ಬೆಂಗಳೂರು(ಆ.10): ಅತಿವೃಷ್ಟಿ ಬಗ್ಗೆ ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದರೂ ಸರ್ಕಾರ ಉತ್ತರಿಸಿರಲಿಲ್ಲ. ಇದೀಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ. ಹೀಗಾಗಿ ಕಳೆದ ವರ್ಷದಂತೆ ಈ ಬಾರಿಯೂ ನೆರೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೊರೋನಾ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳ ಮೂಲಕ ಸರ್ಕಾರ ಹಾಗೂ ವಿವಿಧ ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ಕಳೆದ ವರ್ಷದ ಅತಿವೃಷ್ಟಿಯ ಹಾನಿಗೆ ಪರಿಹಾರ ಕಲ್ಪಿಸಲು ವಿಫಲವಾಗಿರುವ ಸರ್ಕಾರ ಈ ಬಾರಿಯೂ ಅದೇ ಸ್ಥಿತಿಯಲ್ಲಿದೆ. ಹೀಗಾಗಿ ಅತಿವೃಷ್ಟಿಗೆ ರಾಜ್ಯ ಸರ್ಕಾರ ಕೈ ಕಾಲು ಬಿಡುತ್ತಿದೆ. ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದೆ. ಆದರೆ ಎಂದಿನಂತೆ ಸರ್ಕಾರದಿಂದ ಉತ್ತರ ಬಂದಿಲ್ಲ. ಈಗ ನೆರೆ ಉಂಟಾದ ಬಳಿಕ ಎಚ್ಚೆತ್ತುಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಲೋಕೋಪಯೋಗಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ, ಕಳೆದ ವರ್ಷದ ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳೆಷ್ಟು? ಅವುಗಳಲ್ಲಿ ಎಷ್ಟುಪೂರ್ಣವಾಗಿ ದುರಸ್ತಿಗೊಂಡಿವೆ? ಖರ್ಚಾಗಿರುವ ಹಣ ಎಷ್ಟು? ಬಾಕಿ ಉಳಿದಿರುವ ಕಾಮಗಾರಿಗಳೆಷ್ಟು? ಈಗಲಾದರೂ ಈ ವಿವರ ನೀಡುವಿರಾ ಎಂದು ಪ್ರಶ್ನೆ ಮಾಡಿದ್ದಾರೆ.

 

'ಆಸ್ಪತ್ರೆಯಲ್ಲಿದ್ದೇನೆ, ಬರಲಾಗ್ತಿಲ್ಲ ನೆರೆ ಬಗ್ಗೆ ಎಚ್ಚರಿಕೆ ವಹಿಸಿ'

ಇನ್ನು ಕಳೆದ ವರ್ಷದಿಂದ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ನೀಡಿದ ಪರಿಹಾರ ಎಷ್ಟು? ಕಟ್ಟಿದ ಹೊಸ ಮನೆಗಳೆಷ್ಟು? ಪ್ರತಿ ಬಾರಿ ನೆರೆ ನೀರಿನಲ್ಲಿ ಮುಳುಗುವ ಮನೆಗಳೆಷ್ಟು? ಎಷ್ಟುಕುಟುಂಬಗಳು ಶೆಡ್‌ನಲ್ಲಿವೆ? ಎಷ್ಟುಕುಟುಂಬಗಳು ಬಾಡಿಗೆ ಮನೆಯಲ್ಲಿವೆ? ಈ ಮಾಹಿತಿ ನೀಡುವಿರಾ ಎಂದು ವಸತಿ ಸಚಿವ ಸೋಮಣ್ಣ ಅವರಿಗೆ ಪ್ರಶ್ನಿಸಿದ್ದಾರೆ.

ಕಳೆದ ವರ್ಷದಿಂದ ಅತಿವೃಷ್ಟಿಯಿಂದ ಹಾನಿಗೀಡಾದ ಅಂಗನವಾಡಿಗಳೆಷ್ಟು? ಅವುಗಳಲ್ಲಿ ದುರಸ್ತಿಯಾಗಿರುವುದೆಷ್ಟು? ಪುನರ್‌ ನಿರ್ಮಾಣವಾಗಿದ್ದು ಎಷ್ಟು? ಇವುಗಳ ದುರಸ್ತಿ- ಪುನರ್‌ ನಿರ್ಮಾಣಕ್ಕೆ ಆದ ಹಣ ಎಷ್ಟು? ದಯವಿಟ್ಟು ವಿವರ ನೀಡಿ ಎಂದು ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಒತ್ತಾಯಿಸಿದ್ದಾರೆ.

ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಸರ್ಕಾರಿ ಶಾಲಾ ಕಟ್ಟಡಗಳೆಷ್ಟು? ಎಷ್ಟುಕಟ್ಟಡಗಳನ್ನು ದುರಸ್ತಿಪಡಿಸಲಾಗಿದೆ ಮತ್ತು ಪುನರ್‌ ನಿರ್ಮಿಸಲಾಗಿದೆ? ದುರಸ್ತಿಗೆ ಬಾಕಿ ಉಳಿದಿರುವುದು ಎಷ್ಟು? ಇದಕ್ಕಾಗಿ ಖರ್ಚಾದ ಹಣ ಎಷ್ಟು? ಎಂಬುದರ ಬಗ್ಗೆ ವಿವರ ನೀಡಿ ಎಂದು ಪ್ರಾಥಮಿಕ ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.