ಕಮಿಷನ್ ಆರೋಪ ಬೆನ್ನಲ್ಲೇ ಬಿಬಿಎಂಪಿ ಲ್ಯಾಬ್‌ಗೆ ಬೆಂಕಿ: ಮುಖ್ಯ ಎಂಜಿನಿಯರ್‌ ಸೇರಿ 9 ಮಂದಿ ಗಂಭೀರ

ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದಲ್ಲಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಲ್ಯಾಬ್‌ ನಲ್ಲಿ ಬೆಂಕಿ ದುರಂತ. ಓವನ್‌ಗೆ ಬೆಂಕಿ ತಗಲಿ ಸ್ಫೋಟ.ಏಕಾಏಕಿ ಲ್ಯಾಬ್‌ಗೆ ಆವರಿಸಿದ ಬೆಂಕಿಗೆ ಸಿಲುಕಿಕೊಂಡ ಮುಖ್ಯ ಎಂಜಿನಿಯರ್‌, ನೌಕರರು.

 

Fire breaks out at a laboratory in BBMP head office in Bengaluru nine injured gow

ಬೆಂಗಳೂರು (ಆ.12): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿರುವ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಪ್ರಯೋಗಾಲಯದ ಮುಖ್ಯ ಅಭಿಯಂತರ ಸೇರಿ 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಸಂಜೆ 5ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಪ್ರಯೋಗಾಲಯದ ಮುಖ್ಯ ಅಭಿಯಂತರ ಶಿವಕುಮಾರ್‌, ಕಾರ್ಯಪಾಲಕ ಎಂಜಿನಿಯರ್‌ಗಳಾದ ಕಿರಣ್‌, ಸಂತೋಷ್‌ ಕುಮಾರ್‌, ವಿಜಯಮಾಲಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶ್ರೀಧರ್‌, ಪ್ರಥಮ ದರ್ಜೆ ಸಹಾಯಕ ಸಿರಾಜ್‌, ಆಪರೇಟರ್‌ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ ಶ್ರೀನಿವಾಸ, ಗಣಕಯಂತ್ರ ನಿರ್ವಾಹಕ ಮನೋಜ್‌ ಗಾಯಗೊಂಡಿದ್ದಾರೆ. ಅವಘಡದಲ್ಲಿ 9 ಮಂದಿಗೂ ಶೇ.35-40ರಷ್ಟುಸುಟ್ಟು ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಛೇರಿ ಲ್ಯಾಬ್‌ನಲ್ಲಿ ಅಗ್ನಿ ದುರಂತ ಪ್ರಕರಣ, ಪ್ರತ್ಯೇಕ ತನಿಖೆಗೆ ಸಿಎಂ ಆದೇಶ

ಏನಿದು ಘಟನೆ?: ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಆನೆಕ್ಸ್‌-2 ಕಟ್ಟಡದಲ್ಲಿ ಗುಣ ನಿಯಂತ್ರಣ ಪ್ರಯೋಗಾಲಯ ಹಾಗೂ ಕಚೇರಿ ಇದೆ. ಇಲ್ಲಿ ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಸ್ತುಗಳ ಗುಣಮಟ್ಟದ ಪರೀಕ್ಷೆ ಮಾಡಲಾಗುತ್ತದೆ. ವೈಜ್ಞಾನಿಕವಾಗಿ ರಾಸಾಯನಿಕಗಳನ್ನು ಬಳಸಿ ವಸ್ತುಗಳ ಗುಣಮಟ್ಟ ಪರೀಕ್ಷಿಸಲಾಗುತ್ತದೆ. ಸಂಜೆ 5 ಗಂಟೆ ಸುಮಾರಿಗೆ ಬೆಂಜಿನ್‌ ರಾಸಾಯನಿಕ ಬಳಸಿ ಪರೀಕ್ಷೆ ಮಾಡುವಾಗ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಈ ವೇಳೆ ಪ್ರಯೋಗಾಲಯದ ಮೂರು ಹಾಟ್‌ ಏರ್‌ ಓವನ್‌ ಪೈಕಿ ಒಂದು ಓವನ್‌ಗೆ ಬೆಂಕಿ ತಾಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಇಡೀ ಪ್ರಯೋಗಾಲಯಕ್ಕೆ ಬೆಂಕಿ ಆವರಿಸಿರುವ ಸಾಧ್ಯತೆಯಿದೆ.

ಸ್ಫೋಟದ ವೇಳೆ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಎಂಜಿನಿಯರ್‌ ಸೇರಿದಂತೆ 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಾಯಗೊಂಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಸಾರ್ವಜನಿಕರು ಹಾಗೂ ನೌಕರರು ಈ 9 ಮಂದಿಯ ನೆರವಿಗೆ ಧಾವಿಸಿ ಮೈ ಮೇಲೆ ನೀರು ಎರಚಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡದ ವಿಚಾರ ತಿಳಿದು ಹಿರಿಯ ಪೊಲೀಸ್‌ ಅಧಿಕಾರಿಗಳು, ಹಲಸೂರು ಗೇಟ್‌ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದರು.

 ಕಮಿಷನ್ ಆರೋಪ ಬೆನ್ನಲ್ಲೇ ಬಿಬಿಎಂಪಿ ಅಗ್ನಿ ದುರಂತ, ಬಿಜೆಪಿ VS ಕಾಂಗ್ರೆಸ್ ಜಟಾಪಟಿ ಶುರು

ಮತ್ತೊಂದೆಡೆ ಕೂಡಲೇ ಆ್ಯಂಬುಲೆನ್ಸ್‌ಗಳನ್ನು ಕರೆಸಿ ಗಾಯಾಳುಗಳನ್ನು ಸಮೀಪದ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಕಳುಹಿಸಲಾಗಿದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ 9 ಮಂದಿಗೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಸಂಬಂಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಡತ, ಕಂಪ್ಯೂಟರ್‌ ಬೆಂಕಿಗಾಹುತಿ: ಪ್ರಯೋಗಾಲಯದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಿಬಿಎಂಪಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳು, ಕಂಪ್ಯೂಟರ್‌ಗಳು ಹಾಗೂ ಪ್ರಾಯೋಗಾಲಯದ ಉಪಕರಣಗಳು, ಪೀಠೋಪಕರಣಗಳಿಗೆ ಹಾನಿಯಾಗಿದೆ. ಎಷ್ಟುಕಡತ, ಯಾವ ಕಾಮಗಾರಿಗೆ ಸಂಬಂಧಿಸಿದ ಕಡತಗಳು ಬೆಂಕಿಗಾಹುತಿಯಾಗಿವೆ ಎಂಬುದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳೇ ಮಾಹಿತಿ ನೀಡಬೇಕಿದೆ.

ಎಫ್‌ಎಸ್‌ಎಲ್‌ ತಂಡ ಭೇಟಿ: ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಗುಣ ನಿಯಂತ್ರಣ ಪ್ರಯೋಗಾಲಯಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌)ದ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಬೆಂಕಿಯಿಂದ ಸುಟ್ಟಿರುವ ಕೆಲ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕೊಂಡೊಯ್ದರು.

ರಕ್ತ ಸೋರುತ್ತಿತ್ತು: ಪ್ರತ್ಯಕ್ಷದರ್ಶಿ

ಸಂಜೆ 4.45ರ ಸುಮಾರಿಗೆ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ವೇಳೆ ಇಬ್ಬರು ಮಹಿಳೆಯರು ಸೇರಿದಂತೆ 9 ಮಂದಿ ಬೆಂಕಿಗೆ ಸಿಲುಕಿ ಚೀರಾಡುತ್ತಾ ಹೊರಗೆ ಬಂದರು. ಈ ವೇಳೆ ನಾವೆಲ್ಲ ಅವರ ಮೇಲೆ ನೀರು ಹಾಕಿ ಬೆಂಕಿ ನಂದಿಸಿದೆವು. ಹಲವರ ಮುಖ, ಕೈಗಳಿಂದ ರಕ್ತ ಸೋರುತ್ತಿತ್ತು. ಗಾಯಾಳುಗಳು ಕೈಗಳನ್ನು ಮಡಿಚಲು ಕಷ್ಟಪಡುತ್ತಿದ್ದರು ಎಂದು ಘಟನೆಯ ಪ್ರತ್ಯಕ್ಷದರ್ಶಿ ಕಮಲಮ್ಮ ಮಾಹಿತಿ ನೀಡಿದರು.

ಬೆಂಕಿ ಅವಘಡದಲ್ಲಿ ಗುಣ ನಿಯಂತ್ರಣ ಪ್ರಯೋಗಾಲಯದ ಏಳು ಮಂದಿ ಹಾಗೂ ಮೇಲಿನ ಕಚೇರಿಯಲ್ಲಿ ಇಬ್ಬರು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಸದ್ಯಕ್ಕೆ ತಿಳಿದಿಲ್ಲ. ಬೆಂಜಿನ್‌ ರಾಸಾಯನಿಕ ಬಳಸಿ ಪ್ರಯೋಗ ಮಾಡುವಾಗ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಹೆಚ್ಚಿನ ತನಿಖೆಯಿಂದ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ.

-ಸತೀಶ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ(ಪಶ್ಚಿಮ)

 

Latest Videos
Follow Us:
Download App:
  • android
  • ios