ಬೆಂಗಳೂರು[ಅ.07]: ಸಾಮಾನ್ಯವಾಗಿ ಜನರು 'ಬದುಕು, ಇತರರಿಗೂ ಬದುಕಲು ಬಿಡು' ಎಂಬ ವೇದವಾಕ್ಯ ಜಪಿಸುತ್ತಾರೆ. ಆದರೆ ಮಹಿಳೆಯರ ಬಟ್ಟೆಯ ವಿಚಾರ ಬಂದಾಗ ಮಾತ್ರ ರಾಗ ಬದಲಾಗುತ್ತದೆ. ತಾವು ಧರಿಸಿದ ಬಟ್ಟೆಯ ವಿಚಾರವಾಗಿ ಮಹಿಳೆಯರು ಕೇವಲ ಪುರುಷರಿಂದಷ್ಟೇ ಅಲ್ಲ, ಇತರ ಸ್ತ್ರೀಯರ ಕೊಂಕು ನುಡಿಗಳನ್ನು ಆಲಿಸಬೇಕಾಗುತ್ತದೆ. ಇತ್ತೀಚೆಗಷ್ಟೇ 28 ವರ್ಷದ ಓರ್ವ ಯುವತಿ ತಾನು ಧರಿಸಿದ್ದ ಬಟ್ಟೆಯಿಂದಾಗಿ ನಡು ರಸ್ತೆಯಲ್ಲಿ ಶೋಷಣೆಗೀಡಾಗಿದ್ದಾಳೆ. ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ ಎಂಬುವುದು ಉಲ್ಲೇಖನೀಯ.

ಹೌದು ಗುರುವಾರ ರಾತ್ರಿ ಬೆಂಗಳೂರಿನ ಎಚ್‌ಎಸ್‌ಆರ್ ಲೇ ಔಟ್‌ನಲ್ಲಿ ಈ ಘಟನೆ ನಡೆದಿದೆ. ಟೀ ಶರ್ಟ್ ಹಾಗೂ ಶಾರ್ಟ್ಸ್ ಧರಿಸಿದ್ದ ಮಹಿಳಾ ಟೆಕ್ಕಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಅಕೆಯನ್ನು ತಡೆದು, ಆಕೆ ಧರಿಸಿದ್ದ ಬಟ್ಟೆಯ ವಿಚಾರವಾಗಿ ಚಕಾರವೆತ್ತಿದ್ದಾನೆ. ಮಹಿಳೆ ಮೇಲೆ ಕೂಗಾಡಿದ ಆತ 'ನೀನು ಭಾರತೀಯಳಾ? ನಿನ್ನ ಮನೆಯಲ್ಲಿ ಧರಿಸಲು ಬಟ್ಟೆ ಇಲ್ಲವೇ? ದಯವಿಟ್ಟು ಭಾರತದ ನಿಯಮ ಹಾಗೂ ಕಾನೂನನ್ನು ಪಾಲಿಸಿ' ಎಂದಿದ್ದಾನೆ. 

ಆತನ ವರ್ತನೆಯಿಂದ ಕೋಪಗೊಂಡ ಯುವತಿ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾಳೆ. ಕೂಡಲೇ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಹಿಳೆಯ ಗೆಳತಿ ವಿಡಿಯೋ ಚಿತ್ರೀಕರಿಸಿದ್ದು, ಇದನ್ನು ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ 'ಆ ವ್ಯಕ್ತಿ ನಶೆಯಲ್ಲಿರಲಿಲ್ಲ.ನೋಡಲು ಶಿಕ್ಷಿತನಂತಿದ್ದರೂ ನಡು ರಸ್ತೆಯಲ್ಲಿ ನಿಂತು ಬಟ್ಟೆಯ ಬಗ್ಗೆ ಕಮೆಂಟ್ ಮಾಡುತ್ತಿದ್ದ' ಎಂದು ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈತನ ಅಪ್ರಬುದ್ಧ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಿತನೆಂದು ಹೇಳಿಕೊಳ್ಳುವ ಆತ ತಾನು ಯಾವ ರೀತಿಯ ಶಿಕ್ಷಣ ಪಡೆದಿದ್ದೇನೆ ಎಂದು ತನ್ನ ವರ್ತನೆಯಿಂದ ಬಹಿರಂಗ ಪಡೆಸಿದ್ದಾನೆ ಎಂದು ಓರ್ವ ಕಮೆಂಟ್ ಮಾಡಿದ್ದಾನೆ. ಮತ್ತೊಬ್ಬಾತ ಈತ ಖುದ್ದು ಪಾಶ್ಚಿಮಾತ್ಯ ಉಡುಗೆ ಧರಿಸಿದ್ದಾನೆ. ಇಂಗ್ಲೀಷ್ ಮಾತನಾಡುತ್ತಿದ್ದಾನೆ. ಇಂತಹ ವ್ಯಕ್ತಿ ಇತರರಿಗೆ ನೀತಿ ಪಾಠ ಮಾಡುತ್ತಿದ್ದಾನೆ ಎಂದಿದ್ದಾರೆ.

ಇಷ್ಟಾದರೂ ಯುವತಿ ಮಾತ್ರ ಈ ಕುರಿತು ಪೊಲೀಸರಿಗೆ ದೂರು ನೀಡಿಲ್ಲ. ಇದಕ್ಕೆ ಸ್ಪಷ್ಟನೆ ನೀಡಿರುವ ಆಕೆ 'ಪೊಲೀಸರ ಮಾನಸಿಕತೆಯೂ ಅಂತಹುದ್ದೇ. ವರು ಆ ವ್ಯಕ್ತಿಯನ್ನೇ ಸಮರ್ಥಿಸುತ್ತಾರೆ. ಅವರ ಬಳಿ ತೆರಳಿದರೆ ನನಗೇ ಬೇರೆ ಬಟ್ಟೆ ಧರಿಸಲು ಸೂಚಿಸುತ್ತಾರೆ. ಹಿಗಾಗಿ ನಾನು ದೂರು ನೀಡಿಲ್ಲ' ಎಂದಿದ್ದಾರೆ.