Asianet Suvarna News Asianet Suvarna News

Bengaluru Rain: ಬೆಂಗಳೂರಿನಲ್ಲಿ ಅತ್ತ ಮಂಜು- ಇತ್ತ ಮಳೆ...! ಜನರ ಪರದಾಟ

ರಾಜಧಾನಿಯಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಪ್ರತಿ ಅರ್ಧ ಗಂಟೆಯ ಬಿಡುವು ಕೊಟ್ಟು ಮಳೆ ಸುರಿಯಿತ್ತಿದೆ. ಗುರುವಾರ ಬೆಳಗ್ಗೆ ಕಂಡುಬಂದ ಭಾರಿ ಪ್ರಮಾಣದ ಮಂಜು ಮಧ್ಯಾಹ್ನವಾದರೂ ಕರಗುತ್ತಿಲ್ಲ. ಹೀಗಾಗಿ, ಸಿಲಿಕಾನ್‌ ಸಿಟಿ ಜನರು ಅತ್ತ ಮಂಜು - ಇತ್ತ ಮಳೆಯಿಂದ ದಿನನಿತ್ಯ ಕೆಲಸ ಕಾರ್ಯಗಳನ್ನು ಮಾಡಲು ಪರದಾಡುತ್ತಿದ್ದಾರೆ.

Fog and rain in Bangalore People riots
Author
First Published Nov 24, 2022, 8:02 PM IST

ಬೆಂಗಳೂರು (ನ.24): ರಾಜ್ಯ ರಾಜಧಾನಿಯಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಪ್ರತಿ ಅರ್ಧ ಗಂಟೆಯ ಬಿಡುವು ಕೊಟ್ಟು ಮಳೆ ಸುರಿಯಿತ್ತಿದೆ. ಗುರುವಾರ ಬೆಳಗ್ಗೆ ಕಂಡುಬಂದ ಭಾರಿ ಪ್ರಮಾಣದ ಮಂಜು ಮಧ್ಯಾಹ್ನವಾದರೂ ಕರಗುತ್ತಿಲ್ಲ. ಹೀಗಾಗಿ, ಸಿಲಿಕಾನ್‌ ಸಿಟಿ ಜನರು ಅತ್ತ ಮಂಜು - ಇತ್ತ ಮಳೆಯಿಂದ ದಿನನಿತ್ಯ ಕೆಲಸ ಕಾರ್ಯಗಳನ್ನು ಮಾಡಲು ಪರದಾಡುತ್ತಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟಿಸಿದ್ದಕ್ಕೆ ಈಗಾಗಲೇ ರಾಜಧಾನಿಯ ಕೆಲವು ಪ್ರದೇಶಗಳ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಈಗ ಕಳೆದ ಒಂದೂವರೆ ತಿಂಗಳಿಂದ ಹಿಂಗಾರು ಮಳೆ ಆರಂಭವಾಗಿದ್ದು, ಈ ಅವಧಿಯಲ್ಲಿ ಹೆಚ್ಚಾಗಿ ಸೈಕ್ಲೋನ್‌ ರೀತಿಯ ಮಳೆ ಕಂಡುಬರುತ್ತಿದೆ. ಈಗ ಕಳೆದ ಮೂರು ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಎಲ್ಲೆಡೆ ಹಗುರವಾಗಿ ಮಳೆಯಾಗುತ್ತಿದೆ. ಇದರ ಪರಿಣಾಮ ರಾಜಧಾನಿ ಬೆಂಗಳೂರಿನ ಮೇಲೆ ತುಸು ಹೆಚ್ಚಾಗಿಯೇ ಪ್ರಭಾವ ಬೀರುತ್ತಿದೆ. ಹೀಗಾಗಿ, ಗುರುವಾರ ನಸುಕಿನ ಜಾವದಿಂದಲೇ ಜಿಟಿ-ಜಿಟಿ ಮಳೆ ಸುರಿಯುತ್ತಿದ್ದು, ಕಚೇರಿಗಳು ಹಾಗೂ ಇತರೆ ದಿನನಿತ್ಯ ಕೆಲಸ ಕಾರ್ಯಗಳಿಗೆ ಹೋಗುವವರು ಪರದಾಡಿದ ಪ್ರಸಂಗ ಕಂಡುಬಂದಿದೆ.

Karnataka Rain Update: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಮುಂದುವರಿಕೆ

ಮಧ್ಯಾಹ್ನವಾದರೂ ಕರಗದ ಮಂಜು: ಇನ್ನು ಗುರುವಾರ ಬೆಳಗ್ಗೆ ಸಿಲಿಕಾನ್‌ ಸಿಟಿಯ ಎಲ್ಲ ಭಾಗದಲ್ಲಿ ದಟ್ಟ ಮಂಜು ಕವಿದಿತ್ತು. 100 ಮೀ. ದೂರದಲ್ಲಿನ ಯಾವುದೇ ದೃಶ್ಯಗಳನ್ನು ಸರಿಯಾಗಿ ಗುರುತಿಸಲೂ ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯ ನಿವಾಸಿಗಳಿಗೆ ಮಂಜು ಕವಿದ ವಾತಾವರಣ ಮುದ ನೀಡಿದರೆ, ಬೆಳಗಿನ ಜಾವ ದೂರದ ಪ್ರದೇಶಗಳಿಗೆ ಹೋಗುವವರು ಮತ್ತು ಇತರೆ ಕೆಲಸ ಕಾರ್ಯಗಳಿಗೆ ಹೋಗುವಾಗ ವಾಹನ ಓಡಿಸಲು ಸ್ವಲ್ಪ ಸಮಸ್ಯೆಯೂ ಕಂಡುಬಂದಿತು. ಇನ್ನು ಮಧ್ಯಾಹ್ನದವರೆಗೂ ಇದೇ ಮಂಜು ಕರಗದೇ ವಾತಾವರಣ ಬೆಳಕಿಲ್ಲದೇ ಮಂಕಾಗಿತ್ತು. ದಿನವಿಡೀ ಮಳೆ ಸುರಿಯುತ್ತಿದ್ದು, ವ್ಯಾಪಾರ ವಹಿವಾಟು, ಸಂಚಾರ ಮತ್ತು ದಿನನಿತ್ಯ ಕೆಲಸ ಕಾರ್ಯಗಳಿಗೆ ಸಮಸ್ಯೆ ಎದುರಾಯಿತು.

ಇನ್ನೂ ಒಂದು ದಿನ ಮಳೆ: ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕಡೆ ಮುಂದಿನ 24 ಗಂಟೆಗಳ ಕಾಲ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪಾಲಿಕೆ ವ್ಯಾಪ್ತಿಯ 7 ವಲಯಗಳಲ್ಲಿ ಸಾಧಾರಣ ಮಳೆ ಆಗಲಿದೆ. ಯಲಹಂಕ, ದಾಸರಹಳ್ಳಿ, ಬೊಮ್ಮನಹಳ್ಳಿ, ಆರ್ ಆರ್ ನಗರ, ಮಹದೇವಪುರ, ದಕ್ಷಿಣ ವಲಯ, ಪಶ್ಚಿಮ ವಲಯದಲ್ಲಿ ಹಲವು ಕಡೆ ಸಾಧಾರಣ ಮಳೆ ಆಗುತ್ತದೆ. ಉಳಿದಂತೆ ಪೂರ್ವ ವಲಯದಲ್ಲಿ ಸೇರಿದಂತೆ ಬಹುತೇಕ ಕಡೆ ಜಿಟಿ-ಜಿಟಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯಾದ್ಯಂತ ಎರಡು ದಿನ ಹಗುರ ಮಳೆ ಸಾಧ್ಯತೆ

ಬೆಂಗಳೂರು ಅಷ್ಟೇ ಅಲ್ಲ ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು. ಬೆಂಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ವಿಜಯಪುರ ಹಾಗೂ ಹಾವೇರಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ ಎಂದು ಇಲಾಖೆ ವರದಿ ತಿಳಿಸಿದೆ.

Follow Us:
Download App:
  • android
  • ios