ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಆ.06): ನಗರದಲ್ಲಿ  ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ 770 ಜನರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದರೊಂದಿಗೆ 145 ಮಂದಿಯನ್ನು ಹೋಂ ಕ್ವಾರಂಟೈನ್‌ನಿಂದ ಸಾಂಸ್ಥಿಕ ಕ್ವಾರಂಟೈನ್‌ಗೆ ವರ್ಗಾಯಿಸಲಾಗಿದೆ.

ಕೊರೋನಾ ಸೋಂಕು ನಿಯಂತ್ರಣ ಮಾಡುವ ಉದ್ದೇಶದಿಂದ ಸೋಂಕಿನ ಶಂಕೆ ಮತ್ತು ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ. ನಗರಕ್ಕೆ ಹೊರ ದೇಶ-ರಾಜ್ಯದಿಂದ ಆಗಮಿಸಿದರು ಮತ್ತು ಕೊರೋನಾ ಸೋಂಕು ದೃಢಪಟ್ಟವರೊಂದಿಗೆ ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕದಲ್ಲಿರುವವರಿಗೆ ಕ್ವಾರಂಟೈನ್‌ ಮುದ್ರೆ ಹಾಕಿ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ. ಆದರೆ, ನಗರದಲ್ಲಿ ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಮನೆಯಿಂದ ಹೊರ ಬಂದ 770 ಮಂದಿಯ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬೆಂಗ​ಳೂರು: KSRTC ಬಸ್ ನಿಲ್ದಾ​ಣ​​ವಾಯ್ತು ಕೊರೋನಾ ಸೆಂಟರ್‌..!

145 ಮಂದಿ ಸಾಂಸ್ಥಿಕ ಕ್ವಾರಂಟೈನ್‌:

ಈ ರೀತಿ ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ 145 ಮಂದಿಗೆ ಹೋಂ ಕ್ವಾರಂಟೈನ್‌ ರದ್ದು ಪಡಿಸಿ ಸಾಂಸ್ಥಿಕ ಕ್ವಾರಂಟೈನ್‌ಗೆ ಹಾಕಲಾಗಿದೆ. ಈ ರೀತಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿವವರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವಷ್ಟುದಿನ ಊಟ, ವಸತಿ ಸೇರಿದಂತೆ ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ಆ ವ್ಯಕ್ತಿಯಿಂದಲೇ ವಸೂಲಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

15 ಸಾವಿರಕ್ಕೂ ಅಧಿಕ ಮಂದಿಗೆ ಎಚ್ಚರಿಕೆ:

ಹೋಂ ಕ್ವಾರಂಟೈನ್‌ನಲ್ಲಿ ಇರುವವರಿಗೆ ನಿಗಾ ವಹಿಸುವುದಕ್ಕೆ ಬಿಬಿಎಂಪಿ ಸ್ವಯಂ ಸೇವಕರು, ಅಧಿಕಾರಿ ಸಿಬ್ಬಂದಿ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ಹೋಂ ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ವಹಿಸಲಾಗುತ್ತದೆ. ಆದರೂ ಕಣ್ತಪ್ಪಿಸಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ಸುಮಾರು 15 ಸಾವಿರಕ್ಕೂ ಅಧಿಕ ಮಂದಿಗೆ ಎಚ್ಚರಿಕೆ ನೀಡಲಾಗಿದೆ. ಎಚ್ಚರಿಕೆ ನಂತರವೂ ಎಚ್ಚೆತ್ತುಕೊಳ್ಳದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಹೋಂ ಕ್ವಾರಂಟೈನ್‌ನಿಂದ ಕೆಲವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಸ್ಥಳಾಂತರಿಸಲಾಗಿದೆ.

ಒಟ್ಟು 3.17 ಲಕ್ಷ ಮಂದಿ ಕ್ವಾರಂಟೈನ್‌

ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಭೀತಿ ಆರಂಭವಾದ ನಂತರ ಕೊರೋನಾ ಸೋಂಕಿತರೊಂದಿಗೆ ಪ್ರಾಥಮಿಕ 1,40,212, ಪರೋಕ್ಷ ಸಂಪರ್ಕ ಹೊಂದಿದ 1,77,749 ಸೇರಿ ಒಟ್ಟು 3,17,961 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಒಟ್ಟು 1,43,348 ಮಂದಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಹೋಂ ಕ್ವಾರಂಟೈನ್‌ನಲ್ಲಿ ಇರುವವರ ನಿಗಾ ವಹಿಸುವುದಕ್ಕೆ ವಿಡಿಯೋ ಕಾಲ್‌, ಮನೆಗೆ ಭೇಟಿ ನೀಡಿ ಪರಿಶೀಲನೆ ಸೇರಿದಂತೆ ಹಲವಾರು ವಿಧಾನಗಳನ್ನು ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಲಾಗುತ್ತದೆ. ಎಚ್ಚೆತ್ತುಕೊಳ್ಳದ 770 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ವಿಶೇಷ ಆಯುಕ್ತರು ಹೋಂ ಕ್ವಾರಂಟೈನ್‌ ಉಸ್ತುವಾರಿ ಅಧಿಕಾರಿ ಮಂಜುನಾಥ ಜಿ ಅವರು ತಿಳಿಸಿದ್ದಾರೆ.

ವಲಯವಾರು ಹೋಂ ಕ್ವಾರಂಟೈನ್‌ ವಿವರ

ವಲಯ ಪ್ರಾಥಮಿಕ ಪರೋಕ್ಷ ಒಟ್ಟು

ದಕ್ಷಿಣ 34,124 75,300 1,09,424
ಪೂರ್ವ 28,113 28,955 59,609
ಪಶ್ಚಿಮ 31,088 30,179 61,267
ಬೊಮ್ಮನಹಳ್ಳಿ 10,627 8,426 19,053
ಯಲಹಂಕ 6,896 7,695 14,591
ಆರ್‌.ಆರ್‌.ನಗರ 10,566 6,748 17,314
ಮಹದೇವಪುರ 8,663 9,660 18,323
ದಾಸರಹಳ್ಳಿ 8,553 9,797 18,380
ಒಟ್ಟು 1,40,212 1,77,749 3,17,961