ಚಿಕ್ಕಮಗಳೂರು(ಜ.09): ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದ ವಿವಾದಾತ್ಮಕ ಗೋಹತ್ಯೆ ನಿಷೇಧ ಕಾಯ್ದೆಯಡಿ ಇದೇ ಮೊದಲ ಪ್ರಕರಣ ಚಿಕ್ಕಮಗಳೂರಲ್ಲಿ ದಾಖಲಾಗಿದೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರಿನಿಂದ ಮಂಗಳೂರಿಗೆ ಶೃಂಗೇರಿ ಮಾರ್ಗವಾಗಿ ಶುಕ್ರವಾರ ಬೆಳಗ್ಗಿನ ಜಾವ ಎರಡು ಕಂಟೇನರ್‌ಗಳಲ್ಲಿ ಸಾಗಣೆ ಮಾಡುತ್ತಿದ್ದ 34 ಜಾನುವಾರುಗಳನ್ನು ಇಲ್ಲಿನ ತನಿಕೋಡು ಚೆಕ್‌ ಪೋಸ್ಟ್‌ ಬಳಿ ಯುವಕರ ಗುಂಪು ತಡೆದಿದೆ. ಈ ವೇಳೆ ಒಬ್ಬ ಚಾಲಕ ಪರಾರಿಯಾಗಿದ್ದು, ಮತ್ತೊಬ್ಬ ಚಾಲಕನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಕಂಟೇನರ್‌ ಸಮೇತ ಜಾನುವಾರು ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಕಂಟೇನರ್‌ ಚಾಲಕರ ವಿರುದ್ಧ ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಹಲ್ಲೆಯಿಂದಾಗಿ ಗಾಯಗೊಂಡ ಚಾಲಕ ದಾವಣಗೆರೆ ಅಬಿದ್‌ ಅಲಿ ಅನ್ನು ಶೃಂಗೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಹತ್ಯೆ ನಿಷೇಧ ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣ ಇದಾಗಿದ್ದು, ಕಾಯ್ದೆಯಡಿ ರಾಜ್ಯದಲ್ಲಿ ಹತ್ಯೆಗಾಗಿ ಗೋವು ಮಾರಾಟ, ಸಾಗಣೆ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆರೋಪ ಸಾಬೀತಾದರೆ 3 ರಿಂದ 7 ವರ್ಷ ಜೈಲು ಶಿಕ್ಷೆ, ಜತೆಗೆ .50 ಸಾವಿರದಿಂದ .5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ.