ಬೆಂಗಳೂರು(ಮೇ.04): ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಸ್ಕ್‌ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವ ಆದೇಶವನ್ನು ಸರ್ಕಾರ ಜಾರಿಗೆ ತಂದಿದೆ.

ಬೆಂಗಳೂರು ಹೊರತುಪಡಿಸಿ ಇನ್ನುಳಿದ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ ವ್ಯಕ್ತಿಗಳಿಗೆ 200 ರು. ದಂಡ ಹಾಗೂ ಉಳಿದ ಕಡೆಗಳಲ್ಲಿ 100 ರು. ದಂಡ ವಿಧಿಸುವ ಆದೇಶವನ್ನು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಹೊರಡಿಸಿದ್ದಾರೆ.

ಜನರ ಬೇಜವಾಬ್ದಾರಿ, ಪೌರಕಾರ್ಮಿಕರಿಗೆ ಸೋಂಕಿನ ಭೀತಿ!

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹಂತದ ಮತ್ತು ಮೇಲಿನ ಅಧಿಕಾರಿಗಳು, ಪುರಸಭೆಯ ಆರೋಗ್ಯ ಇನ್ಸ್‌ಪೆಕ್ಟರ್‌ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮತ್ತು ಸರ್ಕಾರ ಸೂಚಿಸಿರುವ ಇತರೆ ಅಧಿಕಾರಿಗಳು ದಂಡವನ್ನು ವಸೂಲಿ ಮಾಡಬಹುದು. ಸದರಿ ಆದೇಶ ಮುಂದಿನ ಒಂದು ವರ್ಷ ಇಲ್ಲವೇ ಆದೇಶ ಹಿಂಪಡೆಯುವವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬೆಂಗಳೂರಲ್ಲಿ .1000 ದಂಡ: ಈಗಾಗಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸದಿದ್ದರೆ ಒಂದು ಸಾವಿರ ರು. ದಂಡ, ಎರಡನೇ ಬಾರಿ ಹಾಗೂ ನಂತರ ಪ್ರತಿ ತಪ್ಪಿಗೆ ತಲಾ ಎರಡು ಸಾವಿರ ರು. ದಂಡ ವಿಧಿಸಲಾಗುತ್ತದೆ. ಈಗ ಮಾಸ್ಕ್‌ ಧರಿಸಿದವರ ವಿರುದ್ಧ ದಂಡ ವಿಧಿಸುವ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ.