ಬೆಂಗಳೂರಿನ ಪೀಣ್ಯ ಮತ್ತು ಜಾರಕಬಂಡೆ ಪ್ರದೇಶದಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿಯನ್ನು ಮರುವಶಕ್ಕೆ ಪಡೆಯಲು ಅರಣ್ಯ ಸಚಿವರು ಸೂಚಿಸಿದ್ದಾರೆ. 2017ರಲ್ಲಿ ಮಂಜೂರಾತಿ ರದ್ದಾದರೂ, ವಾಯುಪಡೆ ಅಕ್ರಮವಾಗಿ ನಿರ್ಮಾಣ ಕಾಮಗಾರಿ ಆರಂಭಿಸಿರುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು (ಮಾ.6): ಬೆಂಗಳೂರಿನ ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲು ಪ್ರದೇಶದಲ್ಲಿ ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿಯನ್ನು ನಿಯಮದಂತೆ ಮರುವಶಕ್ಕೆ ಪಡೆಯಲು ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲು ಪ್ರದೇಶಕ್ಕೆ ಸೇರಿದ 570 ಎಕರೆ ಭೂಮಿ ಪೈಕಿ 1987ರಲ್ಲಿ ವಾಯಪಡೆಗೆ 452 ಎಕರೆ ಭೂಮಿ ಮಂಜೂರು ಮಾಡಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಆದರೆ, 2017ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಮತ್ತು ಮಂಜೂರಾತಿಯನ್ನು ರದ್ದುಗೊಳಿಸಿದೆ. ಆದರೂ, ಭಾರತೀಯ ವಾಯುಪಡೆ ಮಾ.1ರಂದು ಅಕ್ರಮವಾಗಿ ನಿರ್ಮಾಣ ಕಾಮಗಾರಿ ಆರಂಭಿಸಿದೆ. ಹೀಗಾಗಿ ಅದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟರಿಗೆ ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ.
2017ರ ಆದೇಶದನ್ವಯ ಮ್ಯುಟೇಷನ್ ಆಗಿದ್ದು, ಪ್ರಸ್ತುತ ಈ ಜಮೀನಿನ ಪಹಣಿಯಲ್ಲಿ ಮೀಸಲು ಅರಣ್ಯ ಎಂದು ನಮೂದಾಗಿದೆ. ಅರಣ್ಯ ಇಲಾಖೆಯು ಈ ವಿಚಾರವನ್ನು ವಾಯುಪಡೆ ಅಧಿಕಾರಿಗಳ ಗಮನಕ್ಕೆ ತಂದು, ಮೀಸಲು ಅರಣ್ಯ ಎಂದು ಫಲಕ ಅಳವಡಿಸಿದೆ. ಹಾಗೆಯೇ, ಅರಣ್ಯ ಭೂಮಿಯನ್ನು ಹಸ್ತಾಂತರಿಸುವಂತೆ ರಕ್ಷಣಾ ಸಚಿವಾಲಯಕ್ಕೂ ಪತ್ರ ಬರೆಯಲಾಗಿದೆ. ಇಷ್ಟೆಲ್ಲ ಪ್ರಕ್ರಿಯೆಗಳು ನಡೆದಿದ್ದರೂ, ವಾಯುಪಡೆ ಅನಧಿಕೃತವಾಗಿ, ನಿಯಮ ಮೀರಿ ನಿರ್ಮಾಣ ಕಾಮಗಾರಿ ನಡೆಸುತ್ತಿದೆ.
ಇದನ್ನೂ ಓದಿ: Eshwara Khandre: ಯಾರೂ ಕಲ್ಲು ತೂರಾಟ ಮಾಡಿದ್ದಾರೊ ಅವರ ಮೇಲೆ ಕ್ರಮ ಆಗುತ್ತೆ | Kannada News | Suvarna News
ಸದ್ಯ ಇರುವ 444 ಎಕರೆ ಭೂಮಿಯಲ್ಲಿ 15 ಎಕರೆ ಪ್ರದೇಶದಲ್ಲಿ ಶೂಟಿಂಗ್ ರೇಂಜ್ ನಿರ್ಮಿಸಿಕೊಂಡಿದ್ದು, ಸ್ವಲ್ಪ ಭೂಮಿಯಲ್ಲಿ ವಾಯುಪಡೆ ಕಚೇರಿ ನಿರ್ಮಿಸಿದೆ. ಉಳಿದ ಭೂಮಿ ಅರಣ್ಯ ಸ್ವರೂಪದಲ್ಲೇ ಇದೆ. ಹೀಗಾಗಿ ಕೂಡಲೇ ಅರಣ್ಯ ಸ್ವರೂಪದ ಭೂಮಿಯನ್ನು ಕಾನೂನಾತ್ಮಕವಾಗಿ ವಶಕ್ಕೆ ಪಡೆಯಬೇಕು. ಅಲ್ಲದೆ, ತಾನು ಬಳಕೆ ಮಾಡುತ್ತಿರುವ ಭೂಮಿಗೆ ಸಂಬಂಧಿಸಿದಂತೆ ಪರ್ವೇಶ್ ಪೋರ್ಟಲ್‌ನಲ್ಲಿ ನಿಯಮಾನುಸಾರ ಅರ್ಜಿ ಹಾಕಿ ಅರಣ್ಯ ತೀರುವಳಿ ಪಡೆಯುವಂತೆ ವಾಯುಪಡೆಗೆ ಪತ್ರ ಬರೆಯುವಂತೆಯೂ ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ನಿರ್ದೇಶಿಸಿದ್ದಾರೆ.
