Asianet Suvarna News Asianet Suvarna News

ಭೂ ಸುಧಾರಣಾ ತಿದ್ದುಪಡಿ ದೊಡ್ಡ ಹಗರಣ: ಮಾಜಿ ಸಿಎಂ ಸಿದ್ದರಾಮಯ್ಯ

ಗಣಿ ಹಗರಣಕ್ಕಿಂತ ದೊಡ್ಡ ಹಗರಣ| ಇದರ ವಿರುದ್ಧ ಹಳ್ಳಿ ಮಟ್ಟದಿಂದ ಹೋರಾಟ: ಸಿದ್ದ​ರಾ​ಮಯ್ಯ ಎಚ್ಚ​ರಿ​ಕೆ| 1961 ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿಗೆ ಸುಗ್ರೀವಾಜ್ಞೆ ಮೂಲಕ ಕರಾಳ ತಿದ್ದುಪಡಿ ತಂದಿದ್ದಾರೆ|

Former CM Siddaramaiah Talks Over Land Reform Amendment
Author
Bengaluru, First Published Jul 17, 2020, 1:41 PM IST

ಬೆಂಗಳೂರು(ಜು.17):  ರೈತರಲ್ಲದವರೂ ಕೃಷಿ ಜಮೀನು ಖರೀದಿಸಲು ಅವಕಾಶ ಕಲ್ಪಿಸುವ ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಮೂಲಕ ರೈತರು ಹಾಗೂ ರಾಜ್ಯದ ಕೃಷಿ ಪಾಲಿಗೆ ರಾಜ್ಯ ಸರ್ಕಾರ ಕರಾಳ ಮರಣ ಶಾಸನ ಬರೆದಿದೆ. 50-60 ಸಾವಿರ ಕೋಟಿ ರು. ಮೌಲ್ಯದ ರೈತರ ಜಮೀನನ್ನು ರಿಯಲ್‌ ಎಸ್ಟೇಟ್‌, ಕಾರ್ಪೊರೇಟ್‌ ಕಂಪೆನಿಗಳ ವಶಕ್ಕೆ ನೀಡಿದೆ. ಈ ಮೂಲಕ ಗಣಿ ಹಗರಣಕ್ಕಿಂತಲೂ ದೊಡ್ಡ ಹಗರಣಕ್ಕೆ ಕೈ ಹಾಕಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೊರೋನಾ ಸಂಕಷ್ಟ ಸಮಯವನ್ನು ದುರುಪಯೋಗಪಡಿಸಿಕೊಂಡು ಹೊರಡಿಸಿರುವ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಪಕ್ಷ ಬೃಹತ್‌ ಹೋರಾಟ ನಡೆಸಲಿದೆ. ಹಳ್ಳಿ ಮಟ್ಟದಿಂದ ಹೋರಾಟವನ್ನು ಸಂಘಟಿಸಲಾಗುವುದು. ಇದಕ್ಕಾಗಿ ಬೇರೆ ಪಕ್ಷಗಳು ಹಾಗೂ ರೈತ ಸಂಘಟನೆಗಳ ಜೊತೆಗೂ ಚರ್ಚಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಎಚ್ಚರಿಸಿದರು.

ಈ ಕಾಯಿದೆ ತಿದ್ದುಪಡಿ ಮೂಲಕ ಯಾವುದೇ ಪ್ರಮಾಣದ ಆದಾಯ ಇರುವವವರು ಹಾಗೂ ಕೃಷಿಕರಲ್ಲದವರೂ ಸಹ ಕೃಷಿ ಭೂಮಿ ಖರೀದಿಸಬಹುದು. ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕಿನಿಂದ 216 ಎಕರೆವರೆಗೆ ಜಮೀನು ಮಾಲೀಕತ್ವ ಹಾಗೂ 432 ಎಕರೆವರೆಗೆ ಗೇಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ರೈತರಿಂದ ಕೃಷಿ ಜಮೀನು ಕಸಿದು ರಿಯಲ್‌ ಎಸ್ಟೇಟ್‌, ಕಾರ್ಪೊರೇಟ್‌ ಕಂಪೆನಿಗಳ ವಶಕ್ಕೆ ನೀಡಿ ರೈತರನ್ನು ಭೂ ರಹಿತರನ್ನಾಗಿ ಮಾಡುವ ಷಡ್ಯಂತ್ರ ರೂಪಿಸಲಾಗಿದೆ. ಕೃಷಿ ಜಮೀನು ಅಂಬಾನಿ, ಅದಾನಿ ಪಾಲಾಗಿ ಆಹಾರ ಉತ್ಪಾದನೆ ಕುಸಿಯಲಿದೆ. ಅಲ್ಲದೆ, ರಾಜ್ಯದಲ್ಲಿ ಮತ್ತೆ ಜಮೀನುದಾರ ಹಾಗೂ ಜಹಗೀರು ಪದ್ಧತಿ ಮತ್ತೆ ಆಚರಣೆಗೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ

50-60 ಸಾವಿರ ಕೋಟಿ ಹಗರಣ:

ತಿದ್ದುಪಡಿ ಜತೆಗೆ ಪೂರ್ವಾನ್ವಯ ಆಗುವಂತೆ ಸೆಕ್ಷನ್‌ 79 ಎ, 79 ಬಿ, ಸೆಕ್ಷನ್‌ 80ರ ಅಡಿ ದಾಖಲಾಗಿದ್ದ 13,814 ಪ್ರಕರಣ ರದ್ದು ಮಾಡಲಾಗಿದೆ. ಈ ಮೂಲಕ ರೈತರಿಂದ ಉಳ್ಳವರು ಅಕ್ರಮವಾಗಿ ಖರೀದಿ ಮಾಡಿದ್ದ ಪ್ರಕರಣಗಳು ನ್ಯಾಯಾಲಯಗಳಿಂದ ಹಿಂಪಡೆಯಲಾಗಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ 1080, ಗ್ರಾಮಾಂತರದಲ್ಲಿ 1811 ಪ್ರಕರಣ, ಕೋಲಾರ 856, ತುಮಕೂರಿನಲ್ಲಿ 985, ದಾವಣಗೆರೆಯಲ್ಲಿ 975 ರಷ್ಟಿವೆ. ಒಂದು ಪ್ರಕರಣಕ್ಕೆ 4 ಎಕರೆ ಎಂದು ಭಾವಿಸಿದರೂ 55 ಸಾವಿರ ಎಕರೆ ಉಳ್ಳವರ ಪಾಲಾಗಿದೆ. ಬೆಂಗಳೂರಿನ ಸುತ್ತಲೂ 40 ರಿಂದ 50 ಸಾವಿರ ಕೋಟಿ ರು. ಮೌಲ್ಯದ ಜಮೀನನ್ನು ಕೃಷಿಕರು ಕಳೆದುಕೊಳ್ಳಲಿದ್ದಾರೆ ಎಂದರು.

ಇದಲ್ಲದೆ ಬೆಂಗಳೂರು, ಮೈಸೂರು ಸುತ್ತಮುತ್ತ ಗೃಹ ನಿರ್ಮಾಣ ಸಂಘಗಳ ಗೃಹ ನಿರ್ಮಾಣದ ಹೆಸರಿನಲ್ಲಿ 10 ಸಾವಿರ ಕೋಟಿ ರು. ಹಗರಣ ನಡೆದಿದೆ. ಮಧ್ಯವರ್ತಿಗಳಿಂದ ಖರೀದಿಸಿರುವ 5027 ಎಕರೆ ಜಮೀನುಗಳು ಅಕ್ರಮ ಎಂದು ಸ್ವತಃ ಸರ್ಕಾರದ ರಿಜಿಸ್ಟ್ರಾರ್‌ ವರದಿ ನೀಡಿದ್ದಾರೆ ಎಂದು ಆರೋಪಿಸಿದರು.

ರೈತರ ಪಾಲಿಗೆ ಕರಾಳ ಶಾಸನ: 

1961 ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿಗೆ ಸುಗ್ರೀವಾಜ್ಞೆ ಮೂಲಕ ಕರಾಳ ತಿದ್ದುಪಡಿ ತಂದಿದ್ದಾರೆ. 1974ರಲ್ಲಿ ಈ ಕಾಯಿದೆಗೆ ದೇವವರಾಜು ಅರಸು ಅವರು ಸೆಕ್ಷನ್‌ 63, ಸೆಕ್ಷನ್‌ 79 ಎ, ಸೆಕ್ಷನ್‌ 79ಬಿ, 79ಸಿ, ಸೆಕ್ಷನ್‌ 80 ಕಾಯಿದೆ ಸೇರಿಸಿ ಕೃಷಿ ಭೂಮಿ ಉಳ್ಳವರ ಪಾಲಾಗದಂತೆ ನೋಡಿಕೊಂಡಿದ್ದರು. ಉಳುವವನೇ ಭೂಮಿಯ ಒಡೆಯ ಎಂಬ ನಿಯಮ ತಂದು 26 ಲಕ್ಷ ಗೇಣಿದಾರರನ್ನು ಭೂಮಿ ಒಡೆಯರನ್ನಾಗಿ ಮಾಡಿದ್ದರು. ಇದೀಗ ಈ ಎಲ್ಲಾ ಸೆಕ್ಷನ್‌ ತಿದ್ದುಪಡಿ ಮಾಡಿ ರೈತರಿಂದ ಮತ್ತೆ ಉಳ್ಳವರಿಗೆ ಭೂಮಿ ಕಸಿದುಕೊಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಸೆಕ್ಷನ್‌ 79 ಎ ಅಡಿ ಕೃಷಿ ಜಮೀನು ಖರೀದಿಗೆ ಇದ್ದ ಆದಾಯ ಮಿತಿ ತೆಗೆಯಲಾಗಿದೆ. ಇದೀಗ 79 ಬಿ, ಸೆಕ್ಷನ್‌ 80 ಕೂಡ ರದ್ದು ಮಾಡಿದ್ದಾರೆ. ಅಲ್ಲದೆ, ಸೆಕ್ಷನ್‌ 63ರಲ್ಲಿ ಜಮೀನು ಹೊಂದುವ ಮಿತಿಯನ್ನು ತೆಗೆದು ಒಬ್ಬ ವ್ಯಕ್ತಿ 216 ಎಕರೆ ಜಮೀನು ಹೊಂದಲು, 432 ಎಕರೆ ಗೇಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಕೇರಳದಲ್ಲಿ 20 ಎಕರೆ, ತಮಿಳುನಾಡಿನಲ್ಲಿ 30 ಎಕರೆ, ಆಂಧ್ರಪ್ರದೇಶದಲ್ಲಿ 54 ಎಕರೆ ಇದೆ. ನೀವು 432 ಎಕರೆ ಮಾಡಿಕೊಟ್ಟಿದ್ದೀರಿ. 436 ಎಕರೆ ಬಡ ರೈತ ಇಟ್ಟುಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ರೈತರು ಏನು ಮಾಡಬೇಕು?

ಕೊರೋನಾದಿಂದ ನಗರ ಬಿಟ್ಟು ಹೋಗುವವರು 2-3 ಎಕರೆ ಜಮೀನು ಇದೆ ಅಲ್ಲೇ ಜೀವನ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದೀಗ ಅದನ್ನೂ ಕಸಿಯಲು ಮುಂದಾಗಿದ್ದೀರಿ. ಜನರು ಮುಂದೆ ಹೇಗೆ ಜೀವನ ಮಾಡಬೇಕು. ರಾಜ್ಯದಲ್ಲಿ 87 ಲಕ್ಷ ರೈತ ಕುಟುಂಬಗಳಿವೆ. ಅವರ ಭವಿಷ್ಯವೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
 

Follow Us:
Download App:
  • android
  • ios