ಖ್ಯಾತನಾಮರಿಗೆ ಸಂಕಟ: ಗಣ್ಯರು, ಸೆಲೆಬ್ರಿಟಿಗಳಿಗೆ ಪರಚಿದ ಹುಲಿ ಉಗುರು..!
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ನಂತರ, ಇದೇ ರೀತಿ ಹುಲಿ ಉಗುರಿನ ಆಭರಣ ಧರಿಸಿದ ಹಲವು ಗಣ್ಯರ ವಿರುದ್ಧ ದೂರುಗಳು ದಾಖಲಾಗಿವೆ. ನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಹಾಗೂ ಸಂಸದ ಜಗ್ಗೇಶ್, ಧಾರ್ಮಿಕ ಮುಖಂಡರಾದ ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ, ಕುಣಿಗಲ್ ನ ಬಿದನಗೆರೆಯ ಧನಂಜಯ ಗುರೂಜಿ ಅವರ ವಿರುದ್ಧ ಕೆಲ ಸಂಘಟನೆಗಳು ಅರಣ್ಯ ಇಲಾಖೆಗೆ ಬುಧವಾರ ದೂರು ನೀಡಿವೆ.

ಬೆಂಗಳೂರು/ಚಿಕ್ಕಮಗಳೂರು/ಕುಣಿಗಲ್(ಅ.26): ಹುಲಿ ಉಗುರು ಒಳಗೊಂಡ ಆಭರಣ ವಿಷಯ ಮತ್ತಷ್ಟು ಸೆಲೆಬ್ರಿಟಿಗಳಿಗೆ ಕಂಟಕ ತಂದೊಡ್ಡಿದೆ. ಚಲನಚಿತ್ರ ನಟರು, ಧಾರ್ಮಿಕ ಮುಖಂಡರ ವಿರುದ್ಧ ಬುಧವಾರ ಅರಣ್ಯ ಇಲಾಖೆಯಲ್ಲಿ ಸಾಲು ಸಾಲು ದೂರುಗಳು ದಾಖಲಾದ ಹಿಂದೆಯೇ ಅರಣ್ಯಾಧಿಕಾರಿಗಳ ತಂಡಗಳು ರಾಜ್ಯದ ವಿವಿಧೆಡೆ ತಪಾಸಣೆ ನಡೆಸಿವೆ. ಹಲವರಿಗೆ ನೋಟಿಸ್ ಜಾರಿ ಮಾಡಿದ್ದಲ್ಲದೇ ಅವರ ಬಳಿ ಇದ್ದ ಹುಲಿ ಉಗುರನ್ನು ವಶಕ್ಕೆ ಪಡೆದು ಪರಿಶೀಲಿಸಲು ಮುಂದಾಗಿವೆ.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ನಂತರ, ಇದೇ ರೀತಿ ಹುಲಿ ಉಗುರಿನ ಆಭರಣ ಧರಿಸಿದ ಹಲವು ಗಣ್ಯರ ವಿರುದ್ಧ ದೂರುಗಳು ದಾಖಲಾಗಿವೆ. ನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಹಾಗೂ ಸಂಸದ ಜಗ್ಗೇಶ್, ಧಾರ್ಮಿಕ ಮುಖಂಡರಾದ ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ, ಕುಣಿಗಲ್ ನ ಬಿದನಗೆರೆಯ ಧನಂಜಯ ಗುರೂಜಿ ಅವರ ವಿರುದ್ಧ ಕೆಲ ಸಂಘಟನೆಗಳು ಅರಣ್ಯ ಇಲಾಖೆಗೆ ಬುಧವಾರ ದೂರು ನೀಡಿವೆ. ಈ ಸಂಬಂಧ ಅಧಿಕಾರಿಗಳು ಎಲ್ಲರ ಮನೆ, ಕಚೇರಿಗೆ ತೆರಳಿ ಪರಿಶೀಲಿಸಿದರು.
ಚಿಕ್ಕಮಗಳೂರು: ಹುಲಿ ಉಗುರು ಧರಿಸಿದ್ದ ಇಬ್ಬರು ಅರ್ಚಕರ ಬಂಧನ
4 ಗಂಟೆಗೂ ಹೆಚ್ಚು ಕಾಲ ಪರಿಶೀಲನೆ:
ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯಾಹ್ನ 3 ಗಂಟೆ ನಂತರ ನಾಲ್ಕು ತಂಡಗಳಾಗಿ ಚಿತ್ರನಟರಾದ ದರ್ಶನ್, ರಾಕ್‌ಲೈನ್ ವೆಂಕಟೇಶ್, ಜಗ್ಗೇಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಮನೆಗಳಿಗೆ ತೆರಳಿ 4 ಗಂಟೆಗೂ ಹೆಚ್ಚಿನ ಕಾಲ ಪರಿಶೀಲನೆ ಮತ್ತು ವಿಚಾರಣೆ ನಡೆಸಿದರು.
ಕಾನೂನು ಎಲ್ಲರಿಗೂ ಒಂದೇ ಕಾನೂನಿನ ಮುಂದೆ ಎಲ್ಲರೂ ಸಮಾನರು. ವನ್ಯಜೀವಿಗಳ ಯಾವುದೇ ಅಂಗಗಳನ್ನು ಅಕ್ರಮವಾಗಿ ಹೊಂದುವುದು ಅಪರಾಧವಾಗುತ್ತದೆ. ಈ ಬಗ್ಗೆ ದೂರು ಬಂದರೆ ಇಲಾಖೆಯಿಂದ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು. ಆ ಕುರಿತಂತೆ ಅಧಿಕಾರಿಗಳಿಗೂ ತಿಳಿಸಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ದೂರು ತನಿಖೆ ಮಾಡಲು ಉನ್ನತ ಮಟ್ಟದ ಸಮಿತಿ
ಬೆಂಗಳೂರು: ಹುಲಿ ಉಗುರು ಸೇರಿದಂತೆ ಯಾವುದೇ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳ ಬಳಕೆ ಕುರಿತಂತೆ ಬರುವ ದೂರುಗಳನ್ನು ತನಿಖೆಗೊಳಪಡಿಸಲು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌ಪುಷ್ಕರ್ ತಿಳಿಸಿದ್ದಾರೆ. ಯಾವುದೇ ಒತ್ತಡ ಬಂದರೂ ತನಿಖೆಯಿಂದ ಹಿಂದೆ ಸರಿಯುವುದಿಲ್ಲ. ಅರಣ್ಯ ಸಚಿವರೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆಯೇ ಹೇಳಿದ್ದಾರೆ. ಹೀಗಾಗಿ ನಾವು ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲಾ, ಅಮ್ಮ ನೀಡಿದ ಹಳೆಯ ಲಾಕೆಟ್ ಎಂದಿದ್ದೇನೆ: ಪಾಚ್ಕೊಳಿ ಎಂದ ನಟ ಜಗ್ಗೇಶ್!
ಯಾರು ಗುರಿ? ಏನು ಪತ್ತೆ?
ದರ್ಶನ್: ಬೆಂಗಳೂರು ಆರ್.ಆರ್.ನಗರದಲ್ಲಿನ ಮನೆಯಲ್ಲಿ ಶೋಧ. ಸಿಗದ ಪೆಂಡೆಂಟ್. ಅದು ಅಸಲಿ ಯದ್ದಲ್ಲ ಎಂದ ದರ್ಶನ್.ನೋಟಿಸ್ ಜಾರಿ
ಜಗ್ಗೇಶ್: 40 ವರ್ಷ ಹಿಂದಿನದ್ದು ಎಂದ ಪತ್ನಿ ಪರಿಮಳಾ. ಅರಣ್ಯಾಧಿಕಾರಿಗಳಿಗೆ ಹಸ್ತಾಂತರ. ಉಗುರು ಪರೀಕ್ಷೆಗೆ ರವಾನೆ
ರಾಕ್‌ಲೈನ್ ವೆಂಕಟೇಶ್: ಮನೆ ಜಾಲಾಡಿದರೂ ಸಿಗದ ಪೆಂಡೆಂಟ್. ವಿದೇಶದಲ್ಲಿರುವ ರಾಕ್ ಲೈನ್. ಪುತ್ರನಿಗೆ ನೋಟಿಸ್
ನಿಖಿಲ್: ಪೆಂಡೆಂಟ್ ಅನ್ನು ಖುದ್ದು ಹಸ್ತಾಂತರಿಸಿದ ಎಚ್‌ಡಿಕೆ. ಅದು ನಕಲಿ ಎಂದು ವಾದ. ಪರಿಶೀಲನೆಗೆ ಬಂದಿದ್ದಕ್ಕೆ ಆಕ್ರೋಶ
ಧನಂಜಯ ಗುರೂಜಿ: ಗುರೂಜಿ ಆಪ್ತನ ಪೆಂಡೆಂಟ್ ವಶ. ನನ್ನ ಬಳಿ ಇದ್ದದ್ದು ನಕಲಿ, 2 ವರ್ಷ ಹಿಂದೆಯೇ ಎಸೆದಿದ್ದೇನೆ ಎಂದ ಧನಂಜಯ
ವಿನಯ್ ಗುರೂಜಿ: ಹುಲಿ ಚರ್ಮಕ್ಕಾಗಿ ಆಶ್ರಮದಲ್ಲಿ ಶೋಧ. 3 ವರ್ಷ ಹಿಂದೆಯೇ ಅರಣ್ಯ ಇಲಾಖೆಗೆ ಕೊಟ್ಟಿದ್ದೇವೆ ಎಂದ ಗುರೂಜಿ