ಅನ್ಯಕೋಮಿನ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ಸ್ವಾಮೀಜಿ ಮೇಲೆ ಎಫ್‌ಐಆರ್ ಖಂಡನೀಯ; ಜೆಡಿಎಸ್
ಮತದಾನದ ಹಕ್ಕು ತೆಗೆಯುವ ಹೇಳಿಕೆ ನೀಡಿ ನಂತರ ಹಿಂಪಡೆದ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಜೆಡಿಎಸ್ ಖಂಡಿಸಿದೆ. ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು (ನ.29): ರಾಜ್ಯದಲ್ಲಿ ವಕ್ಫ್ ಮಂಡಳಿ ಹೆಸರಿನಲ್ಲಿ ರೈತರ ಭೂಮಿಯನ್ನು ಕಿತ್ತುಕೊಳ್ಳುತ್ತಿರುವ ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ತೆಗೆಯಬೇಕು ಎಂದು ಮಾತನಾಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ಅವರು ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. ಆದರೂ, ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಕೇಸು ದಾಖಲಿಸಿ ಎಫ್‌ಐಆರ್ ಹಾಕಿರುವುದು ಖಂಡಿತಾ ತಪ್ಪು ಎಂದು ಜೆಡಿಎಸ್ ಪಕ್ಷದಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಕುರಿತು ಜೆಡಿಎಸ್ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಅದರಲ್ಲಿ 'ಕ್ಷಮೆಯಾಚಿಸಿದ ಸ್ವಾಮೀಜಿ ಮೇಲೆ ಎಫ್‌ಐಆರ್ ಖಂಡನೀಯ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. ಆದರೂ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಕೇಸು ದಾಖಲಿಸಿ ಎಫ್‌ಐಆರ್ ಹಾಕಿರುವುದು ಖಂಡಿತಾ ತಪ್ಪು. ತಮ್ಮ ಹೇಳಿಕೆಯಿಂದ ಬೇಸರವಾಗಿದ್ದರೆ ವಿಷಾದವಿದೆ ಎಂದು ಪೂಜ್ಯರು ಹೇಳಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಕೈಬಿಡಿ ಎಂದು ಕೋರಿದ್ದಾರೆ.
ಇದನ್ನೂ ಓದಿ: ಶಾಸಕ ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ: ರೇಣುಕಾಚಾರ್ಯ ವಾಗ್ದಾಳಿ
ಆದರೆ, ಒಕ್ಕಲಿಗ ವಿರೋಧಿ ಸಿದ್ದರಾಮಯ್ಯ ಅವರು ಮತ್ತು ಕಾಂಗ್ರೆಸ್ ಸರ್ಕಾರ, ಸಮುದಾಯದ ಸ್ವಾಮೀಜಿಗಳ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. ಈ ಸರಕಾರ ಒಕ್ಕಲಿಗರ ವಿರುದ್ಧ ವಿಷ ಕಾರುತ್ತಿರುವುದು ಇದೇ ಮೊದಲಲ್ಲ. ಒಕ್ಕಲಿಗ ವಿರೋಧಿ ಕಾಂಗ್ರೆಸ್ ಸರಕಾರದ ನಡೆಗೆ ನಮ್ಮ ಧಿಕ್ಕರವಿದೆ. ಶ್ರೀಗಳ ಮೇಲೆ ದಾಖಲಿಸಿರುವ ಎಫ್‌ಐಆರ್ ವಿಚಾರವಾಗಿ ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗ ಮಂತ್ರಿಗಳು ಮತ್ತು ಶಾಸಕರು ಜಾಣಮೌನಕ್ಕೆ ಶರಣಾಗಿರುವುದು ನಾಚಿಕೆಗೇಡು ಎಂದು ಕಿಡಿಕಾರಲಾಗಿದೆ.
ಪ್ರತಿಯೊಂದಕ್ಕೂ ನಾಲಿಗೆ ಹರಿಯಬಿಡುವ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಚೆಲುವರಾಯ ಸ್ವಾಮಿ, ಕೃಷ್ಣಭೈರೇಗೌಡ ಅವರು ಮುಗುಮ್ಮಾಗಿ ಮೌನಕ್ಕೆ ಒಳಗಾಗಿ ಸಮುದಾಯ ಚಂದ್ರಶೇಖರ ಸ್ವಾಮೀಜಿ ಅವರನ್ನು ರಾಜ್ಯ ಸರ್ಕಾರದಿಂದ ಅಪಮಾನಿಸುತ್ತಿದ್ದರೂ ಸುಮ್ಮನಿರುವುದು ಅಕ್ಷಮ್ಯ. ಜಾಣಮೌನ ಕುಲದ್ರೋಹಿಗಳ ಗುಣ. ಇಂಥವರಿಗೆ ಮುಂದಿನ ದಿನಗಳಲ್ಲಿ ಒಕ್ಕಲಿಗ ಕುಲಭಾಂದವರು ತಕ್ಕಪಾಠ ಕಲಿಸುವುದು ನಿಶ್ಚಿತ ಎಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ.