* ಸಚಿವ, ಇನ್ನಿಬ್ಬರು ಆಪ್ತರ ವಿರುದ್ಧ ಉಡುಪಿ ಠಾಣೆಯಲ್ಲಿ ಎಫ್‌ಐಆರ್‌* ಸಂತೋಷ್‌ ಆತ್ಮಹತ್ಯೆ ಕೇಸ್‌: ಈಶ್ವರಪ್ಪ ಆರೋಪಿ ನಂ.1* ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಸಾಬೀತಾದರೆ 10 ವರ್ಷ ಜೈಲು

ಉಡುಪಿ(ಏ.14): ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಗ್ರಾಮೀ​ಣಾ​ಭಿ​ವೃದ್ಧಿ ಸಚಿವ ಕೆ.ಎ​ಸ್‌.​ಈ​ಶ್ವ​ರಪ್ಪ ಸೇರಿ ಮೂವರ ವಿರುದ್ಧ ಎಫ್‌​ಐ​ಆರ್‌ ದಾಖ​ಲಾ​ಗಿ​ದೆ.

ರಸ್ತೆ ಕಾಮ​ಗಾರಿಯ ಹಣ ಬಿಡು​ಗಡೆ ಮಾಡಿಲ್ಲ ಎಂದು ಆರೋಪಿಸಿ ಗ್ರಾಮೀ​ಣಾ​ಭಿ​ವೃದ್ಧಿ ಸಚಿವ ಕೆ.ಎ​ಸ್‌.​ಈ​ಶ್ವ​ರಪ್ಪ ಹೆಸರು ಬರೆ​ದಿಟ್ಟು ಬೆಳ​ಗಾವಿ ಗುತ್ತಿ​ಗೆ​ದಾರ ಸಂತೋಷ್‌ ಪಾಟೀಲ್‌ ಸೋಮ​ವಾರ ರಾತ್ರಿ ಉಡು​ಪಿಯ ಲಾಡ್ಜ್‌​ನಲ್ಲಿ ಆತ್ಮ​ಹತ್ಯೆ ಮಾಡಿ​ಕೊಂಡಿ​ದ್ದ​ರು. ಈ ಸಂಬಂಧ ಸಂತೋಷ್‌ ಪಾಟೀಲ್‌ ಸಹೋದರ ಸಂಬಂಧಿ ಪ್ರಶಾಂತ್‌ ಪಾಟೀಲ್‌ ನೀಡಿದ ದೂರಿನ ಆಧಾ​ರದ ಮೇಲೆ ಪೊಲೀ​ಸರು ಎಫ್‌​ಐ​ಆರ್‌ ದಾಖ​ಲಿ​ಸಿ​ಕೊಂಡಿದ್ದಾರೆ.

ಪ್ರಕ​ರ​ಣ​ದಲ್ಲಿ ಈಶ್ವ​ರಪ್ಪ ಅವರು ಮೊದಲ ಆರೋ​ಪಿ(ಎ1)​ ಹಾಗೂ ಅವರ ಆಪ್ತ​ರಾದ ಬಸ​ವ​ರಾಜ್‌ ಮತ್ತು ರಮೇಶ್‌ ಅವ​ರನ್ನು ಕ್ರಮ​ವಾಗಿ ಎರ​ಡು ಮತ್ತು ಮೂರನೇ ಆರೋ​ಪಿ​ಗ​ಳೆಂದು ಎಫ್‌​ಐ​ಆ​ರ್‌​ನ​ಲ್ಲಿ ಉಲ್ಲೇಖಿ​ಸ​ಲಾ​ಗಿ​ದೆ. ಮೂವರೂ ಆರೋ​ಪಿ​ಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್‌ 306ರಡಿ ಮತ್ತು 34ರಡಿ ಪ್ರಕರಣ ದಾಖಲಾಗಿದೆ. ಸೆಕ್ಷನ್‌ 306 ಅಂದರೆ ಆತ್ಮಹತ್ಯೆಗೆ ಮಾನಸಿಕವಾಗಿ ಕುಮ್ಮಕ್ಕು ಅಥವಾ ಪ್ರಚೋದನೆ ನೀಡುವುದು ಅಥವಾ ಅಂಥ ಪರಿಸ್ಥಿತಿಯನ್ನು ಸೃಷ್ಟಿಸುವುದು. ಈ ಸೆಕ್ಷನ್‌ನಡಿ ಅಪರಾಧ ಸಾಬೀತಾದರೆ ಗರಿಷ್ಠ 10 ವರ್ಷಗಳ ಜೈಲು ಮತ್ತು ದಂಡ ವಿಧಿಸುವ ಅವಕಾಶ ಇದೆ. ಇನ್ನು ಸೆಕ್ಷನ್‌ 34 ಕ್ರಿಮಿನಲ್‌ ಕೃತ್ಯ ನಡೆಸುವ ಉದ್ದೇಶದಿಂದ ಅನೇಕ ಮಂದಿ ಸೇರಿ ಮಾಡಿದ ಷಡ್ಯಂತ್ರ. ಈ ಆರೋಪ ಇತರ ಆರೋಪಗಳ ಜೊತೆ ದಾಖಲಾಗುವುದರಿಂದ, ಶಿಕ್ಷೆಯ ಪ್ರಮಾಣ ನ್ಯಾಯಾಲಯ ನಿರ್ಧರಿಸುತ್ತದೆ.

ಸಂಪುಟದಿಂದ ಸಚಿವ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್‌ ಆಗ್ರಹ

ಗುತ್ತಿಗೆದಾರ ಸಂತೋಷ್‌ ಕೆ. ಪಾಟೀಲ್‌ ಅವರ ಆತ್ಮಹತ್ಯೆಗೆ ಕಾರಣರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್‌ ರಾಜ್ಯಪಾಲರನ್ನು ಆಗ್ರಹಿಸಿದೆ. ಈ ಸಂಬಂಧ ಕಾಂಗ್ರೆಸ್‌ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಂತೋಷ್‌ ಕೆ. ಪಾಟೀಲ್‌ ಅವರು ಓರ್ವ ಗುತ್ತಿಗೆದಾರ ಮತ್ತು ಹಿಂದೂ ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿ. ಅವರು ಮಂಗಳವಾರ ಉಡುಪಿಯ ಶಾಂಭವಿ ಹೊಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರೇ ನೇರ ಹೊಣೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆತ್ಮಹತ್ಯೆಗೆ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಆತ್ಮಹತ್ಯೆಗೆ ನೇರ ಹೊಣೆಯಾಗಿದ್ದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಅವರ ಸಹಚರರು ಎಸಗಿದ ನಿರಂತರ ಕಿರುಕುಳ ಮತ್ತು ಕ್ರೌರ್ಯವು ಆತ್ಮಹತ್ಯೆಗೆ ಪ್ರಚೋದನೆಯಾಗಿದೆ. ಒಬ್ಬ ವ್ಯಕ್ತಿಯ ಜೀವ ಅಮೂಲ್ಯವಾದುದು. ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಯಾವುದೇ ರೀತಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಅತಿಕ್ರಮಣವನ್ನು ತಡೆಗಟ್ಟಲು ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಕಲ್ಪಿಸಲಾಗಿದೆ. ಒಬ್ಬ ವ್ಯಕ್ತಿಗೆ ಅಗತ್ಯವಾದ ಎಲ್ಲಾ ಮಾನವ ಹಕ್ಕುಗಳನ್ನು ನೀಡಲಾಗಿದೆ. ಅನುಚ್ಚೇದ-21 ರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಮಾನವ ಹಕ್ಕುಗಳನ್ನು ಸಂರಕ್ಷಿಸಲು ಸಾಂವಿಧಾನಿಕ ಆಜ್ಞೆಯಾಗಿದೆ. ಮೃತ ಸಂತೋಷ್‌ ಪಾಟೀಲ್‌ ಪ್ರಕರಣದಲ್ಲಿ ಕೆ.ಎಸ್‌.ಈಶ್ವರಪ್ಪ ಅವರು ಈ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೇಶದ ಹಿತಾಸಕ್ತಿ ಕಾಪಾಡಲು ನಾನು ಚೌಕಿದಾರ್‌ ಮತ್ತು ’ನಾ ಖಾವೂಂಗಾ, ನಾ ಖಾನೆ ದುಂಗಾ’ (ನಾನು ತಿನ್ನುವುದಿಲ್ಲ ಮತ್ತು ಇತರರಿಗೆ ಲಂಚ ತಿನ್ನಲು ಬಿಡುವುದಿಲ್ಲ) ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಮಂತ್ರಿಗಳು ಮತ್ತು ಸಂಬಂಧಪಟ್ಟವರು, ಕೇಂದ್ರ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರು ಮೃತ ವ್ಯಕ್ತಿಗೆ ಪರಿಹಾರ ನೀಡಲು ವಿಫಲರಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಮಂತ್ರಿಮಂಡಲದಿಂದ ಕೆ.ಎಸ್‌.ಈಶ್ವರಪ್ಪ ಅವರನ್ನು ವಜಾಗೊಳಿಸಬೇಕು. ಕೆ.ಎಸ್‌.ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್‌ ಕೆ.ಪಾಟೀಲ್‌ ಅವರು ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನಹರಿಸುವಂತೆ ಸಂಬಂಧಪಟ್ಟಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಬೇಕು. ಐಪಿಸಿ ಸೆಕ್ಷನ್‌- 306 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌-13 ಮತ್ತು ಕಾನೂನಿನ ಇತರ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಕ್ರಿಮಿನಲ್‌ ಮೊಕದ್ದಮೆಯನ್ನು ತಕ್ಷಣವೇ ದಾಖಲಿಸಬೇಕು. ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಕೆ.ಎಸ್‌.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.