ಹೊಸನಗರ[ಜ.15]: ಪ್ರತಿಭಟನಾ ಸಭೆಯೊಂದರ ವೇದಿಕೆಯಲ್ಲಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಠಾತ್ತನೇ ಕುಸಿದು ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆ ತಾಲೂಕಿನ ಹೊಸನಗರದಲ್ಲಿ ಸೋಮವಾರ ನಡೆದಿದೆ.

ಇಲ್ಲಿನ ಹೊಸನಗರ ಹೋಬಳಿ ನಾಡ ಕಚೇರಿ ಎದುರು ನಡೆಯುತ್ತಿರುವ ರೈತ ಸಮಸ್ಯೆ ಕುರಿತ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಕಾಗೋಡು ತಿಮ್ಮಪ್ಪ ವೇದಿಕೆಯ ಕುರ್ಚಿಯಲ್ಲಿ ಆಸೀನರಾಗಿದ್ದರು. ಹಠಾತ್ತನೇ ಅಸ್ವಸ್ಥಗೊಂಡ ಅವರು ಅಲ್ಲೇ ವಾಂತಿ ಮಾಡಿಕೊಂಡು ಕುಸಿದು ಬಿದ್ದರು. ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದ ಕೂಡಲೇ ಅವರನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆಗೆ ಕರೆದೊಯ್ಯಲಾಯಿತು.

ಚಿಕಿತ್ಸೆ ಬಳಿಕ ಕಾಗೋಡು ಚೇತರಿಸಿಕೊಂಡಿದ್ದು, ಸಂಜೆ ಡಿಸ್ಚಾರ್ಜ್ ಆಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ಡಾ.ತೇಜಸ್ವಿ ಸುದ್ದಿಗಾರರೊಂದಿಗೆ ಮಾತನಾಡಿ, ರಕ್ತದಲ್ಲಿ ಸಕ್ಕರೆ ಅಂಶ ಇಳಿಮುಖ ಆಗಿರುವುದರಿಂದ ಪ್ರಜ್ಞೆ ಕಳೆದುಕೊಂಡಿದ್ದರು. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಏನೂ ತೊಂದರೆ ಇಲ್ಲ ಎಂದು ತಿಳಿಸಿದರು