ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿರುವ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಕಿಡಿಕಾರಿದ ಸಿದ್ದರಾಮಯ್ಯ
ಬೆಂಗಳೂರು(ಜು.22): ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ರಾಷ್ಟ್ರಧ್ವಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವುದು ರಾಷ್ಟ್ರಧ್ವಜ ಹಾಗೂ ಖಾದಿ ಬಟ್ಟೆಗೆ ಮಾಡಿರುವ ಅಗೌರವ. ಕೂಡಲೇ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿರುವ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಕಿಡಿಕಾರಿರುವ ಅವರು, ರಾಷ್ಟ್ರಗೀತೆಯಷ್ಟೇ ಪವಿತ್ರವಾದ ರಾಷ್ಟ್ರಧ್ವಜ ದೇಶದ ಅಸ್ಮಿತೆ ಮತ್ತು ಸ್ವಾಭಿಮಾನದ ಸಂಕೇತ. ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ರಾಷ್ಟ್ರಧ್ವಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವುದು ರಾಷ್ಟ್ರಧ್ವಜ ಮತ್ತು ಖಾದಿ ಬಟ್ಟೆಗೆ ಮಾಡಿರುವ ಅಗೌರವ ಎಂದು ಕಿಡಿಕಾರಿದ್ದಾರೆ. ಪಾಲಿಸ್ಟರ್ ರಾಷ್ಟ್ರಧ್ವಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ, ದಶಕಗಳಿಂದ ರಾಷ್ಟ್ರಧ್ವಜವನ್ನು ತಯಾರಿಸಿ ದೇಶಕ್ಕೆ ಹಂಚುತ್ತಿದ್ದ ನಮ್ಮ ಹುಬ್ಬಳ್ಳಿಯ ‘ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘಕ್ಕೆ’ ಬಾಗಿಲು ಹಾಕುವ ಪರಿಸ್ಥಿತಿ ಎದುರಾಗಿದೆ.
ಪಾಲಿಸ್ಟರ್ ಧ್ವಜಕ್ಕೆ ಅವಕಾಶ: ಮಾರಾಟವಾಗದ ಧ್ವಜ ಕಾಂಗ್ರೆಸ್‌ನಿಂದ ಖರೀದಿ
ಬಿಜೆಪಿ ಸರ್ಕಾರವು ಪಾಲಿಸ್ಟರ್ ಧ್ವಜಗಳ ಬಳಕೆಯ ಆದೇಶವನ್ನು ತಕ್ಷಣ ವಾಪಸು ಪಡೆದು ಖಾದಿ ಬಟ್ಟೆಯ ರಾಷ್ಟ್ರಧ್ವಜಗಳ ತಯಾರಿಕೆಗಷ್ಟೇ ಅವಕಾಶ ನೀಡಬೇಕು. ಈ ಮೂಲಕ ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯಬೇಕು ಹಾಗೂ ಖಾದಿ ಗ್ರಾಮೋದ್ಯೋಗದ ಅಭಿವೃದ್ಧಿಗೆ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಕೇಸರಿ, ಬಿಳಿ ಹಸಿರು ಬಣ್ಣಗಳ ತ್ರಿವರ್ಣ ಧ್ವಜವನ್ನು 1947ರಲ್ಲಿ ಇದೇ ದಿನ (ಜು.22) ಸಂವಿಧಾನ ರಚನಾ ಸಭೆ ರಾಷ್ಟ್ರಧ್ವಜವಾಗಿ ಅಂಗೀಕರಿಸಿತ್ತು. ಈ ಬಣ್ಣಗಳು ಸಾರುವ ಶಾಂತಿ, ತ್ಯಾಗ, ಧೈರ್ಯ, ಸಾಮರ್ಥ್ಯ, ಭರವಸೆ ಮತ್ತು ಸರ್ವಸಮಾನ ಅಭಿವೃದ್ಧಿಯ ಸಂದೇಶವನ್ನು ನಾವೆಲ್ಲರೂ ಗೌರವಿಸಬೇಕು. ಕೇಂದ್ರ ಸರ್ಕಾರ ಮನಸೋಇಚ್ಛೆ ನಡೆದುಕೊಳ್ಳುವುದು ದೇಶಕ್ಕೆ ಮಾಡುವ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
