ರಾಜಧಾನಿ ಬೆಂಗಳೂರಲ್ಲಿ ಬೀಡುಬಿಟ್ಟಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳವರೆಗಿನ ಎಲ್ಲಾ ಹಂತದ ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ತಿಂಗಳಿಗೆ 15 ದಿನ ಅರಣ್ಯದಲ್ಲಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು (ಜೂ.26): ರಾಜಧಾನಿ ಬೆಂಗಳೂರಲ್ಲಿ ಬೀಡುಬಿಟ್ಟಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳವರೆಗಿನ ಎಲ್ಲಾ ಹಂತದ ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ತಿಂಗಳಿಗೆ 15 ದಿನ ಅರಣ್ಯದಲ್ಲಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶನಿವಾರ ವಿಧಾನಸೌಧದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದಲ್ಲಿರದೆ ಬೆಂಗಳೂರಲ್ಲಿ ಬೀಡುಬಿಟ್ಟಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಹಿರಿಯ ಅಧಿಕಾರಿಗಳು ಬೆಂಗಳೂರಲ್ಲಿ ಬೀಡು ಬಿಟ್ಟಿದ್ದು, ಕಚೇರಿ ಬಿಟ್ಟು ಹೊರಗೆ ಬರುತ್ತಿಲ್ಲ. ಅರಣ್ಯಕ್ಕೆ ಹೋಗಿ, ತಿಂಗಳಿಗೆ 15 ದಿನ ಅರಣ್ಯದಲ್ಲಿ ಇದ್ದರೆ ಉಳಿದ ಸಿಬ್ಬಂದಿಗೆ ಆತ್ಮಸ್ಥೈರ್ಯ ಬರುತ್ತದೆ. ಅವರಿಗೆ ಮಾರ್ಗದರ್ಶನ ಸಿಗುತ್ತದೆ. ಅರಣ್ಯದಲ್ಲಿದ್ದರೆ ಹಿರಿಯ ಅಧಿಕಾರಿಗಳು ಅರಣ್ಯ ಕಾಪಾಡುವ ಕೆಲಸದಲ್ಲಿದ್ದಾರೆ ಎಂಬ ಭಾವನೆ ಬರುತ್ತದೆ. ಈ ಹಿನ್ನೆಲೆಯಲ್ಲಿ 15 ದಿನ ಅರಣ್ಯದಲ್ಲಿ ಇರಬೇಕು. ಪ್ರಸ್ತುತ ಶೇ.23ರಷ್ಟಿರುವ ಅರಣ್ಯ ಪ್ರದೇಶವನ್ನು ಐದು ವರ್ಷದಲ್ಲಿ ಕನಿಷ್ಠ ಶೇ.30ಕ್ಕೆ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಸಂಸ್ಥೆಯೊಂದು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಾಧನೆಯ ಸಂಕೇತ. ಪರಿಸರ ರಕ್ಷಣೆ ಮಾಡಿ, ಅರಣ್ಯ ಉತ್ಪನ್ನಗಳನ್ನು ನಾಗರಿಕ ಸಮಾಜಕ್ಕೆ ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವನ್ನು ಮಾಡುವ ದೊಡ್ಡ ಹೊಣೆಗಾರಿಕೆ ನಿಗಮಕ್ಕಿದೆ.
ಐಕಿಯಾದಲ್ಲಿ ಸ್ಥಳೀಯರಿಗೆ ಶೇ.75 ಉದ್ಯೋಗಾವಕಾಶ ಭರವಸೆ: ಸಿಎಂ ಬೊಮ್ಮಾಯಿ
ವಿಶ್ವದಲ್ಲಿ ಜಾಗತಿಕ ತಾಪಮಾನ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪರಿಸರ ಸಮತೋಲನ ಇಲ್ಲದಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರವು ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಆರ್ಥಿಕ ನೆರವು ನೀಡಲಿದೆ. ಅರಣ್ಯ ಮತ್ತು ನಾಗರಿಕತೆಯ ಸಂಬಂಧ ಮತ್ತಷ್ಟುಗಟ್ಟಿಯಾಗಲು ಅರಣ್ಯ ಉತ್ಪಾದನೆಯನ್ನು ನಾಗರಿಕರ ಉಪಯೋಗಕ್ಕಾಗಿ ಯಾವ ರೀತಿ ಬಳಸಿಕೊಳ್ಳಬಹುದು ಎಂಬ ಚಿಂತನೆ ಅಗತ್ಯ ಇದೆ. ಜನಸಂಖ್ಯೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶ ಕಡಿಮೆಯಾಗಿದೆ. ಪರಿಸರ ಸಮತೋಲನವಾಗಬೇಕಾದರೆ ನಮ್ಮ ನಿಸರ್ಗದತ್ತ ಸಂಪತ್ತನ್ನು ಮತ್ತಷ್ಟುವಿಸ್ತರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.
ವಿಷನ್ ಡಾಕ್ಯುಮೆಂಟ್: ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯುಳ್ಳ ಪ್ರದೇಶವಾಗಿದ್ದು, ಅದನ್ನು ವಿಸ್ತರಣೆ ಮಾಡಬೇಕು. ಅರೆ ಮಲೆನಾಡು ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಸಹಭಾಗಿತ್ವದಲ್ಲಿ ಕೈಗೊಳ್ಳಬೇಕು. 50 ವರ್ಷಗಳ ಸಾಧನೆಯನ್ನು ಮೆಲುಕು ಹಾಕಲು ಮತ್ತು ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಮುಂದಿನ 50 ವರ್ಷಗಳು ಹೇಗಿರಬೇಕು ಎಂಬುದರ ಚಿಂತನೆ ಮಾಡಿ, ಒಂದು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಸಮಾರಂಭದಲ್ಲಿ ಅರಣ್ಯ ಸಚಿವ ಉಮೇಶ್ ಕತ್ತಿ, ಕಂದಾಯ ಸಚಿವ ಆರ್.ಅಶೋಕ್, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ತಾರಾ ಅನುರಾಧ, ಸಂಸದ ಪಿ.ಸಿ.ಮೋಹನ್ ಇತರರು ಉಪಸ್ಥಿತರಿದ್ದರು.
ಅನಾರೋಗ್ಯ ಪೀಡಿತ ಮಗುವಿಗೆ ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ ಸಿಎಂ ಬೊಮ್ಮಾಯಿ
ಆರ್ಥಿಕ ಸಬಲೀಕರಣಕ್ಕೆ ಸಿದ್ಧ: ನಿಗಮವು ತನ್ನ ಗುರಿ ಧ್ಯೇಯೋದ್ದೇಶಗಳನ್ನು ಇಂದಿನ ಅವಶ್ಯಕತೆ ಮತ್ತು ಸವಾಲುಗಳಿಗೆ ತಕ್ಕಂತೆ ಬದಲಿಸಿಕೊಳ್ಳಬೇಕು. ನಿಗಮವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಸಿದ್ಧವಿದ್ದು, ಸಂಪೂರ್ಣ ಬೆಂಬಲ ನೀಡಲಾಗುವುದು. ಅರಣ್ಯ ಸಂಪತ್ತನ್ನು ಗಳಿಸಲು ಮೊದಲ ಆದ್ಯತೆ ನೀಡಬೇಕು. ಬಂಜರು ಭೂಮಿಯಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಹಸಿರು ಬೆಳೆಸಬೇಕು. ಹಸಿರು ಪದರವನ್ನು ಹೆಚ್ಚಿಸುವುದರಿಂದ ಮಣ್ಣು ಮತ್ತು ಪರಿಸರವನ್ನು ರಕ್ಷಿಸಬಹುದು. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.
