ಬೆಂಗಳೂರು(ಸೆ.12): ಡ್ರಗ್ಸ್ ಜಾಲದಲ್ಲಿ ಕೇವಲ ಚಿತ್ರರಂಗದ ಕ್ಷೇತ್ರದವರು ಮಾತ್ರ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಉದ್ಯಮಿ, ರಾಜಕಾರಣ ಸೇರಿದಂತೆ ಬೇರೆ ಬೇರೆ ಕ್ಷೇತ್ರದವರು ಡ್ರಗ್ಸ್‌ ಜಾಲದಲ್ಲಿ ಇರಬಹುದು. ಈ ಜಾಲದಲ್ಲಿ ಯಾರೇ ಭಾಗಿಯಾಗಿದ್ದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡ್ರಗ್ಸ್‌ ಜಾಲದ ಕುರಿತು ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಯಾರಾರ‍ಯರು ಈ ಜಾಲದಲ್ಲಿದ್ದಾರೋ ಅವರೆಲ್ಲರ ಬಣ್ಣ ಹೊರಗೆ ಬರುತ್ತದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ. ಸಿನಿಮಾ ಕ್ಷೇತ್ರದವರು ಮಾತ್ರ ಈ ದಂಧೆಯಲ್ಲಿಲ್ಲ. ರಾಜಕಾರಣ, ಉದ್ಯಮ ಸೇರಿದಂತೆ ಇತರೆ ಕ್ಷೇತ್ರದವರೂ ಇರಬಹುದು. ಯಾರೇ ಭಾಗಿಯಾಗಿದ್ದರೂ ಅಂತಹರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಯಡಿಯೂರಪ್ಪನವರನ್ನು ಭೇಟಿಯಾಗಿದ್ಯಾಕೆ? ಕೊನೆಗೂ ಸ್ಪಷ್ಟನೆ ಕೊಟ್ಟ ಕುಮಾರಸ್ವಾಮಿ

ಡ್ರಗ್ಸ್‌ ಜಾಲ ನಿನ್ನೆ-ಮೊನ್ನೆಯಿಂದ ಆರಂಭಗೊಂಡಿಲ್ಲ. ಪ್ರಸ್ತುತ ಡ್ರಗ್ಸ್‌ ಜಾಲ ಸದ್ದು ಮಾಡಿರುವುದರಿಂದ ಸಾರ್ವಜನಿಕವಾಗಿ ಜಾಗೃತಿ ಮೂಡುವಂಥದ್ದಾಗಿದೆ. ಡ್ರಗ್ಸ್‌ ಜಾಲ ಕಡಿವಾಣಕ್ಕೆ ಸರ್ಕಾರ ಮುಂದಾಗಬೇಕು. ಕಠಿಣ ಕ್ರಮ ಕೈಗೊಂಡರೆ ಮಾತ್ರ ಜಾಲವನ್ನು ನಿಯಂತ್ರಿಸಲು ಸಾಧ್ಯ. ಸಮಾಜದಲ್ಲಿ ಉತ್ತಮ ಬದುಕು ನಿರ್ಮಾಣ ಮಾಡುವುದು ಸರ್ಕಾರದ ಮುಂದಿರುವ ಸವಾಲು. ಇದನ್ನು ಯಶಸ್ವಿಯಾಗಿ ನಿರ್ವಹಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.