Asianet Suvarna News Asianet Suvarna News

ಕದ್ದು ಮುಚ್ಚಿ ಮಾಡೋದು ಬಿಜೆಪಿ ಸಂಸ್ಕೃತಿ: ಕುಮಾರಸ್ವಾಮಿ

* ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ
* ಹಿಂದೆ ಮಾಡಿ ಪಾಪದ ಫಲ ಬಿಜೆಪಿ ಇಂದು ಅನುಭವಿಸುತ್ತಿದೆ
* ರಾಜಕೀಯ ಪಕ್ಷವೊಂದು ದ್ವಿಮುಖ ಧೋರಣೆಯ ರಾಜಕಾರಣ ಮಾಡಬಾರದು ಎಂಬುದಕ್ಕೆ ಇದೊಂದು ನಿದರ್ಶನ

Former Minister HD Kumaraswamy Slams BJP Government
Author
Bengaluru, First Published May 28, 2021, 9:54 AM IST

ಬೆಂಗಳೂರು(ಮೇ.28): ಜಿಂದಾಲ್‌ ಕಂಪನಿಗೆ 3667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ. ರಾಜಕೀಯ ಪಕ್ಷವೊಂದು ದ್ವಿಮುಖ ಧೋರಣೆಯ ರಾಜಕಾರಣ ಮಾಡಬಾರದು ಎಂಬುದಕ್ಕೆ ಇದೊಂದು ನಿದರ್ಶನ. ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ. ಆದರೆ, ನಷ್ಟ ಜಾಸ್ತಿಯೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

 

ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಜಿಂದಾಲ್‌ಗೆ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಭೂಮಿ ನೀಡಲಾಗಿತ್ತು. ಲೀಸ್‌ ಅವಧಿ ಮುಗಿದಿದ್ದರಿಂದ ಕ್ರಯಪತ್ರ ಮಾಡಿಕೊಡಬೇಕಾಗಿತ್ತು. ಅಷ್ಟನ್ನು ಮಾತ್ರ ಮಾಡಲು ಮುಂದಾಗಿದ್ದ ನನ್ನ ಸರ್ಕಾರದ ವಿರುದ್ಧ ಯಡಿಯೂರಪ್ಪನವರು ಸಲ್ಲದ ಆರೋಪ ಮಾಡಿದ್ದರು. ಆದರೆ ಈಗ? ಅವರು ಅಂದು ನನ್ನ ಮೇಲೆ ಮಾಡಿದ ಆರೋಪಗಳನ್ನೆಲ್ಲ ತಮ್ಮ ಮೇಲೆ ಹೊತ್ತುಕೊಳ್ಳುವಂಥಾಗಿದೆ ಎಂದು ಹೇಳಿದ್ದಾರೆ.

ಜಿಂದಾಲ್‌ಗೆ ಭೂಮಿ: ಬಿಜೆಪಿ ಶಾಸಕರಿಂದಲೇ ವಿರೋಧ, ಬಿಎಸ್‌ವೈಗೆ ಶುರುವಾಯ್ತಾ ಲೆಟರ್ ಭಯ..?

 

ವಿರೋಧಕ್ಕಾಗಿ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿ 'ಸಂಸ್ಕೃತಿ'. ಬಿಜೆಪಿ ಪಾಲಿಸಿಕೊಂಡು ಬಂದ ಈ ಸಂಸ್ಕೃತಿ ಇಂದು ಅವರಿಗೆ ತಿರುಗುಬಾಣವಾಗಿದೆ. ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್‌ ಸಾಕ್ಷಿ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. 

 

ಬಳ್ಳಾರಿಯ ಜಿಂದಾಲ್‌ ಉಕ್ಕು ಕಂಪನಿಗೆ ಸಮಾರು 3,667 ಎಕರೆ ಸರ್ಕಾರಿ ಜಮೀನು ಹಸ್ತಾಂತರಿಸಲು ಕೈಗೊಂಡಿರುವ ಸಂಪುಟದ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿರುವ ಆಡಳಿತಾರೂಢ ಬಿಜೆಪಿಯ ಕೆಲವು ಶಾಸಕರು, ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ಹೈಕಮಾಂಡ್‌ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಂದ ಮಾಹಿತಿಯನ್ನ ಪಡೆದುಕೊಂಡಿತ್ತು.
 

Follow Us:
Download App:
  • android
  • ios