ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎರಡು ಬಾರಿಯ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನರಾಗಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳ ಸಭೆಯಲ್ಲಿಯೇ ಅವರಿಗೆ ಹೃದಯಾಘಾತವಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಅವರು ಶುಕ್ರವಾರ ಸಾವು ಕಂಡಿದ್ದಾರೆ. 

ಗದಗ (ನ.25): ಗದಗ ಹಾಗೂ ರೋಣ ಕ್ಷೇತ್ರದ ಮಾಜಿ ಶಾಸಕ ಶ್ರಿಶೈಲಪ್ಪ ಬಿದರೂರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಶ್ರೀಶೈಲಪ್ಪ ಬಿದರೂರು ಆಕಾಂಕ್ಷಿಗಳ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆಯೇ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ರೋಣ ಹಾಗೂ ಗದಗ ಕ್ಷೇತ್ರದ ಶಾಸಕರಾಗಿ ಅವರು ಸೇವೆ ಸಲ್ಲಿಸಿದ್ದರು.1998ರಲ್ಲಿ ರೋಣ ಕ್ಷೇತ್ರದಿಂದ ಜನತಾ ಪಕ್ಷದ ಶಾಸಕರಾಗಿ ಗೆಲುವು ಸಾಧಿಸಿದ್ದ ಶ್ರೀಶೈಲಪ್ಪ ಬಿದರೂರು, 2008ರಲ್ಲಿ ಬಿಜೆಪಿಯಿಂದ ಗದಗ ಕ್ಷೇತ್ರದಿಂದ ಶಾಸಕರಾಗಿದ್ದರು. 2023ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರೋಣ ಅಥವಾ ಗದಗ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಶ್ರೀಶೈಲಪ್ಪ ಬಿದರೂರು ಬಯಸಿದ್ದರು. 60 ವರ್ಷದ ಶ್ರೀಶೈಲಪ್ಪ ಬಿದರೂರು ಅವರು ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಹೃದಯಾಘಾತದಿಂದಾಗಿ ವಾಂತಿ ಮಾಡಿಕೊಂಡಿದ್ದರು. ಆ ವೇಳೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಿಜೆಪಿಯಲ್ಲಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು.

Assembly Election: ಯಾದಗಿರಿ ಕಾಂಗ್ರೆಸ್ ಟಿಕೆಟ್‌ಗೆ 17 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ..!

ಸಭೆಯಲ್ಲಿ ವಾಂತಿ ಮಾಡಿಕೊಂಡ ಅವರನ್ನು ವರ್ತೂರು ಕೋಡಿ ಬಳಿಯ ಮಣಿಪಾಲ್ ಆಸ್ಪತ್ರೆಗೆ ಕಾರ್ಯಕರ್ತರು ಕರೆತಂದಿದ್ದರು. ಕೆಲವು ಮೂಲಗಳ ಪ್ರಕಾರ ಸಭೆ ಆರಂಭಕ್ಕೂ ಮುನ್ನವೇ ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಅರ್ಧಗಂಟೆಗಳ ಕಾಲ ಸಭೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಸಂಸದ ಡಿಕೆ ಸುರೇಶ್ ಅವರ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಶ್ರೀಶೈಲಪ್ಪ ಬಿದರೂರು ಜೊತೆ ಅವರ ಮಗ ಕೂಡ ಆಸ್ಪತ್ರೆಗೆ ಹೋಗಿದ್ದರು. ಬಿಎಸ್‌ವೈಗೆ ಆಪ್ತರಾಗಿದ್ದ ಬಿದರೂರು ಅವರು 2019ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರಿದ್ದ ಇವರು ರೋಣ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷೆಯಲ್ಲಿದ್ದರು.

ಯಾರೋ ಕಟ್ಟಿದ ಗೂಡಲ್ಲಿ ಕೂತು ಸಿದ್ದು ಅಧಿಕಾರ: ಕುಮಾರಸ್ವಾಮಿ

ನ. 27ಕ್ಕೆ ಸಭೆ ಮುಂದೂಡಿಕೆ: ಶ್ರೀಶೈಲಪ್ಪ ಬಿದರೂರು ನಿಧನ ಹಿನ್ನಲೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಭೆಯನ್ನು ನವೆಂಬರ್ 27ಕ್ಕೆ ಮುಂದೂಡಿಕೆ ಮಾಡಲಾಗಿದೆ. ಝೂಮ್ ಮೂಲಕ ಸಭೆ ಮಾಡಲಾಗುತ್ತದೆ ಎಂದು ಪಕ್ಷ ಹೇಳಿದೆ. ಇದೇ ವೇಳೆ ರಣದೀಪ್‌ ಸುರ್ಜೇವಾಲಾ ಹಾಗೂ ಡಿಕೆ ಶಿವಕುಮಾರ್‌ ಶ್ರೀಶೈಲಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಭೆಯಲ್ಲಿ ಅವರಿಗೆ ಸಂತಾಪ ಸೂಚಿಸಿ ಸಭೆಯನ್ನು ಮುಂದೂಡಿಕೆ ಮಾಡಲಾಯಿತು.