ಎಸ್‌ಟಿಗೆ ಕುರುಬರನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವೆ: ಸಿಎಂ ಸಿದ್ದರಾಮಯ್ಯ

ಗೊಲ್ಲರು, ಕುರುಬರು, ಕೋಳಿ ಸಮಾಜ ಸೇರಿದಂತೆ ವಿವಿಧ ಸಮಾಜಗಳನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Forced to add kuruba community c to ST says cm siddaramaiah belgumm rav

ಬೆಳಗಾವಿ (ಅ.4) :  ಗೊಲ್ಲರು, ಕುರುಬರು, ಕೋಳಿ ಸಮಾಜ ಸೇರಿದಂತೆ ವಿವಿಧ ಸಮಾಜಗಳನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯ ನೆಹರು ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ಮಂಗಳವಾರ ನಡೆದ ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್‌ನ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕುರುಬ ಸಮಾಜ ಸಂಘಟಿತವಾಗಿ ಉತ್ತಮ ಕೆಲಸ ಮಾಡಿದೆ. ರಾಜಕೀಯ ಶಕ್ತಿ ಬೆಳೆದು ಎಲ್ಲರಿಗೂ ಅಧಿಕಾರದಲ್ಲಿ ಪಾಲು ಸಿಗಬೇಕು. ಯಾವುದೇ ಸಮಾಜದ ಪ್ರಗತಿಗೆ ರಾಜಕೀಯ ಪ್ರಾತಿನಿಧ್ಯ ಅಗತ್ಯ. ನಿಮ್ಮ ಪರವಾಗಿ ಧ್ವನಿ ಎತ್ತುವವರು ಇಲ್ಲದಿದ್ದಾಗ ಆ ಸಮುದಾಯ ಹಿಂದುಳಿಯುತ್ತದೆ. ಸಂಘಟನೆ ಮಾಡಿ, ರಾಜಕೀಯವಾಗಿ ಬೆಳೆಯುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಲೋಕಸಭಾ ಚುನಾವಣೆ ಹೊತ್ತಲ್ಲೇ ಮತ್ತೆ ಮುನ್ನಲೆಗೆ ಬಂದ ಕುರುಬ ಸಮಾಜ ಎಸ್‌ಟಿ ಮೀಸಲಾತಿ ಹೋರಾಟ!

ಅನೇಕ ರಾಜ್ಯಗಳಲ್ಲಿ ಕುರುಬ ಸಮುದಾಯದವರು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದಲ್ಲಿಯೂ ಇದ್ದಾರೆ. ಗುಲ್ಬರ್ಗ, ಬೀದರ್‌, ಯಾದಗಿರಿಯಲ್ಲಿ ಗೊಂಡ, ರಾಜಗೊಂಡ ಕುರುಬ ಸಮುದಾಯದವರು ಎಸ್‌ಟಿಗೆ ಸೇರಿದರೆ, ಕೊಡಗು ಜಿಲ್ಲೆಯಲ್ಲಿ ಎಲ್ಲ ಕುರುಬರು ಎಸ್‌ಟಿಗೆ ಸೇರಿದ್ದಾರೆ. ಗುಲ್ಬರ್ಗ, ಬೀದರ್‌, ಯಾದಗಿರಿಯಲ್ಲಿ ಕುರುಬರು ಮತ್ತು ಗೊಂಡ ಸಮುದಾಯದವರು ಒಂದೇ ಆಗಿದ್ದು, ಈ ಸಮುದಾಯಗಳನ್ನು ಎಸ್‌ಟಿಗೆ ಸೇರಿಸಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಈಗ ಈ ವಿಚಾರವು ಕೇಂದ್ರ ಸರ್ಕಾರದ ಅಂಗಳದಲ್ಲಿದೆ ಎಂದು ಹೇಳಿದರು.

ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬೇಕು:

ಸಮಾಜದ ಎಲ್ಲಾ ಜಾತಿ-ವರ್ಗದ ಜನಗಳು ಸಂಘಟಿತರಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬೇಕು. ನಾನು ಯಾವತ್ತೂ ಜಾತಿ ರಾಜಕಾರಣ ಮಾಡುವವನಲ್ಲ. ಸಾಮಾಜಿಕ ನ್ಯಾಯ ನನ್ನ ಉಸಿರು. ಅವಕಾಶ ವಂಚಿತ ಜಾತಿಗಳ ಜನ ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಸಮಾವೇಶ ನಡೆಸುವುದು ತಪ್ಪಲ್ಲ ಎಂದು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಹೇಳಿದ್ದರು. ಅದರಂತೆ ಈ ಸಮಾವೇಶ ನಡೆಯುತ್ತಿದೆ ಎಂದರು.

ನಾನು ಈ ಜಾತಿ ವ್ಯವಸ್ಥೆಗೆ ಯಾವತ್ತಿದ್ದರೂ ವಿರುದ್ಧ. ಆದರೆ ಅಶಕ್ತ ಜನ ಸಮುದಾಯಗಳು ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವುದು ತಪ್ಪಲ್ಲ ಎಂದು ನಂಬಿದ್ದೇನೆ. ಅಶಕ್ತ ಸಮುದಾಯಗಳು ಸಂಘಟಿತರಾಗದೇ ಇರುವುದರಿಂದ ಮತ್ತು ತಮ್ಮಲ್ಲಿ ನಾಯಕತ್ವ ಬೆಳೆಸಿಕೊಳ್ಳದೇ ಇರುವುದರಿಂದ ಅವರ ಪಾಲಿನ ಹಕ್ಕುಗಳು ಮತ್ತು ರಾಜಕೀಯ ಅಧಿಕಾರದಿಂದ ವಂಚಿತವಾಗಿವೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಮಾಜವಾದ ಹೇಳುತ್ತಾರೆ. ಜಾತ್ಯತೀತ ತತ್ವ ಪ್ರತಿಪಾದನೆ ಮಾಡುತ್ತಾರೆ. ಜಾತಿ ಸಮಾವೇಶಕ್ಕೆ ಹೋಗುತ್ತಾರೆ ಎಂದು ಬಹಳ ಜನ ಮಾತನಾಡುತ್ತಾರೆ. ಯಾವ ಜಾತಿಗಳು ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬಂದಿವೆಯೋ ಅಂತಹವರು ಜಾತಿ ಸಮಾವೇಶ ಮಾಡಿದರೆ ಜಾತಿ ಸಮಾವೇಶ ಆಗುತ್ತದೆ. ಆದರೆ ಅವಕಾಶಗಳಿಂದ ವಂಚಿತರಾದರೂ ಜಾತಿ ಸಮಾವೇಶ ಮಾಡಿದರೆ ಜಾತಿ ಸಮಾವೇಶ ಆಗಲ್ಲ ಎಂದರು.

ನಮ್ಮ ದೇಶದಲ್ಲಿ ಅಸಮಾನತೆ, ಜಾತಿ ನಡುವೆ ಸಂಘರ್ಷ ಉಂಟು ಮಾಡುವುದು ಸಮಾಜಕ್ಕೆ ಬೆಂಕಿ ಇಡುವ ಕೆಲಸ ನಡೆಯುತ್ತಿದೆ. ಸಂವಿಧಾನದ ಹಕ್ಕು ಪಡೆದುಕೊಳ್ಳಲು ಸಂಘಟನೆ ಆದರೆ ಸಮ ಸಮಾಜಕ್ಕೆ ಅನುಕೂಲ ಆಗುತ್ತದೆ. ನಾನು ಯಾವತ್ತೂ ಜಾತಿ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟವನಲ್ಲ. ನಮ್ಮ ಅಪ್ಪ ಅಮ್ಮ ಕುರುಬರ ಜಾತಿಯಲ್ಲಿ ಹುಟ್ಟಿದರು. ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದೇನೆ ಎಂದರು.

ಕರ್ನಾಟಕದಲ್ಲಿ ರಾಜಕೀಯವಾಗಿ ಬೆಳೆದಿದ್ದು ಸಂಘಟನೆಯಿಂದ. ಬೇರೆ ಬೇರೆ ರಾಜ್ಯದಲ್ಲಿ ಸಂಘಟನೆ, ನಾಯಕತ್ವದ ಕೊರತೆಯಿಂದ ಬೆಳೆದಿಲ್ಲ. ಮಹಾರಾಷ್ಟ್ರದಲ್ಲಿ ಬಹಳ ಜನ ದನಗರ್ ಜಾತಿಯವರಿದ್ದಾರೆ‌. ಸಂಘಟನೆ ಪ್ರಮಾಣ ಯಾವ ರೀತಿ ಇರಬೇಕು ಅಲ್ಲಿಲ್ಲ. ಹೀಗಾಗಿ ಬೇರೆ ನಾಯಕರ ಜತೆಗೆ ತಿರುಗಾಡಬೇಕಾಗುತ್ತದೆ ಎಂದರು.

 

ಬಿಕೆ ಹರಿಪ್ರಸಾದ್ ಹೇಳಿಕೆ ವಿರುದ್ದ ಕಾಗಿನೆಲೆ ಈಶ್ವರಾನಂದಪುರಿ ಶ್ರೀ ಆಕ್ರೋಶ

ನಮ್ಮ ಸಮುದಾಯಕ್ಕೆ ರಾಜಕೀಯ ಇತಿಹಾಸ ಇದೆ. ಸಾಂಸ್ಕೃತಿಕ ಭವ್ಯತೆ ಇದೆ. ಹಕ್ಕ ಬುಕ್ಕರಿಂದ ಹಿಡಿದು ಅಹಲ್ಯಾಬಾಯಿ ಹೋಳ್ಕರ್‌ವರೆಗೂ ನಮಗೊಂದು ಚರಿತ್ರೆ ಇದೆ. ಆದರೆ ಸಂಘಟನೆ ಇಲ್ಲದ್ದರಿಂದ ನಮಗೆ ಸಲ್ಲಬೇಕಾಗಿದ್ದು ಸಲ್ಲುತ್ತಿರಲಿಲ್ಲ. ಸಂಘಟನೆ ಇಲ್ಲದಿದ್ದರೆ ಕಾಗಿನೆಲೆ ಗುರುಪೀಠ, ಸಂಸ್ಥಾನ ಆಗುತ್ತಿರಲಿಲ್ಲ. ಕಾಗಿನೆಲೆ ಪೀಠ ಒಂದು ಜಾತಿಯ ಮಠ ಅಲ್ಲ. ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು. ಎಲ್ಲರನ್ನೂ ಮನುಷ್ಯರಾಗಿ ನೋಡುವ ಪ್ರವೃತ್ತಿ ಇದ್ದವರು ಜಾತ್ಯತೀತ ಸಮಾಜ ನೋಡಲು ಸಾಧ್ಯ ಎಂದು ವಿವರಿಸಿದರು.

ಪ್ರತಿ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ. ಎಲ್ಲರಿಗೂ ಅವರವರ ಪಾಲಿನ ಅಧಿಕಾರ, ಅವಕಾಶ ಸಿಗಬೇಕು. ಈ ಸಾಮಾನ್ಯ ಜ್ಞಾನ ನಮ್ಮನ್ನು ಟೀಕಿಸುವವರಿಗೆ ಇಲ್ಲವಾಗಿದೆ ಎಂದರು.

ನಮ್ಮದು ಹೇಳಿ ಕೇಳಿ ಜಾತಿ ಮತ್ತು ತಾರತಮ್ಯದಿಂದ ಕೂಡಿರುವ ಸಮಾಜ. ಹೀಗಾಗಿ ಅವಕಾಶಗಳ ಹಂಚಿಕೆಯಲ್ಲೂ ತಾರತಮ್ಯ ಇರುತ್ತದೆ. ಇವನ್ನೆಲ್ಲಾ ಸರಿದೂಗಿಸಬೇಕಾದರೆ ಸಂಘಟನೆ, ಸಮಾವೇಶಗಳು ಅಗತ್ಯ. 2013 ರಿಂದ 18 ರವರೆಗೆ ಪೂರ್ಣ ಪ್ರಮಾಣದ ಮುಖ್ಯಮಂತ್ರಿ ಆಗಿದ್ದೆ. ಈ ವೇಳೆ ಒಂದು ಜಾತಿ ಒಂದು ಧರ್ಮಕ್ಕೆ ಕಾರ್ಯಕ್ರಮ ಕೊಟ್ಟಿಲ್ಲ. ಎಲ್ಲರಿಗೂ ಸಮನಾಗಿ ಕಾರ್ಯಕ್ರಮ ಕೊಟ್ಟಿದ್ದೇನೆ. ನಾನು ರೂಪಿಸಿದ ಐದು ಗ್ಯಾರಂಟಿ ಯೋಜನೆಗಳು ಒಂದು ಸಮಾಜಕ್ಕೆ, ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತವಾಗಿಲ್ಲ. ಸರ್ವ ಜಾತಿ ಜನಗಳ ಬದುಕಿಗೆ ಅನುಕೂಲ ಕಲ್ಪಿಸುತ್ತಿವೆ ಎಂದರು.

ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಸಮಾವೇಶ ಉದ್ಘಾಟಿಸಿದರು. ಈ ವೇಳೆ ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಹಾಗೂ ಅರ್ಜುನಾಭಾಯಿಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ ಅಧ್ಯಕ್ಷ, ಮಾಜಿ ಮಂತ್ರಿ ಎಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಗ್ರಾಮೀಣಾಭಿವೃದ್ಧಿಯ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ, ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗೋವಾ ಮಾಜಿ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕಾವಲೇಕರ್, ಮಹಾರಾಷ್ಟ್ರದ ಮಾಜಿ ಸಚಿವ ಮಹದೇವ್ ಜನಕಾರ್, ದತ್ತಾತ್ರೇಯ ಭರ್ನೆ, ರಾಮ ಶಂಕರ್ ಶಿಂದೆ, ಶೆಫರ್ಡ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಆಂಧ್ರ ಪ್ರದೇಶದ ಸಚಿವೆ ಕೆ.ವಿ.ಉಷಾಶ್ರೀ ಚರಣ್, ಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರ ಮೊಮ್ಮಗ ಭೂಷಣ್ ರಾಜೆ ಹೋಳ್ಕರ್, ಗುಜರಾತ್ ಮುಖಂಡರಾದ ಸಾಗರ್ ರಾಯ್ಕ ಸೇರಿ 60ಕ್ಕೂ ಹೆಚ್ಚು ಮಂದಿ ನಾನಾ ರಾಜ್ಯಗಳ ಕುರುಬ ಮತ್ತು ಗೋಪಾಲಕ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios