೇಗೌಡ ಮತ್ತಿತರರ ಜತೆಗೂಡಿ ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಇಲ್ಲೂ ರಥಗಳಿಗೂ ಪೂಜೆ ನೆರವೇರಿಸಿದರು.
Karnataka Politics: ಹೊರಟ್ಟಿ ಬಿಜೆಪಿ ಸೇರ್ಪಡೆ: ಬೊಮ್ಮಾಯಿ, ಕಟೀಲ್ ಹೆಗಲಿಗೆ ಹಾಕಿದ ಜೋಶಿ
ಬಳಿಕ ಕುಮಾರಸ್ವಾಮಿ ಅವರು ಚರ್ಚ್ ಹಾಗೂ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ವೇದಿಕೆಗೆ ಆಗಮಿಸಿ ದೇವೇಗೌಡರೊಂದಿಗೆ ಗಂಗಾರಥಗಳ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಜೆಡಿಎಸ್ ಬದ್ಧತೆಯ ಪ್ರತೀಕ:
ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ರಾಮನಗರ(Ramanagara) ಪುಣ್ಯ ಕ್ಷೇತ್ರ. ನನಗೆ ರಾಜಕೀಯವಾಗಿ ಪುನರ್‌ಜನ್ಮ ನೀಡಿದ ಕ್ಷೇತ್ರ. ಈ ಕ್ಷೇತ್ರದಲ್ಲಿ ಚಾಲನೆ ನೀಡಿದರೆ ಜನತಾ ಜಲಧಾರೆ(Jaladhare) ಕಾರ್ಯಕ್ರಮಕ್ಕೆ ಯಶಸ್ಸು ಸಿಗಲಿದೆ ಎಂಬ ನಂಬಿಕೆಯಿದೆ ಎಂದರು.
ಈ ಕಾರ್ಯಕ್ರಮವನ್ನು ಚುನಾವಣೆ(Election) ಉದ್ದೇಶದಿಂದ ನಡೆಸುತ್ತಿಲ್ಲ. ನೀರಾವರಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ಕರ್ನಾಟಕಕ್ಕೆ ಮಾಡಿದ ದ್ರೋಹ ಹಾಗೂ ನೀರಾವರಿ ಯೋಜನೆಗಳನ್ನು(Irrigation Projects) ಸಾಕಾರಗೊಳಿಸಲು ಜೆಡಿಎಸ್ ಹೊಂದಿರುವ ಬದ್ಧತೆಯನ್ನು ಜನರಿಗೆ ತಿಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
16ರಂದು ಜಲ ಸಂಗ್ರಹ:
ಏ.16ರಂದು ಗಂಗಾರಥಗಳು ನಾಡಿನ 15 ಪ್ರಮುಖ ನದಿಗಳು ಹಾಗೂ 180 ತಾಲೂಕುಗಳಲ್ಲಿರುವ ಸಣ್ಣ ನದಿಗಳು ಸೇರಿದಂತೆ ಒಟ್ಟು 94 ಸ್ಥಳಗಳಿಂದ 51 ನದಿಗಳ ನೀರು ಸಂಗ್ರಹ ಮಾಡಲಿವೆ. ಕಲಶಗಳಲ್ಲಿ ನೀರು ಸಂಗ್ರಹಿಸಿಕೊಂಡು 15 ಗಂಗಾರಥಗಳು ಮೇ 8ರಂದು ಬೆಂಗಳೂರಿಗೆ ವಾಪಸ್ಸಾಗಲಿವೆ. ಅಲ್ಲಿ ನಾಲ್ಕಾರು ಲಕ್ಷ ಜನರನ್ನು ಸೇರಿಸಿ ಕಾರ‍್ಯಕ್ರಮ ನಡೆಸಿದ ನಂತರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮುಂದಿನ ಚುನಾವಣೆವರೆಗೂ ಈ ಕಲಶಗಳಿಗೆ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
Religious Controversy: ಬೆಲೆ ಏರಿಕೆ ಮರೆಮಾಚಲು ಧರ್ಮ ವಿವಾದ ಸೃಷ್ಟಿ: ಕುಮಾರಸ್ವಾಮಿ
ಈ ದೇವೇಗೌಡನಿಗೆ ನಡೆಯಲು ಆಗಲ್ಲ, ಏನು ಮಾಡಬಲ್ಲ ಎಂದು ಕೆಲವರು ಭಾವಿಸಬಹುದು. ನನಗೆ ಮಂಡಿ ನೋವೂ ಇರಬಹುದು. ಆದರೆ, ತಲೆಯೊಳಗೆ ಯಾವ ನೋವೂ ಇಲ್ಲ. ಯಾವ ವಿಷಯದ ಬಗ್ಗೆ ಬೇಕಾದರೂ ಚರ್ಚೆ ಮಾಡಬಲ್ಲೆ ಎಂದರು.
ಏನಿದು ಜಲಧಾರೆ?
- ಕುಡಿವ ನೀರಿನ ಯೋಜನೆ ಹಾಗೂ ನೀರಾವರಿ ಯೋಜನೆಗಳಿಗೆ ಜೆಡಿಎಸ್‌ನ ಬದ್ಧತೆ ಪ್ರದರ್ಶಿಸುವ ಕಾರ‍್ಯಕ್ರಮ
- 15 ವಾಹನಗಳಲ್ಲಿ ತೆರಳಿ 51 ನದಿಗಳಿಂದ ನೀರು ಸಂಗ್ರಹಿಸಿ ಮುಂದಿನ ಚುನಾವಣೆವರೆಗೂ ಕಲಶಗಳಿಗೆ ಪೂಜೆ