ಚೀನಾದ ಆಂತರಿಕ ವಿಚಾರದಲ್ಲಿ ಅಮೆರಿಕದ ಹಸ್ತಕ್ಷೇಪದ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಕರ್ನಾಟಕದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭಾಗವಹಿಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ಧರಾಮಯ್ಯ, ಇದರಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು (ಆ. 27): ಚೀನಾದ ಆಂತರಿಕ ವಿಚಾರದಲ್ಲಿ ಅಮೆರಿಕದ ಹಸ್ತಕ್ಷೇಪದ ಕುರಿತಾಗಿ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಭಾಗಿಯಾಗುತ್ತಾರೆ ಎಂದು ಇಂಡಿಯಾ-ಚೀನಾ ಫ್ರೆಂಡ್‌ಶಿಪ್ ಅಸೋಸಿಯೇಷನ್ ತನ್ನ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿತ್ತು. ಇದು ವಿವಾದವಾಗುವ ಸೂಚನೆಯನ್ನು ಅರಿತ ಸಿದ್ಧರಾಮಯ್ಯ ಇದಕ್ಕೆ ಸ್ಪಷ್ಟನೆ ನೀಡಿದ್ದು, ತಾವು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಭಾನುವಾರ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಸ್ಪಷ್ಟವಾಗಿ ನಿರಾಕರಿಸಿದ್ದೆ. ನನ್ನ ನಿರಾಕರಣೆ ಇದ್ದರೂ ಆಮಂತ್ರಣ ಪತ್ರದಲ್ಲಿ ಹೆಸರಿದೆ. ಸೈದ್ದಾಂತಿಕವಾಗಿ ನನ್ನ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ದವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಚೀನಾದ ಆಂತರಿಕ ವ್ಯವಹಾರಗಳಲ್ಲಿ 'ಯುಎಸ್ ಸಾಮ್ರಾಜ್ಯಶಾಹಿ'ಯ ಹಸ್ತಕ್ಷೇಪವನ್ನು ಪ್ರತಿಭಟಿಸಲು, ಭಾರತದಲ್ಲಿರುವ ಚೀನಾ ರಾಯಭಾರಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಾಗಿರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಿದ್ಧರಾಮಯ್ಯ ಮಾತ್ರ ಈ ಪ್ರತಿಭಟನೆಯಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದರ ನಡುವೆ ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದೆ.
ಸಿದ್ಧರಾಮಯ್ಯ ಅಲ್ಲದೆ ಕಾಂಗ್ರೆಸ್ ಮುಖಂಡ ಎಚ್‌ಸಿ ಮಹದೇವಪ್ಪ, ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಕೆ.ಶ್ರೀನಿವಾಸ್ ಗೌಡ ಕೂಡ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಇಂಡಿಯಾ-ಚೀನಾ ಫ್ರೆಂಡ್‌ಶಿಪ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿರುವ ಶಾಸಕ ಕೆ.ಶ್ರೀನಿವಾಸ್ ಗೌಡ ಅವರ ಮನವಿಯ ಮೇರೆಗೆ ಸಿದ್ದರಾಮಯ್ಯ ಭಾಗವಹಿಸುತ್ತಾರೆ ಎಂದು ವರದಿಯಾಗಿತ್ತು. ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಹಾಗೂ ಚೈನೀಸ್ ಫೋಟೋಗ್ರಾಫಿಕ್ ಪ್ರದರ್ಶನವನ್ನೂ ಆಯೋಜನೆ ಮಾಡಲಾಗಿತ್ತು. ಸಿದ್ಧರಾಮಯ್ಯ ಅವರು ಭಾಗವಹಿಸಲು ನಿರಾಕರಿಸಿದ ಬೆನ್ನಲ್ಲಿಯೇ ಎಲ್ ಹನುಮಂತಯ್ಯ ಕೂಡ ಇದೇ ರೀತಿಯ ಟ್ವೀಟ್ ಮಾಡಿದ್ದು ತಾವು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
ಎಚ್ ಸಿ ಮಹದೇವಪ್ಪ ಸ್ಪಷ್ಟನೆ: ಕರ್ನಾಟಕದಲ್ಲಿರುವ ಇಂಡೋ - ಚೀನಾ ಸೌಹಾರ್ದ ವೇದಿಕೆಯು ನಮ್ಮ ಗಮನಕ್ಕೆ ತಾರದೆ ನನ್ನೊಡನೆ ಚರ್ಚಿಸದೇ "ಚೀನಾದ ಆಂತರಿಕ ವ್ಯವಹಾರದಲ್ಲಿ ಅಮೆರಿಕಾದ ಹಸ್ತಕ್ಷೇಪ" ಎಂಬ ವಿಷಯದ ಕುರಿತು ಸಂವಾದ ನಡೆಸಲು ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದೆ. ಈ ಆಹ್ವಾನ ಪತ್ರಿಕೆಯನ್ನು ನೋಡಿದ ದಿನವೇ ಇದೊಂದು ಅಸಂಬದ್ಧ ಹಾಗೂ ನಮ್ಮ ರಾಷ್ಟ್ರೀಯ ಆಶಯಕ್ಕೆ ಪೂರಕವಲ್ಲದ ವಿಷಯ ಎಂದು ಅನ್ನಿಸಿದ್ದರಿಂದ ಈ ಸಂವಾದದಲ್ಲಿ ಪಾಲ್ಗೊಳ್ಳಬಾರದು ಎಂದು ಈಗಾಗಲೇ ನಾನು ನಿರ್ಧರಿಸಿದ್ದೆ. ಆದರೆ, ಈ ಸಂಗತಿಯು ಇದೀಗ ಚರ್ಚಾ ವಿಷಯವಾಗಿ ಮುನ್ನಲೆಗೆ ಬಂದಿದ್ದು " ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇನೆ" ಎಂದು ಎಚ್‌ಸಿ ಮಹದೇವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟ್ವಿಟರ್, ಫೇಸ್‌ಬುಕ್‌ನಲ್ಲಿ ಟೀಕೆ: ಇನ್ನು ಈ ಆಮಂತ್ರಣ ಪತ್ರಿಕೆಯನ್ನು ಪತ್ರಕರ್ತರು ಹಾಗೂ ಅಸೋಸಿಯೇಷನ್‌ನ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡ ಬೆನ್ನಲ್ಲಿಯೇ, ಸಿದ್ಧರಾಮಯ್ಯ ಯಾಕಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎನ್ನುವುದೇ ಅಚ್ಚರಿಗೆ ಕಾರಣವಾಗಿತ್ತು. ರಾಜ್ಯಕ್ಕಾಗಿ, ಭಾರತಕ್ಕಾಗಿ ಸಂಬಂಧವೇ ಪಡದ ವಿಚಾರದಲ್ಲಿ ಸಿದ್ಧರಾಮಯ್ಯ ಭಾಗಹಿಸುವುದರ ಹಿಂದಿನ ಕಾರಣವೇನು ಎನ್ನುವುದೇ ಎಲ್ಲಾ ಅಚ್ಚರಿಕೆ ಕಾರಣವಾಗಿತ್ತು.
ಇದರ ನಡುವೆ ಕೆಲವರು, ಇದು ಕಾಂಗ್ರೆಸ್ ಪಕ್ಷ ಹಾಗೂ ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಇರುವ ಲಿಂಕ್ ಅನ್ನು ತೋರಿಸುತ್ತದೆ. ಈ ಕುರಿತಾಗೊ ಗಂಭೀರವಾದ ತನಿಖೆ ನಡೆಯಬೇಕು ಎಂದು ಬರೆದುಕೊಂಡಿದ್ದಾರೆ. ಇದು ಬಹಳ ಗಂಭೀರವಾದ ವಿಚಾರ, ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟವಾದ ತನಿಖೆ ನಡೆಸಬೇಕು. ಇದನ್ನು ತಕ್ಷಣವೇ ಮಾಡಬೇಕು ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಅದಲ್ಲದೆ, ಆಮಂತ್ರಣ ಪತ್ರಿಕೆಯನ್ನು ಕ್ರಾಪ್ ಮಾಡಿ ಟ್ವೀಟ್ ಮಾಡಿದ ಬಗ್ಗೆಯೂ ವಿರೋಧ ವ್ಯಕ್ತವಾಗಿದೆ.
'ಕಾಂಗ್ರೆಸ್ - ಚೀನಾ ಬಾಯೀ ಬಾಯೀ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ನಿಮ್ಮ ಅನುಮತಿ ಇಲ್ಲದೆ ಅವರು ನಿಮ್ಮ ಹೆಸರು ಹಾಕಿರಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ನಿಮ್ಮ ಅನುಮತಿ ಇಲ್ಲದೆ ಅವರು ನಿಮ್ಮ ಹೆಸರು ಬಳಸಿಕೊಂಡಿದ್ದರೆ ಅವರ ಮೇಲೆ ಕೇಸು ದಾಖಲಿಸಿ, ಹೇಗಿದ್ದರೂ ನೀವೇ ಲಾಯರ್ ಓದಿದ್ದೀರಿ' ಎಂದು ಪ್ರವೀಣ್ ಕುಮಾರ್ ಮಾವಿನಕಾಡು ಎನ್ನುವ ವ್ಯಕ್ತಿ ಸಿದ್ಧರಾಮಯ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ನಿಮ್ಮ ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯನ್ನು ತೆಗೆದು ಹಾಕಿದರೆ ಮಾತ್ರ ನಿಮ್ಮ ಪಕ್ಷ ಉನ್ನತಿಯ ಕಡೆ ಸಾಗುವುದು.... ಅವರ ಕುಟುಂಬಸ್ಥರಿಗೆ ನೀವು ದಾಸರಾಗಬೇಡಿ, ನಮ್ಮ ಜನ ನಿಮ್ಮ ಪಕ್ಷದ ಪರವಾಗಿ ಒಂದು ಹೊಸ ನಾಯಕತ್ವವನ್ನು ಬಯಸುತ್ತಿರುವವರು ಹೊರತು ನೆಹರು ಕುಟುಂಬದ ದಾಸರಾಗಲ್ಲ...' ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.
'ರೀ, ನಿಮ್ಮ ಗದ್ದಾರ್ ಪಕ್ಷದ ಚೀನಾ ನೀತಿಯೇನೆಂದು ಇಡೀ ಪ್ರಪಂಚಕ್ಕೇ ತಿಳಿದಿದೆ. ಅಲ್ಲಾ ರೀ, ಯಾರನ್ನ ಯಾಮಾರಿಸಲಿಕ್ಕೆ ಯೋಚಿಸಿದ್ದೀರಿ? ನಿಮ್ಮ ಅನುಮತಿಯಿಲ್ಲದೆ ಅವರ್ಯಾಕ್ರೀ ಹಾಕ್ತಾರೆ? ಆ ಆಹ್ವಾನಪತ್ರಿಕೆಯ ತುಂಬಾ ಕಾಂಗೀ ಕಮಂಗಿಗಳೇ ಇದ್ದಾರಲ್ಲ? ಇದು ಹೇಗೆ ಸಾಧ್ಯವಾಯಿತು?' ಎಂದು ಪ್ರದಿ ಬೆಳವಾಡಿ ಎನ್ನುವ ವ್ಯಕ್ತಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.
