ಮೈಸೂರು[ಫೆ.09]: ಉತ್ತಮ ಆಡಳಿತ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲ ಪ್ರಳಯವಾಯಿತು ಎಂದು ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಸಿದ್ದಾರ್ಥ ನಗರದಲ್ಲಿ ನಡೆದ ಕನಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕೃಷ್ಣನನ್ನು ನೋಡಲು ಹೋದ ಕನಕನ ಕಂಡು ಭೂಮಿ ಕಂಪಿಸಿತ್ತು. ಹಾಗೆಯೇ ಒಳ್ಳೆಯ ಕಾರ್ಯಕ್ರಮ ನೀಡಿದ ಸಿದ್ದರಾಮಯ್ಯಗೆ ಜನತೆ ವಿರುದ್ಧವಾಗಿ ವರ್ತಿಸಿದರು ಎಂದರು. ಒಂದು ಕೋಮು ಸಿದ್ದರಾ ಮಯ್ಯಗೆ ಅನ್ಯಾಯ ಮಾಡಿತು.

ಇದೇ ವೇಳೆ ಕುರುಬ ಸಮುದಾಯದ ನಾಯಕರಾದ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಡಿಯೋದಲ್ಲಿ ಕೀಳು ಭಾಷೆ ಬಳಸಿದ್ದಾರೆ. ಹಿರಿಯರಾದ ಯಡಿಯೂರಪ್ಪ ಅವರು ತಮ್ಮ ನಾಲಿಗೆಗೆ ಲಗಾಮು ಹಾಕಿಕೊಳ್ಳಬೇಕೆಂದು ಗೌರವಪೂರ್ವಕವಾಗಿಯೇ ಹೇಳುತ್ತಿದ್ದೇವೆ ಎಂದರು.