Asianet Suvarna News Asianet Suvarna News

'40 ವರ್ಷ ಹಿಂದೆ ಇದ್ದ RSS ಬೇರೆ, ಈಗಿನ ಆರ್‌ಎಸ್‌ಎಸ್‌ ಬೇರೆ'

* ವಿವಿ ಸಿಂಡಿಕೇಟ್‌ಗಳಲ್ಲಿ ಆರೆಸ್ಸೆಸ್‌ ದರ್ಬಾರ್‌: ಎಚ್‌ಡಿಕೆ

* 40 ವರ್ಷ ಹಿಂದೆ ಇದ್ದ ಆರ್‌ಎಸ್‌ಎಸ್‌ ಬೇರೆ, ಈಗಿನ ಆರ್‌ಎಸ್‌ಎಸ್‌ ಬೇರೆ: ಮತ್ತೆ ವಾಗ್ದಾಳಿ

* ಸಿಂಡಿಕೇಟ್‌ಗಳಿಗೆ ಆರೆಸ್ಸೆಸ್‌ ಮೂಲದವರ ನೇಮಕ

* ಕೆಲಸ ಮಾಡಿಕೊಡಲು 1-2 ಲಕ್ಷ ರು. ಕೇಳ್ತಾರೆ: ಮಾಜಿ ಸಿಎಂ

Former Chief Minister HD Kumaraswamy again slams RSS pod
Author
Bangalore, First Published Oct 17, 2021, 8:02 AM IST
  • Facebook
  • Twitter
  • Whatsapp

ಚನ್ನಪಟ್ಟಣ(ಅ.17): ದೇಶದಲ್ಲಿ ಆರೆಸ್ಸೆಸ್‌(RSS) ಆಳ್ವಿಕೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಆಡಳಿತಾರೂಢ ಬಿಜೆಪಿಯಿಂದ(BJP) ತೀವ್ರ ಟೀಕೆಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಇದೀಗ, ಆರ್‌ಎಸ್‌ಎಸ್‌ ಮೂಲದವರನ್ನು ವಿಶ್ವವಿದ್ಯಾನಿಲಯಗಳ(University) ಸಿಂಡಿಕೇಟ್‌ಗೆ ನೇಮಕ ಮಾಡಲಾಗಿದ್ದು ಇವರು ಕೆಲಸ ಮಾಡಿಕೊಡಲು ಸಾರ್ವಜನಿಕರಿಂದ ಒಂದು, ಎರಡು ಲಕ್ಷ ರು. ಲಂಚ ಪಡೆಯುತ್ತಿದ್ದಾರೆ ಎಂದು ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

"

ಕಳೆದ ಕೆಲ ದಿನಗಳಿಂದ RSS ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಅವರು ಶನಿವಾರ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮತ್ತೆ ಆರೆಸ್‌್ಸಸ್‌ ವಿರುದ್ಧ ಹರಿಹಾಯ್ದು 40 ವರ್ಷ ಹಿಂದೆ ಇದ್ದ ಆರೆಸ್ಸೆಸ್ಸೇ ಬೇರೆ, ಇಂದು ಇರುವ ಆರೆಸ್ಸೆಸ್ಸೇ ಬೇರೆ ಎಂದು ಹೇಳಿದರು.

ಇಟ್ಟಿಗೆ ಹಣ ಏನಾಯ್ತು?:

1989ರಲ್ಲಿ ಅಡ್ವಾಣಿ ಅವರು ರಾಮಮಂದಿರ ನಿರ್ಮಾಣ ಮಾಡುವುದಾಗಿ ರಥಯಾತ್ರೆ ನಡೆಸಿ ಹಳ್ಳಿ ಹಳ್ಳಿಗಳಲ್ಲಿ ಇಟ್ಟಿಗೆ, ಹಣವನ್ನು ಸಂಗ್ರಹಿಸಿದರು. ಈ ಹಣ ಏನಾಯ್ತು? ಎಲ್ಲಿ ಇಟ್ಟಿದ್ದಾರೆ? ಆ ಹಣಕ್ಕೆ ಇದುವರೆಗೆ ಎಷ್ಟುಬಡ್ಡಿ ಬಂದಿದೆ ಎಂಬುದನ್ನು ಇಂದಿಗೂ ಬಹಿರಂಗಪಡಿಸಿಲ್ಲ. ರಾಮನ ಹೆಸರಿನಲ್ಲಿ ಅಮಾಯಕರಿಂದ ಇವರು ಹಣ ಸಂಗ್ರಹಿಸಿದ್ದು, ಲೆಕ್ಕಬುಕ್ಕ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ಸಹ ರಾಮಮಂದಿರದ ಹೆಸರಿನಲ್ಲಿ ಸಾಕಷ್ಟುಹಣ ಸಂಗ್ರಹಣೆ ಮಾಡಿದ್ದಾರೆ. ಇದರ ಲೆಕ್ಕವನ್ನು ಯಾರಿಗೆ ಕೊಡುತ್ತಾರೆ? ರಾಮನ ಹೆಸರನ್ನು ಇವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಾಮಮಂದಿರದ ವಿಚಾರದಲ್ಲಿ ಸಾಕಷ್ಟುಲೋಪಗಳು ನಡೆದಿವೆ. ನಾನು ರಾಮಮಂದಿರ ನಿರ್ಮಾಣವಾಗುತ್ತಿರುವ ಬಗ್ಗೆ ಮಾತನಾಡುತ್ತಿಲ್ಲ. ಅದರ ಹೆಸರಿನಲ್ಲಿ ಸಂಗ್ರಹವಾಗಿರುವ ಹಣದ ಬಗ್ಗೆ ಲೆಕ್ಕ ನೀಡುವಂತೆ ಕೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಗುತ್ತಿಗೆ ಹಾಕಿಕೊಂಡಿದ್ದಾರಾ?:

ವಿಜಯದಶಮಿ ಕಾರ್ಯಕ್ರಮದಲ್ಲಿ ಹಿಂದೂ ದೇವಾಲಯಗಳನ್ನು ಆರ್‌ಎಸ್‌ಎಸ್‌ಗೆ ಒಪ್ಪಿಸುವಂತೆ ಆ ಸಂಘಟನೆಯ ಮುಖಂಡ ಮೋಹನ್‌ ಭಾಗವತ್‌ ಹೇಳುತ್ತಾರೆ. ಹಳ್ಳಿಗಾಡಿನ ಜನತೆ ಹಣ ನೀಡಿ ಕಟ್ಟಿಸಿದ ದೇವಾಯಗಳನ್ನು ಇವರಿಗೆ ಯಾಕೆ ಕೊಡಬೇಕು? ಹಿಂದೂ ದೇವಾಲಯಗಳನ್ನು ಆರ್‌ಎಸ್‌ಎಸ್‌ನವರು ಗುತ್ತಿಗೆ ಹಾಕಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

ಎಚ್‌ಡಿಕೆಗೆ(HD Kumaraswamy) ಆರೆಸ್ಸೆಸ್‌ ಗಂಧ-ಗಾಳಿ ಇಲ್ಲ

ಆರೆಸ್ಸೆಸ್‌ ಬಗ್ಗೆ ಗಂಧ ಗಾಳಿಯೂ ಗೊತ್ತಿಲ್ಲದ ಎಚ್‌.ಡಿ.ಕುಮಾರಸ್ವಾಮಿ ಯಾವುದೋ ಒಂದು ಪುಸ್ತಕ ಓದಿ, ಅದೇ ಸರಿ ಅಂದುಕೊಂಡಿದ್ದಾರೆ. ಕುರುಡ ಆನೆಯ ಬಾಲ ಹಿಡಿದು, ಅದೇ ಆನೆ ಸೊಂಡಿಲು ಅಂದುಕೊಂಡಂತೆ ಆಗಿದೆ. ಈಗ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಮಧ್ಯೆ ಅಲ್ಪಸಂಖ್ಯಾತರ ಮತಗಳಿಗೆ ಪೈಪೋಟಿ ಶುರುವಾಗಿದೆ. ಇದೇ ಕಾರಣಕ್ಕೆ ಹೀಗೆಲ್ಲಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರಷ್ಟೇ.

- ಆರ್‌.ಅಶೋಕ್‌, ಕಂದಾಯ ಸಚಿವ

4 ದಿನ ಆರೆಸ್ಸೆಸ್‌ ಶಾಖೆಗೆ ಬರಲಿ

ಆರೆಸ್ಸೆಸ್‌ ಬಗ್ಗೆ ತಿಳಿಯಲು 4 ದಿನ ಅದರ ಶಾಖೆಗೆ ಬರಲಿ. ಆರೆಸ್ಸೆಸ್‌ನವರು ವಿವಿಗಳಲ್ಲಿ ಇದ್ದರೆ ಅವು ಉದ್ಧಾರ ಆಗುವುದು ಖಚಿತ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಆಡಳಿತ ಅವರ ಮನೆಯ ಆಸ್ತಿಯಂತಿತ್ತು. ಪೊಲೀಸ್‌, ಗೃಹ ಇಲಾಖೆ ಸೇರಿದಂತೆ ಎಲ್ಲ ಕಡೆ ಅವರ ಕುಟುಂಬ ವರ್ಗದವರಿದ್ದರು. ಇಡೀ ರಾಜ್ಯವನ್ನು ಲೂಟಿ ಮಾಡಿದವರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಬಾರದು.

- ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

Follow Us:
Download App:
  • android
  • ios