ರಾಜ್ಯದಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಸಾಂಕೇತಿಕವಾಗಿ ನಡೆಸುವುದು ಒಳ್ಳೆಯದು ಎಂಬ ಅಭಿಪ್ರಾಯ ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ವ್ಯಕ್ತವಾಗಿದೆ.
ಕನಕಪುರ (ಜ. 9): ರಾಜ್ಯದಲ್ಲಿ ಕೋವಿಡ್ (Covid 19) ಉಲ್ಬಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆಯನ್ನು (Mekedatu Padayatre) ಸಾಂಕೇತಿಕವಾಗಿ ನಡೆಸುವುದು ಒಳ್ಳೆಯದು ಎಂಬ ಅಭಿಪ್ರಾಯ ಶನಿವಾರ ನಡೆದ ಕಾಂಗ್ರೆಸ್ (Congress) ಶಾಸಕಾಂಗ ಸಭೆಯಲ್ಲೂ ವ್ಯಕ್ತವಾಗಿದೆ. ಆದರೆ, ಕೊನೇ ಕ್ಷಣದಲ್ಲಿ ಇಂತಹ ನಿರ್ಧಾರ ಕೈಗೊಂಡರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಈಗಾಗಲೇ ಯೋಜಿಸಿರುವಂತೆಯೇ ಪಾದಯಾತ್ರೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಈ ಮಧ್ಯೆ, ಅಗತ್ಯಬಿದ್ದರೆ ಪಾದಯಾತ್ರೆ ವಿಚಾರದಲ್ಲಿ ಯಾವುದೇ ಸಂದರ್ಭದಲ್ಲಿ ಬದಲಾವಣೆ ಮಾಡುವ ಅಗತ್ಯ ಕಂಡು ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿ ಎಂದು ಸಭೆ ಅಧಿಕಾರ ನೀಡಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:Mekedatu Padayatra, ಮೇಕೆದಾಟು ಪಾದಯಾತ್ರೆ, ಡಿಕೆಶಿಗೆ ರಾಮನಗರ ಎಸ್‌ಪಿ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕನಕಪುರದ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಯಿತು. ಈ ವೇಳೆ, ಮಾಜಿ ಸಚಿವ ಕೆ.ಜೆ.ಜಾಜ್‌ರ್, ಎಂ.ಬಿ.ಪಾಟೀಲ್ ಅವರು ರಾಜ್ಯದ ಎಲ್ಲೆಡೆ ಕೋವಿಡ್ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ನಡೆಸಿ ಸೋಂಕು ಹೆಚ್ಚಾದರೆ ಕಾಂಗ್ರೆಸ್ ಅನ್ನೇ ಹೊಣೆ ಮಾಡುತ್ತಾರೆ. ಇದರಿಂದ ಪಕ್ಷಕ್ಕೆ ಕೆಟ್ಟಹೆಸರು ಬರುತ್ತದೆ. ಹಾಗಾಗಿ ಈ ವೇಳೆ ಪಾದಯಾತ್ರೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮುಂದೂಡುವುದು ಒಳ್ಳೆಯದು ಎಂದು ಆಗ್ರಹಿಸಿದರು ಎನ್ನಲಾಗಿದೆ.
ಇದಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದು, ಸಾಂಕೇತಿಕ ಪಾದಯಾತ್ರೆಯಂತಹ ನಿರ್ಧಾರ ಕೈಗೊಳ್ಳುವ ಕಾಲ ಮುಗಿದು ಹೋಗಿದೆ. ಈಗ ಹೋರಾಟವೊಂದೇ ದಾರಿ. ನಿರ್ಧಾರ ಬದಲಿಸಿದರೆ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ನೀರಿಗೆ ಇಳಿದಾಗಿದೆ. ನಿರ್ಧಾರ ಬದಲಿಸಲಾಗದು. ಕೋವಿಡ್ ನಿಯಮ ಅನುಸರಿಸಿ ಪಾದಯಾತ್ರೆ ನಡೆಸಬೇಕು ಎಂದರು ಎನ್ನಲಾಗಿದೆ.
ಇದನ್ನೂ ಓದಿ:Mekedatu Project: ರೂಲ್ಸ್ ಮೀರಿ ಸಭೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ: ಆರಗ
ಆಗ ಕೆಲ ಸದಸ್ಯರು ಒಂದು ವೇಳೆ ಪಾದಯಾತ್ರೆಯ ವೇಳೆ ಕೋವಿಡ್ ತೀವ್ರತೆ ಅಪಾಯದ ಹಂತ ತಲುಪಿದರೆ ಆಗ ಪಕ್ಷಕ್ಕೆ ಕೆಟ್ಟಹೆಸರು ಬರುವುದಿಲ್ಲವೇ ಎಂದು ಪ್ರಶ್ನೆ ಎತ್ತಿದ್ದಾರೆ. ಇಷ್ಟೆಲ್ಲಾ ಚರ್ಚೆಯ ಬಳಿಕವೂ ಸಾಂಕೇತಿಕ ಪಾದಯಾತ್ರೆಯಂತಹ ನಿರ್ಧಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳುವುದು ಒಳ್ಳೆಯದಲ್ಲ. ಯಾವುದೇ ಸಂದರ್ಭದಲ್ಲಿ ಅಗತ್ಯವೆನಿಸಿದರೆ ಪಾದಯಾತ್ರೆ ಮೊಟಕು, ಬದಲಾವಣೆ ಸೇರಿದಂತೆ ಯಾವುದೇ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರು ಸೇರಿ ತೆಗೆದುಕೊಳಲಿ ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಾದಯಾತ್ರೆ ಸಿದ್ಧತೆಗಳು ಪೂರ್ಣ:
ಕಾಂಗ್ರೆಸ್ ಪಕ್ಷದ ವತಿಯಿಂದ ಮೇಕೆದಾಟು ಯೋಜನೆ ಶೀಘ್ರ ಆರಂಭಿಕ್ಕಾಗಿ ನಡೆಯುತ್ತಿರುವ ಪಾದಯಾತ್ರೆಗೆ ಕನಕಪುರ ತಾಲೂಕಿನ ಸಂಗಮ ಬಳಿಯಿಂದ ತಾಲೂಕಿನ ಗಡಿಭಾಗ ಚಿಕ್ಕೇನಹಳ್ಳಿಯವರಿಗೆ ಸಕಲ ಸಿದ್ಧತ ಮಾಡಿಕೊಳ್ಳಲಾಗಿದೆ.ರಾಜ್ಯದ ಮೂಲೆ ಮೂಲೆಗಳಿಂದ ಪಾದಯಾತ್ರೆಗೆ ಆಗಮಿಸುವ ಪಕ್ಷದ ಮುಖಂಡರು ಹಾಗೂ ಕಾರ್ಯ ಕಾರ್ಯಕರ್ತರಿಗೆ ತಿಂಡಿ, ಊಟದ ವ್ಯವಸ್ಥೆ ಜೊತೆಗೆ ದಾರಿಯುದ್ದಕ್ಕೂ ನೀರು, ಪಾನಕ, ಮಜ್ಜಿಗೆ ನೀಡಲು ಸ್ಥಳೀಯ ಗ್ರಾಮದ ಮುಖಂಡರು ಹಾಗೂ ಯೂತ್ ಕಾಂಗ್ರೆಸ್ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಪಾದಯಾತ್ರೆ ಸಾಗುವ ರಸ್ತೆಯ ಅಕ್ಕ-ಪಕ್ಕಬೆಳಿದಿದ್ದ ಗಿಡ-ಗಂಟೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿ ಯಾವುದೇ ತೊಂದರೆ ಆಗದಂತೆ ನೋಡಿ ಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಾದಯಾತ್ರೆಯಲ್ಲಿ ಭಾಗವಹಿಸುವ ಜನರ ಅನುಕೂಲಕ್ಕಾಗಿ ರಸ್ತೆಯ ಬದಿಯಲ್ಲಿ ಶೌಚಾಲಯ ಗಳನ್ನು ನಿರ್ಮಿಸಿದ್ದು ಪಾದಯಾತ್ರೆ ಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ರಾತ್ರಿ ವಾಸ್ತವ್ಯಕ್ಕೆ ತಾಲೂಕಿನಲ್ಲಿರುವ ಸಮುದಾಯ ಭವನಗಳು ಹಾಗೂ ನಗರದ ಆರ್‌ಇಎಸ್ ಸಂಸ್ಥೆಯ ಆವರಣದಲ್ಲಿ ಸಕಲ ಸೌಕರ್ಯ ಗಳೊಂದಿಗೆ ವ್ಯವಸ್ಥೆ ಮಾಡಲಾಗಿದೆ.
