ಚನ್ನ​ಪ​ಟ್ಟಣ[ಜ.28]: ಮಂಗ​ಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಸಿಕ್ಕ ಪ್ರಕ​ರಣಕ್ಕೆ ಸಂಬಂಧಿ​ಸಿ​ದಂತೆ ನಾನು ನೀಡಿದ ಮಿಣಿ ಮಿಣಿ ಪೌಡರ್‌ ಹೇಳಿ​ಕೆ​ಯನ್ನು ತಮ​ಗಿಷ್ಟಬಂದಂತೆ ತಿರುಚಿ ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ವೈರಲ್‌ ಮಾಡು​ತ್ತಿ​ರು​ವುದು ಬಿಜೆಪಿಯವರ ವಿಕೃತ ಮನೋ​ಭಾ​ವನೆ. ಇದು ಅವ​ರ​ಲ್ಲಿನ ಅಸ​ಹ್ಯ​ಕ​ರ​ವಾದ ಆಲೋ​ಚ​ನೆ​ಗ​ಳನ್ನು ತೋರಿ​ಸು​ತ್ತದೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಕಿಡಿ​ಕಾ​ರಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಂಗಲ್‌ ಆಂಜನೇಯನಿಗೆ ಸೋಮ​ವಾರ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವನದಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೇ ಇರುವವನು ನಾನು. ತಪ್ಪು ಮಾಡಿದರೆ ಯಾವುದೇ ಅಂಜಿಕೆಯಿಲ್ಲದೇ ಅದನ್ನು ಬಹಿರಂಗವಾಗಿ ಹೇಳುತ್ತೇನೆ. ಆದರೆ, ಬಿಜೆಪಿ ಕಾರ್ಯಕರ್ತರು ನನ್ನ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ ಎಂದರು.

ನ್ಯೂಜಿಲೆಂಡಲ್ಲೂ ಹೌದು ಹುಲಿಯಾ, ಮಿಣಿ ಮಿಣಿ ಪೌಡರ್‌!

ದಿನ​ಪ​ತ್ರಿ​ಕೆ​ಯೊಂದ​ರಲ್ಲಿ ಬಾಂಬ್‌ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಪಟಾಕಿಯಲ್ಲಿ ಬಳಸುವ ಮಿಣಿ ಮಿಣಿ ಪುಡಿ ಪೌಡರ್‌ ಎಂಬ ಪದ ಪ್ರಕಟವಾಗಿತ್ತು. ಅದನ್ನು ಗಮನಿಸಿ ನಾನು ಆ ಹೇಳಿಕೆ ನೀಡಿದ್ದೇನೆ ಅಷ್ಟೇ. ಆದರೆ, ಬಿಜೆಪಿ ಮುಖಂಡರು ಅದನ್ನೇ ತೀರಾ ಕೆಟ್ಟದಾಗಿ ದೊಡ್ಡಮಟ್ಟದಲ್ಲಿ ಬಿಂಬಿಸಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇನ್ನು ಅವರ ಕಾರ್ಯಕರ್ತರು ಇಲ್ಲಸಲ್ಲದನ್ನು ಕಥೆ ಕಟ್ಟಿವೈರಲ್‌ ಮಾಡಿಕೊಂಡು ಹೊರಟಿದ್ದಾರೆ. ಈ ಮೂಲಕ ಆ ಪಕ್ಷದ ಕೀಳು ಅಭಿರುಚಿ ಸಂಸ್ಕೃತಿ ಏನು ಎಂಬುದನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹರಿಹಾಯ್ದರು.