ಬೆಂಗಳೂರು(ಜ.11): ನಿಯಮಗಳಲ್ಲಿ ಅವಕಾಶವಿದ್ದರೆ ರಾಜ್ಯದ ಜನರಿಗೆ ವಿಶ್ವಾಸ ಮೂಡಿಸಲು ನಾನೇ ಮೊದಲ ಲಸಿಕೆ ಪಡೆಯುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಭಾನುವಾರ ಲಸಿಕೆ ದಾಸ್ತಾನು ವ್ಯವಸ್ಥೆ ಪರಿಶೀಲನೆ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜನರಲ್ಲಿ ವಿಶ್ವಾಸ ಮೂಡಿಸಲು ನಾನೇ ಮೊದಲು ಲಸಿಕೆ ಪಡೆಯುತ್ತೇನೆ. ಆದರೆ ಅದಕ್ಕೂ ಮೊದಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಟವಾಗಬೇಕು. ಮಾರ್ಗಸೂಚಿಯಲ್ಲಿ ಯಾರಾರ‍ಯರು ಲಸಿಕೆ ಪಡೆಯಬಹುದು ಎಂಬಿತ್ಯಾದಿ ಎಲ್ಲಾ ಅಂಶಗಳೂ ಇರಲಿವೆ ಎಂದು ಹೇಳಿದರು.

ರಾಜ್ಯದಲ್ಲಿ ಸೀರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್‌ ಲಸಿಕೆ ಶೇಖರಣೆಗೆ ವ್ಯವಸ್ಥೆ ಮಾಡಿದ್ದೇವೆ. ಪುಣೆಯಿಂದ ವ್ಯಾಕ್ಸಿನ್‌ ಬರಲಿದ್ದು ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆಯಲ್ಲಿ ದಾಸ್ತಾನು ಮಾಡಲಾಗುವುದು. ಒಂದು ವಯಲ್‌ನಲ್ಲಿ (ಬಾಟಲ್‌) 10 ಮಂದಿಗೆ ನೀಡುವಷ್ಟುಲಸಿಕೆ ಇರುತ್ತದೆ. ಒಂದು ಇಂಜೆಕ್ಷನ್‌ ಡೋಸ್‌ 0.5 ಎಂ.ಎಲ್‌. ಎಂದು ಮಾಹಿತಿ ನೀಡಿದರು.

ವಾರದಲ್ಲಿ ಹೊಸದಾಗಿ 2641 ಮಂದಿಗೆ ಕೊರೋನಾ ಸೋಂಕು

6 ಹಂತಗಳಲ್ಲಿ ಕೋಲ್ಡ್‌ ಚೈನ್‌:

ವ್ಯಾಕ್ಸಿನ್‌ ವಿತರಣೆಗೆ ಕೋಲ್ಡ್‌ ಚೈನ್‌ ಮಾಡಿದ್ದು, ವ್ಯಾಕ್ಸಿನ್‌ ಸಂರಕ್ಷಣೆ ಹಾಗೂ ವಿತರಣೆಗೆ ಆರು ಹಂತಗಳ ಕೋಲ್ಡ್‌ ಚೈನ್‌ ರೂಪಿಸಿದ್ದೇವೆ. ರಾಜ್ಯದ ಬೆಂಗಳೂರು, ಬೆಳಗಾವಿ ಎರಡು ಕಡೆ ರಾಜ್ಯ ಲಸಿಕಾ ದಾಸ್ತಾನು ಕೇಂದ್ರ ಸ್ಥಾಪಿಸಿದ್ದು, ಮುಂಬೈ ಕರ್ನಾಟಕ ಜಿಲ್ಲೆಗಳಿಗೆ ಬೆಳಗಾವಿಯಿಂದ ಹಾಗೂ ಉಳಿದ ಜಿಲ್ಲೆಗಳಿಗೆ ಬೆಂಗಳೂರಿನಿಂದ ಲಸಿಕೆ ವಿತರಣೆಯಾಗಲಿದೆ. ಒಟ್ಟು 5 ಪ್ರಾದೇಶಿಕ ಸಂಗ್ರಹ ವ್ಯವಸ್ಥೆ ಮಾಡಿದ್ದು, ಇವುಗಳಿಂದ ಜಿಲ್ಲಾ ಕೇಂದ್ರಗಳಿಗೆ ರವಾನೆಯಾಗಲಿದೆ ಎಂದರು.