ಟಿಪ್ಪು ರಾಜ್ಯಕ್ಕಾಗಿ ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಅಡ ಇಡುತ್ತಾನೆ. ಆದರೂ, ಕೆಲವರು ಟಿಪ್ಪು ಹಿಂದು ವಿರೋಧಿ ಎಂದು ಕಥೆ ಕಟ್ಟಿದರು. ಈಗ ನನ್ನನ್ನು ಹಿಂದು ವಿರೋಧಿ ಎನ್ನುತ್ತಿದ್ದಾರಲ್ಲಾ ಹಾಗೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು : ಟಿಪ್ಪು ಸುಲ್ತಾನ್ ಹಿಂದು ವಿರೋಧಿ ಎಂದು ಕೆಲವರು ಸುಮ್ಮನೆ ಕಥೆ ಕಟ್ಟುತ್ತಾರೆ. ಈಗ ನನ್ನನ್ನು ಕೆಲವರು ಹಿಂದು ವಿರೋಧಿ ಎಂದು ಬಿಂಬಿಸುತ್ತಿದ್ದಾರಲ್ಲಾ ಹಾಗೆಯೇ ಟಿಪ್ಪುವನ್ನೂ ಹಿಂದು ವಿರೋದಿ ಎಂದು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಓಕಳೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ನಗರದ ಓಕಳೀಪುರದ ಮಹೇಶ್ವರಿ ಭವನದಲ್ಲಿ ಆಯೋಜಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ನಾನು ಕೇಳಬಯಸುತ್ತೇನೆ, ಟಿಪ್ಪು ಮಾಡಿದ ತಪ್ಪೇನು? ದಿವಾನ್ ಪೂರ್ಣಯ್ಯ ಅವರು ಟಿಪ್ಪು ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಶೃಂಗೇರಿ ಮಠ ಸೇರಿದಂತೆ ಹಲವು ಹಿಂದು ದೇವಾಲಯ, ಮಠಗಳಿಗೆ ಟಿಪ್ಪು ಧಾನ ಧರ್ಮ ಮಾಡುತ್ತಾನೆ. ಇತಿಹಾಸದಲ್ಲಿ ಯಾವ ರಾಜನೂ ತನ್ನ ಮಕ್ಕಳನ್ನು ಒತ್ತೆ ಇಡಲಿಲ್ಲ. ಆದರೆ, ಟಿಪ್ಪು ರಾಜ್ಯಕ್ಕಾಗಿ ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಅಡ ಇಡುತ್ತಾನೆ. ಆದರೂ, ಕೆಲವರು ಟಿಪ್ಪು ಹಿಂದು ವಿರೋಧಿ ಎಂದು ಕಥೆ ಕಟ್ಟಿದರು. ಈಗ ನನ್ನನ್ನು ಹಿಂದು ವಿರೋಧಿ ಎನ್ನುತ್ತಿದ್ದಾರಲ್ಲಾ ಹಾಗೆ’ ಎಂದರು.
ಬಿಜೆಪಿಯವರು ಟಿಪ್ಪು ಜಯಂತಿ ವಿಚಾರದಲ್ಲಿ ಅಪಪ್ರಚಾರ ಮಾಡಿದರು. ಹಾಗಾಗಿ ಟಿಪ್ಪು ಜಯಂತಿಯನ್ನು ಹಲವರು ವಿರೋಧಿಸಿದರು. ಅಲ್ಲದೆ, ನನ್ನನ್ನೂ ಹಿಂದು ವಿರೋಧಿ, ಧರ್ಮ ವಿರೋಧಿ ಅಂದರು. ನಾನು ಹೇಗೆ ಹಿಂದು ವಿರೋಧಿ ಆಗುತ್ತೇನೆ? ನನ್ನ ಹೆಸರು ಸಿದ್ದರಾಮಯ್ಯ. ನಮ್ಮ ಅಪ್ಪ ಸಿದ್ದರಾಮಗೌಡ. ಊರು ಸಿದ್ದರಾಮನಹುಂಡಿ. ನಾನೂ ದೇವರನ್ನು ನಂಬುತ್ತೇನೆ. ಪೂಜಿಸುತ್ತೇನೆ. ನನ್ನ ಹೆಂಡತಿ ಮಕ್ಕಳು ದೇವರನ್ನು ಪೂಜೆ ಮಾಡುತ್ತಾರೆ. ಹೀಗಿರುವಾಗ ನಾನು ಹೇಗೆ ಹಿಂದು ವಿರೋಧಿ ಆಗುತ್ತೇನೆ ಎಂದು ಪ್ರಶ್ನಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ‘ಅನ್ನಭಾಗ್ಯ’ ಯೋಜನೆ ಅಕ್ಕಿಯನ್ನು ಬರೀ ಮುಸ್ಲಿಮರು ತಗೊಳ್ತಿದ್ರಾ? ಸರ್ಕಾರಿ ಶಾಲೆಯಲ್ಲಿನ ಕ್ಷೀರಭಾಗ್ಯ ಯೋಜನೆಯಿಂದ ಬರೀ ಮುಸ್ಲಿಂ ಮಕ್ಕಳು ಹಾಲು ಕುಡಿದರಾ? ಹಿಂದು ಮಕ್ಕಳಿಗೆ ಯೋಜನೆ ಸಿಕ್ಕಿಲ್ಲವಾ? ಸಾಲ ಮನ್ನಾವನ್ನು ಹಿಂದುಗಳನ್ನು ಬಿಟ್ಟು ಮುಸ್ಲಿಮರಿಗೆ ಮಾತ್ರ ಮಾಡಿದೆವಾ? ಇಲ್ವಲ್ಲ.
ಎಲ್ಲ ಸರ್ಕಾರಿ ಕಚೇರಿಯಲ್ಲಿ ಬಸವಣ್ಣನ ಫೊಟೊ ಇಡಿ ಅಂತ ಹೇಳಿದ್ದು ನಾನು. ವಿಜಯಪುರ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಟ್ಟಿದ್ದು ನಾನು. ಕೆಂಪೇಗೌಡ ಜಯಂತಿ, ವಿಶ್ವಕರ್ಮ ಜಯಂತಿ, ಮಾಚಿದೇವರ ಜಯಂತಿ ಸೇರಿದಂತೆ 13 ಜಯಂತಿಗಳನ್ನು ನಾನು ಸರ್ಕಾರದ ವತಿಯಿಂದ ಆಚರಣೆಗೆ ತಂದಿದ್ದೇನೆ. ಅದರಂತೆಯೇ ಟಿಪ್ಪು ಜಯಂತಿಯನ್ನೂ ಮಾಡಿದೆ. ಅಷ್ಟಕ್ಕೇ ನನ್ನ ವಿರುದ್ಧ ಅಪಪ್ರಚಾರ ಮಾಡಿ, ನನ್ನನ್ನು ಧರ್ಮ ವಿರೋಧಿ, ದೇವರ ವಿರೋಧಿ ಎಂದರು. ನನ್ನನ್ನು ಹಾಗೆನ್ನುವವರು ಏನೇನು ಮಾಡಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಯವರ ವಿರುದ್ಧ ಹರಿಹಾಯ್ದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಬೆಳ್ಳಿ ಗದೆ ನೀಡಿ ಅಭಿನಂದಿಸಲಾಯಿತು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿಮತ್ತಿತರರು ಉಪಸ್ಥಿತರಿದ್ದರು.
ಜಾತಿ, ಧರ್ಮ ಅಫೀಮು ಇದ್ದಂತೆ
ನನ್ನ ನೇತೃತ್ವದ ಕಳೆದ ಕಾಂಗ್ರೆಸ್ ಸರ್ಕಾರ ಎಷ್ಟೇ ಉತ್ತಮ ಕೆಲಸ ಮಾಡಿದರೂ ಅದ್ಯಾವುದನ್ನೂ ಪರಿಗಣಿಸಿ ಜನರು ಕಳೆದ ಚುನಾವಣೆಯಲ್ಲಿ ಮತ ಹಾಕಲಿಲ್ಲ. ಜಾತಿ, ಧರ್ಮ ಹಿಡಿದುಕೊಂಡು ವೋಟು ಮಾಡಿದರು. ಜಾತಿ-ಧರ್ಮ ಎಂಬುದು ಅಫೀಮು ಇದ್ದಂತೆ ಎಂದು ಇದೇ ವೇಳೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ನಮ್ಮ ಸರ್ಕಾರದ ಕೆಲಸ ನೋಡಿ ಜನ ಮತ ಹಾಕಲಿಲ್ಲ. ಕಳೆದ ಚುನಾವಣೆ ವೇಲೆ ಕರಾವಳಿ ಕಡೆಯ ಬಿಜೆಪಿಯವರು ಬಹಳಷ್ಟುಅಪಪ್ರಚಾರ ಮಾಡಿದರಂತೆ. ನಿಮ್ಮ ಮಕ್ಕಳು ಮನೆಗೆ ಸುರಕ್ಷಿತವಾಗಿ ಬರಬೇಕು ಅಂದ್ರೆ ಬಿಜೆಪಿಗೆ ಮತ ಹಾಕ್ರಿ. ದೇವಸ್ಥಾನದಲ್ಲಿ ಪೂಜೆ ಮಾಡಬೇಕು ಅಂದ್ರೆ ಬಿಜೆಪಿಗೆ ಮತ ಹಾಕಿ ಅಂತ ಅಪಪ್ರಚಾರ ಮಾಡಿದರಂತೆ. ನಾನು ಅಲ್ಲಿಗೆ ಹೋದಾಗ ಜನರೇ ಇದನ್ನು ಹೇಳಿದರು. ಯಾವ ಧರ್ಮದಲ್ಲಿ ಸಮಾನತೆ, ಮನುಷ್ಯತ್ವ ಇಲ್ಲವೋ ಆ ಧರ್ಮಕ್ಕೆ ನನ್ನ ವಿರೋಧ ಇದೆ ಎಂದು ಖಡಕ್ಕಾಗಿ ಹೇಳಿದರು.
ನಮ್ಮ ರಾಜ್ಯದಲ್ಲಿ ಮಾಡಿದಷ್ಟುಜನಪರ ಕಾರ್ಯಗಳನ್ನು ದೇಶದ ಯಾವ ರಾಜ್ಯಗಳೂ ಮಾಡಲಿಲ್ಲ. ಹಾಗಾದ್ರೆ ಯಾಕೆ ಕಾಂಗ್ರೆಸ್ ಬೆಂಬಲಿಸಲಿಲ್ಲ? ನನ್ನನ್ನು ಏಕೆ ಸೋಲಿಸಿದರು? ಧರ್ಮ, ಜಾತಿ ಎನ್ನುವುದು ಅಫೀಮು ಇದ್ದಂತೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಹಾಗಾಗುವುದಿಲ್ಲ, ಜನರಿಗೆ ತಮ್ಮ ತಪ್ಪು ಮನವರಿಕೆಯಾಗಿದೆ ಎಂದು ಭಾವಿಸಿದ್ದೇನೆ ಎಂದರು.
