ಅಸೆಂಬ್ಲಿ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಜೆಡಿಎಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜಾತ್ಯತೀಯ ಸಿದ್ಧಾಂತ ಬಿಟ್ಟು ಮೃದು ಹಿಂದುತ್ವದತ್ತ ಹೊರಳುತ್ತಿದ್ದಾರಾ?

ಬಂಟ್ವಾಳ್ (ಡಿ.10): ಪ್ರಖರ ಹಿಂದುತ್ವವಾದಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಒಡೆತನದ ಶಾಲೆಯಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಜೆಡಿಎಸ್ ನಾಯಕ ಎಚ್ . ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು. ಬಿಜೆಪಿ ಜೊತೆಗಿನ ಮೈತ್ರಿ ಬಳಿಕ ಅವರು ಆರ್‌ಎಸ್‌ಎಸ್ ನಾಯಕರ ಶಾಲೆಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪಕ್ಷ ವಿರೋಧಿ ಚಟುವಟಿಕೆ; ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ,ಕೇರಳದ ಸಿಕೆ ನಾನು ಉಚ್ಚಾಟನೆ

40 ವಿಶೇಷ ಚೇತನ ಮಕ್ಕಳು ಸೇರಿದಂತೆ ಶಿಶುಮಂದಿರ, ಪ್ರಾಥಮಿಕ, ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ತರಗತಿಗಳ ಒಟ್ಟು 3,500 ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಈ ವೇಳೆ ಎಚ್‌ಡಿ ಕುಮಾರಸ್ವಾಮಿ ಅವರ ಜೊತೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚಿತ್ರನಟ ಪ್ರಕಾಶ್ ಬೆಳವಾಡಿ, ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್‌, ವಿಪ ಸದಸ್ಯ ಬೋಜೇಗೌಡ ಸೇರಿದಂತೆ 100ಕ್ಕೂ ಹೆಚ್ಚು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 15ರಿಂದ 20 ಸಾವಿರ ಮಂದಿ ಮಕ್ಕಳ ಕ್ರೀಡೋತ್ಸವ ವೀಕ್ಷಣೆಗೆ ಆಗಮಿಸಿದ್ದರು.

ಚುನಾವಣಾ ಸೋಲಿನ ಬಳಿಕ ಸಾಫ್ಟ್ ಹಿಂದುತ್ವ:

ಅಸೆಂಬ್ಲಿ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಜೆಡಿಎಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜಾತ್ಯತೀಯ ಸಿದ್ಧಾಂತ ಬಿಟ್ಟು ಮೃದು ಹಿಂದುತ್ವದತ್ತ ಹೊರಳುತ್ತಿದ್ದಾರಾ? ರಾಷ್ಟ್ರೀಯ ಸ್ವಯಂಸೇವಕ ಸಂಘ ಸುಪರ್ದಿಯ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವಕ್ಕೆ ವಿಶೇಷ ಅತಿಥಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಭಾಗಿಯಾಗಿರುವುದುಕ ಇಂಥದ್ದೊಂದು ಅನುಮಾನ, ಚರ್ಚೆಯನ್ನು ಹುಟ್ಟುಹಾಕಿರುವುದು ಸುಳ್ಳಲ್ಲ.

ಈ ಹಿಂದೆ ಕರಾವಳಿಯ ಆರ್‌ಎಸ್‌ಎಸ್‌ ಶಕ್ತಿ ಕೇಂದ್ರ ಎಂದೇ ಕರೆಸಿಕೊಳ್ಳುತ್ತಿರುವ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅವರ ನೇತೃತ್ವದ ಶ್ರೀರಾಮ ವಿದ್ಯಾಕೇಂದ್ರ ಇದಾಗಿದ್ದು, ಇಲ್ಲಿ ಹಿಂದುತ್ವದ ಜತೆಗೆ ಧರ್ಮ ಶಿಕ್ಷಣವನ್ನೂ ನೀಡಲಾಗುತ್ತಿದೆ. 

'ಸಿಎಂ ಇಬ್ರಾಹಿಂಗೂ ಹಣ ಕೊಟ್ಟಿದ್ದೆ'; ಎಚ್‌ಡಿಕೆ ಹಣ ಪಡೆದಿದ್ದಾರೆ ಎಂಬ ಇಬ್ರಾಹಿಂ ಆರೋಪಕ್ಕೆ ಶರವಣ ತಿರುಗೇಟು!

ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಜೆಡಿಎಸ್‌ ಹೊಂದಾಣಿಕೆ ಮಾತುಕತೆ ನಡೆದ ಬಳಿಕ ಕುಮಾರಸ್ವಾಮಿ ಅವರು ಜಾತ್ಯತೀಯ ನಿಲುವಿನಿಂದ ನಿಧಾನವಾಗಿ ಹಿಂದೆ ಸರಿಯುವಂತೆ ಗೋಚರವಾಗುತ್ತಿದೆ. ದತ್ತಪೀಠದಲ್ಲಿ ದತ್ತಮಾಲೆ ಧಾರಣೆ ಮಾಡಿ ತೆರಳುವ ಬಗ್ಗೆಯೂ ಇತ್ತೀಚೆಗೆ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹಿಂದೆ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ವಿರುದ್ಧವೇ ಗುಡುಗಿದ್ದ ಕುಮಾರಸ್ವಾಮಿ ಈಗ ಅವರದೇ ಶಾಲೆಗೆ ಭೇಟಿ ನೀಡುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಮೂಲಕ ಕುಮಾರಸ್ವಾಮಿ ಅವರು ಮೃದು ಹಿಂದುತ್ವವನ್ನು ಅಪ್ಪಿಕೊಳ್ಳಲು ಹೊರಟಿದ್ದಾರೆ ಎಂಬ ರಾಜಕೀಯ ವಿಶ್ಲೇಷಣೆಗೆ ಈ ವಿದ್ಯಮಾನ ಇಂಬು ನೀಡುವಂತಿದೆ.