ಅರಣ್ಯಾಧಿಕಾರಿ (ಆರ್‌ಎಫ್‌ಓ) ಹುದ್ದೆಗಳ ಪೈಕಿ ಶೇ.50ರಷ್ಟು ಹುದ್ದೆಯನ್ನು ಬಡ್ತಿ ಮೂಲಕ ಹಾಗೂ ಉಳಿದ ಶೇ.50ರಷ್ಟನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿರುವುದಾಗಿ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರು (ನ.05): ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಹುದ್ದೆಗಳ ಪೈಕಿ ಶೇ.50ರಷ್ಟು ಹುದ್ದೆಯನ್ನು ಬಡ್ತಿ ಮೂಲಕ ಹಾಗೂ ಉಳಿದ ಶೇ.50ರಷ್ಟನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಅರಣ್ಯ ಇಲಾಖೆಯ ನೇಮಕಾತಿಗೆ ಸಂಬಂಧಿಸಿ ವಿವಿಧ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಅರಣ್ಯಶಾಸ್ತ್ರ ಪದವೀಧರರು ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸಚಿವರು ಅಹವಾಲು ಸ್ವೀಕರಿಸಿದರು. ನಂತರ ಅರಣ್ಯ ವಿಜ್ಞಾನ ಪದವೀಧರರು ಮತ್ತು ವಿದ್ಯಾರ್ಥಿಗಳ ಮನವಿಯ ಬಳಿಕ ತಾವು ಈ ಸೂಚನೆ ನೀಡಿರುವುದಾಗಿ ತಿಳಿಸಿದರು.

ಆಡಳಿತ ಸುಧಾರಣಾ ಇಲಾಖೆ ಉಪ ವಲಯ ಅರಣ್ಯಾಧಿಕಾರಿಗಳ (ಡಿಆರ್‌ಎಫ್‌ಓ) ಹುದ್ದೆಗಳ ಭರ್ತಿಗೆ ನೀಡಿದ್ದ ಶಿಫಾರಸ್ಸನ್ನು ಒಪ್ಪದೆ ಬಡ್ತಿ ಮತ್ತು ನೇರ ನೇಮಕಾತಿ ಎರಡಕ್ಕೂ ಅವಕಾಶ ಕಲ್ಪಿಸಲಾಗಿದೆ. ಈಗ ನೀವು ಅರಣ್ಯ ಇಲಾಖೆಯ ಎಲ್ಲ ಹುದ್ದೆಗಳಿಗೆ ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆ ಎಂದು ಪರಿಗಣಿಸಬೇಕು ಎಂಬ ಬೇಡಿಕೆ ಇಟ್ಟಿದ್ದೀರಿ. ಆದರೆ ಪಶುವೈದ್ಯಕೀಯ ವಿಜ್ಞಾನ ಓದಿದವರಿಗೆ ಹಾಗೂ ಪ್ರಾಣಿಶಾಸ್ತ್ರ, ಸಸ್ಯ ಶಾಸ್ತ್ರ ಓದಿದವರನ್ನೂ ಪರಿಗಣಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಆಗಿಲ್ಲ ಎಂದರು.

ನೇಮಕಾತಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ

ವಿದ್ಯಾರ್ಥಿಗಳು ಈ ಪ್ರತಿಭಟನೆ ಕೈಬಿಟ್ಟು, ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ಸರ್ಕಾರ ವಿದ್ಯಾರ್ಥಿಗಳ ಜೊತೆಗಿದೆ. ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅರಣ್ಯಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು ಪರಿಸರ ಉಳಿಸಲು ಮುಂದಾಗಿರುವ ಪದವೀಧರರರಿಗೆ ಅರಣ್ಯ ಇಲಾಖೆ ನೇಮಕಾತಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಔಚಿತ್ಯಪೂರ್ಣ ಎಂದು ಹೇಳಿದರು ಈ ಸಂದರ್ಭದಲ್ಲಿ ಶಾಸಕ ಪೊನ್ನಣ್ಣ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತಿತರರು ಇದ್ದರು.